ಬೆಂಗಳೂರು: ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ನಟಿ ಸಾಯಿ ಪಲ್ಲವಿ ನಟನೆಯ ‘ರಾಮಾಯಣ’ ಸಿನಿಮಾ ಎರಡು ಭಾಗಗಳಾಗಿ ತೆರೆ ಮೇಲೆ ಬರಲಿದ್ದು, ಅವುಗಳ ಅಧಿಕೃತ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ಸಿನಿಮಾದಲ್ಲಿ ನಟ ಯಶ್ ರಾವಣನಾಗಿ ಕಾಣಸಿಕೊಂಡಿದ್ದಾರೆ.

ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ‘ದಂಗಲ್’ ಸಿನಿಮಾ ಖ್ಯಾತಿಯ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶಿಸುತ್ತಿದ್ದು, ಯಶ್ ಒಡೆತನದ ‘ಮಾಸ್ಟರ್‌ಮೈಂಡ್ ಕ್ರಿಯೇಷನ್ಸ್’ ಮತ್ತು ನಮಿತ್ ಮಲ್ಲೋತ್ರಾ ಸಾರಥ್ಯದ ‘ಪ್ರೈಮ್ ಫೋಕಸ್ ಸ್ಟುಡಿಯೊ’ ಚಿತ್ರ ನಿರ್ಮಾಣ ಜವಾಬ್ದಾರಿಯನ್ನು ತೆಗೆದುಕೊಂಡಿದೆ.

ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ, ‘ರಾಮಾಯಣ’ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದೆ. ಭಾಗ -1-2026ರ ದೀಪಾವಳಿಯಂದು ಬಿಡುಗಡೆಯಾದರೆ, ಭಾಗ- 2 2027 ದೀಪಾವಳಿಗೆ
ಬಿಡುಗಡೆಯಾಗಲಿದೆ ಎಂದು ತಿಳಿಸಿದೆ.

 

ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನಾಗಿ ಕಾಣಿಸಿಕೊಂಡರೆ, ಸಾಯಿಪಲ್ಲವಿ ಸೀತೆಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಯಶ್ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದರು.

ಬಾಲಿವುಡ್ ನಟಿ ಲಾರಾ ದತ್ತಾ ಕೈಕೇಯಿ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಸನ್ನಿ ದೇವೊಲ್ ಹನುಮಂತನಾಗಿ, ಶಿಬಾ ಛಡ್ಡಾ ಮಂತರೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಣಬೀ‌ರ್ ಮತ್ತು ಸಾಯಿಪಲ್ಲವಿ ರಾಮಾ- ಸೀತೆಯ ಕಾಸ್ಟೋಮ್‌ನಲ್ಲಿ ಕಾಣಿಸಿಕೊಂಡಿರುವ ಫೋಟೊಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.