ಬೆಳಗಾವಿ: ಬಿಜೆಪಿ ಹಿರಿಯ ಶಾಸಕರಾಗಿರುವ ಬಸನಗೌಡ ಪಾಟೀಲ ಯತ್ನಾಳ ಮತ್ತು ರಮೇಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಬಿಜೆಪಿಯ ಘಟಾನುಘಟಿ ನಾಯಕರು ಬೆಳಗಾವಿ ಬಳಿ ಕಿಣಿಯೇ ರೆಸಾರ್ಟ್ ನಲ್ಲಿ ಭಾನುವಾರ ಮಹತ್ವದ ಸಭೆ ನಡೆಸಿರುವುದು ಇದೀಗ ಬಿಜೆಪಿ ಪಾಳಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಆದರೆ, ಸಭೆ ನಡೆಸಿದ ನಂತರ ಪತ್ರಕರ್ತರ ಜತೆ ಮಾತನಾಡಿರುವ, ಸಭೆಯಲ್ಲಿ ಪಾಲ್ಗೊಂಡ ಬಿಜೆಪಿ ನಾಯಕರು, ಇದು ಭಿನ್ನಮತೀಯ ಚಟುವಟಿಕೆಯಲ್ಲ. ಬಿಜೆಪಿಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ನಡೆಸಿರುವ ಮಹತ್ವದ ಸಭೆಯೆಂದು ತಾವು ನಡೆಸಿರುವ ಮಾತುಕತೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಈ ನಡುವೆ ಮುಂದಿನ ದಿನಗಳಲ್ಲಿ ಬಿಜೆಪಿಯ ಇನ್ನಷ್ಟು ಹಿರಿಯ ನಾಯಕರು ತಮ್ಮ ಗುಂಪಿಗೆ ಸೇರಿಕೊಳ್ಳಬಹುದು ಹಾಗೂ ಬೆಂಬಲ ಸೂಚಿಸಬಹುದು ಎಂಬ ಹೊಸ ಆಶಾವಾದವನ್ನು ಈ ನಾಯಕರು ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ನಡೆಸಿವೆ. ಇದಕ್ಕೆ ಪರ್ಯಾಯವಾಗಿ ಇದೀಗ ಯತ್ನಾಳ ಮತ್ತು ಜಾರಕಿಹೊಳಿ ನೇತೃತ್ವದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನ ದುರ್ಬಳಕೆಗೆ ಸಂಬಂಧಿಸಿ ಆಡಳಿತರೂಢ ಕಾಂಗ್ರೆಸ್ ಸರಕಾರದ ಧೋರಣೆ ಖಂಡಿಸಿ ಕೂಡಲಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಲಿದ್ದಾರೆ. ಗಣೇಶ ಚತುರ್ಥಿ ಚತುರ್ಥಿ ನಂತರ ಈ ಪಾದಯಾತ್ರೆಗೆ ಇವರು ಯೋಜನೆ ಸಿದ್ಧಪಡಿಸಿದ್ದಾರೆ. ಪಾದಯಾತ್ರೆಗೂ ಮುನ್ನ ಬಿಜೆಪಿ ವರಿಷ್ಠರ ಜೊತೆ ಮಾತುಕತೆ ನಡೆಸಲು ತೀರ್ಮಾನಿಸಿರುವ ಈ ನಾಯಕರು ಬೆಂಗಳೂರಿನಲ್ಲಿ ಮತ್ತೊಂದು ಮಹತ್ವದ ಸಭೆ ನಡೆಸಲು ಮುಂದಾಗಿರುವುದು ಹೊಸ ಬೆಳವಣಿಗೆ.

ಮುಡಾ ಪಾದಯಾತ್ರೆ ಮೈಸೂರಿಗೆ ಸೀಮಿತ. ಆದರೆ, ನಾವು ನಡೆಸುವ ಹೋರಾಟ ಕರ್ನಾಟಕಕ್ಕೆ ಸಂಬಂಧಿಸಿದೆ. ಇದಕ್ಕೆ ಕೇಂದ್ರದ ನಾಯಕರನ್ನು ಸಹಾ ಕರೆಸುವ ಚಿಂತನೆ ಇದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದಾರೆ. ಇಂದಿನ ಸಭೆಯಲ್ಲಿ ಶಾಸಕರಾದ ರಮೇಶ ಜಾರಕಿಹೊಳಿ, ಬಸನಗೌಡ ಪಾಟೀಲ ಯತ್ನಾಳ, ಮಾಜಿ ಸಂಸದರಾದ ಅಣ್ಣಾ ಸಾಹೇಬ್ ಜೊಲ್ಲೆ, ಪ್ರತಾಪ ಸಿಂಹ, ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವರಾದ ಕುಮಾರ ಬಂಗಾರಪ್ಪ, ಅರವಿಂದ ಲಿಂಬಾವಳಿ ಮತ್ತಿತರರು ಪಾಲ್ಗೊಂಡಿದ್ದರು.