ಬೆಳಗಾವಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದೆ. ದಿನಕ್ಕೊಂದು ಹಗರಣ ಬೆಳಕಿಗೆ ಬರುತ್ತಿದೆ. ಚುನಾವಣೆಗೆ ಒಂದೇ ದಿನ ಇರುವಾಗ ವಾಲ್ಮೀಕಿ ನಿಗಮದ 50 ಕೋಟಿ ರೂ. ವರ್ಗಾವಣೆಗೊಂಡಿದೆ. ಬಳ್ಳಾರಿ ಮಾತ್ರವಲ್ಲ, ಅಮೇಠಿಗೂ ವಾಲ್ಮೀಕಿ ನಿಗಮದ ಹಣ ಹೋಗಿದೆ. ಕಾಂಗ್ರೆಸಿನವರಿಗೆ ಇದರ ಭಯ ಇದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪ ಮಾಡಿದರು.
ಬೆಳಗಾವಿಯಲ್ಲಿ ಪತ್ರಕರ್ತರ ಜೊತೆ ರವಿವಾರ ಮಾತನಾಡಿದ ಅವರು, ರಾಜ್ಯ ಸರಕಾರದ ಭ್ರಷ್ಟಾಚಾರದ ಬಗ್ಗೆ ಹೇಳುವುದೇ ಬೇಡ. ದಿನದಿಂದ ದಿನಕ್ಕೆ ಭ್ರಷ್ಟಾಚಾರದ ಹಗರಣಗಳು ಹೊರ ಬರುತ್ತಿವೆ. ಮೂಡಾದಲ್ಲಿ ದಲಿತರ ದಲಿತರ ಜಮೀನಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಷ್ಟು ಸರ್ಕಸ್ ಮಾಡಿದ್ದಾರೆ. ಕೇವಲ 3 ಎಕರೆ ಜಮೀನು ಸಲುವಾಗಿ ಅವರು ಇಡೀ ಅಯುಷ್ಯದಲ್ಲಿ ಗಳಿಸಿದ್ದ ಒಳ್ಳೆ ಹೆಸರನ್ನು ಕಳೆದುಕೊಂಡಿದ್ದಾರೆ. ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ ನಾಯಕ ನಾನು ಎನ್ನುತ್ತಿದ್ದರು. ಆದರೆ, ಅದೆಲ್ಲ ಕಳಚಿ ಬಿದ್ದಿದೆ. ಸೋಮವಾರದಿಂದ ಮತ್ತೆ ಆರಂಭವಾಗಲಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತುತ್ತೇವೆ ಎಂದು ಅವರು ಹೇಳಿದರು.
ಬಿಜೆಪಿ ಹಗರಣ ನಡೆಸಿದೆ, ಶೇಕಡಾ 40 ರಷ್ಟು ಕಮಿಷನ್ ಪಡೆದಿದ್ದಾರೆ ಎಂದು ಕಾಂಗ್ರೆಸ್ಸಿಗರು ಆರೋಪಿಸುತ್ತಿದ್ದರು. ಆದರೆ, ಇದೀಗ ಕಾಂಗ್ರೆಸ್ ಪಕ್ಷ 100 ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಇಷ್ಟು ದಿನ ಬೇಕಿತ್ತೇ ? ಪ್ರಮಾಣವಚನ ಸ್ವೀಕರಿಸಿದ ಮರುದಿನ ತನಿಖೆ ನಡೆಸಲು ಮುಂದಾಗಬೇಕಾಗಿತ್ತು. ಈ ಬಗ್ಗೆ ಸ್ವತಃ ತನಿಖೆ ನಡೆಸುವಂತೆ ಮಾಜಿ ಮುಖ್ಯಮಂತ್ರಿ , ಸಂಸದ ಬಸವರಾಜ ಬೊಮ್ಮಾಯಿಯವರೇ ಆಗ್ರಹಿಸಿದ್ದಾರೆ. ಬಳ್ಳಾರಿ ಲೋಕಸಭಾ ಚುನಾವಣೆಗೆ ವಾಲ್ಮೀಕಿ ನಿಗಮದ ಹಣ ಹೋಗಿದೆ. ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ನಾನು ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದೆ. ಅದರಂತೆ ತಕ್ಷಣ ಕ್ರಮ ಆಗಿದೆ. ಸಿಬಿಐಗೆ ಹೋಗಿ ಇದೀಗ ಇಡಿ ಬಂದಿದೆ. ಎಲ್ಲಾ ಆಯಮದಲ್ಲೂ ತನಿಖೆ ಆಗಲಿದೆ ಎಂದು ಅವರು ಹೇಳಿದರು.
ರಾಜ್ಯ ರಾಜಕಾರಣದಲ್ಲಿ ಬಹಳಷ್ಟು ಕಾಂಗ್ರೆಸ್ ಶಾಸಕರು ಮೊನ್ನೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸರಕಾರದ ವಿರುದ್ಧ ಆರೋಪ ಮಾಡಿದ್ದಾರೆ. ಕೆಲವು ಮಂತ್ರಿಗಳು ಶಾಸಕರಿಗೆ ಗೌರವ ಕೊಡುವುದಿಲ್ಲ, ಕೆಲಸಕ್ಕಾಗಿ ಹೋದರೆ ಮಾತನಾಡಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಅಭಿವೃದ್ಧಿಗೆ ಗ್ಯಾರಂಟಿ ಬೆನ್ನು ಹತ್ತಬೇಡಿ, ಗ್ಯಾರಂಟಿ ಸಲುವಾಗಿ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದೆವು, ಆದರೆ, ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮೋದಿಯವರಿಗೆ ಜನ ಆಶೀರ್ವದಿಸಿದ್ದಾರೆ ಎಂದು ಸಾಕಷ್ಟು ಕಾಂಗ್ರೆಸ್ ಶಾಸಕರು ಅಂದಿನ ಸಭೆಯಲ್ಲಿ ಟೀಕಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಜು ಕಾಗೆಯವರೇ ಜಗಳ ಮಾಡಿದ್ದಾರೆ. ಇದನ್ನೆಲ್ಲ ಗಮನಿಸಿದರೆ ಈ ಸರಕಾರ ಬಹಳ ದಿನ ಬಾಳದು ಎಂದು ಅವರು ಭವಿಷ್ಯ ನುಡಿದರು.
ಬಿಜೆಪಿ ಸೋಲಿಗೆ ಒಳ ಒಪ್ಪಂದ ನಡೆದಿದೆ ಎಂದು ಆರೋಪ ಮಾಡಿದ ಅವರು, ದಾವಣಗೆರೆ, ಬೀದರ್, ಕಲಬುರ್ಗಿ, ಕೊಪ್ಪಳ, ರಾಯಚೂರು, ಚಾಮರಾಜನಗರ ಮುಂತಾದಡೆ ಒಳ ಒಪ್ಪಂದ ಆಗಿದೆ. ಕಾಂಗ್ರೆಸ್ ಪಕ್ಷದ ಶಾಮನೂರು ಶಿವಶಂಕರಪ್ಪ ಶಿವಮೊಗ್ಗದಲ್ಲಿ ರಾಘವೇಂದ್ರ ಅವರಿಗೆ ಮತ ಹಾಕಿ ಎಂದಿದ್ದಾರೆ. ಆದರೆ, ನಾನು ಮಾತ್ರ ಯಾವುದೇ ಕಾರಣಕ್ಕೆ ಒಳ ಒಪ್ಪಂದ ಮಾಡಿಕೊಳ್ಳಲಾರೆ , ಸಿದ್ದರಾಮಯ್ಯ ಅವರಿಗೆ ರಾತ್ರಿ ಫೋನ್ ಮಾಡುವ ವ್ಯಕ್ತಿಯೂ ನಾನಲ್ಲ ಎಂದು ಅವರು ತಮ್ಮ ಪಕ್ಷದ ನಾಯಕರಿಗೆ ಟಾಂಗ್ ನೀಡಿದರು.
ನಾನು ಈ ಹಿಂದೆ ಉಪಮುಖ್ಯಮಂತ್ರಿ
ಡಿ.ಕೆ. ಶಿವಕುಮಾರ್ ಅವರ ವಿರುದ್ಧ ನೀಡಿರುವ ದೂರಿನ ಜಡ್ಜ್ ಮೆಂಟ್ 15 ದಿನದಲ್ಲಿ ಬರಲಿದೆ. ಅವರು ಮತ್ತೆ ತಿಹಾರ್ ಜೈಲಿಗೆ ಹೋಗಬೇಕಾಗುತ್ತದೆ ಎಂದು ಅವರು ಹೇಳಿದರು.ಬಿಜೆಪಿ ಮತ್ತು ಕಾಂಗ್ರೆಸ್ಸಿನ ಎಲ್ಲವೂ ತನಿಖೆ ಆಗಬೇಕು. ಎರಡು ಕಡೆ ಸ್ವಚ್ಚವಾಗಬೇಕು. ಮೋದಿ ಅವರ ನೇತೃತ್ವದ ಬಿಜೆಪಿ ಮೊದಲು ಸ್ವಚ್ಛವಾಗಬೇಕು ಎನ್ನುವುದು ನನ್ನ ಆಗ್ರಹವಾಗಿದೆ. ನಾನು ಇದ್ದದ್ದನ್ನು ಇದ್ದಂತೆ ಹೇಳುವೆ, ನನ್ನ ಮತದಾರರು ನೀವು ಹೀಗೆ ಇರಬೇಕು ಎನ್ನುತ್ತಾರೆ. ಅದರಂತೆ ನಾನು ಇರುವೆ. ಮುಖ್ಯಮಂತ್ರಿಯಾಗುವ ಅವಸರ ನನಗಿಲ್ಲ ಎಂದು ಹೇಳಿದರು.