ಹರಾರೆ : ನಾಲ್ಕು ದಶಕಗಳ ನಂತರ ಕಾಣಿಸಿಕೊಂಡ ಭೀಕರ ಬರಗಾಲದ ನಂತರ ತೀವ್ರ ಹಸಿವಿನಿಂದ ಬಳಲುತ್ತಿರುವ ಸಮುದಾಯಗಳಿಗೆ ಆಹಾರವನ್ನು ನೀಡಲು ಜಿಂಬಾಬ್ವೆ ತನ್ನ ದೇಶದ 200 ಆನೆಗಳನ್ನು ಸಾಯಿಸಲು ಯೋಜಿಸಿದೆ ಎಂದು ವನ್ಯಜೀವಿ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಎಲ್ ನಿನೊ-ಪ್ರೇರಿತ ಭೀಕರ ಬರಗಾಲವು ಆಫ್ರಿಕಾದ ದಕ್ಷಿಣದ ದೇಶಗಳ ಬೆಳೆಗಳನ್ನು ಸಂಪೂರ್ಣವಾಗಿ ಹಾನಿಗೊಳಿಸಿದೆ ಮತ್ತು ಈ ಪ್ರದೇಶದಾದ್ಯಂತ ಆಹಾರದ ಕೊರತೆಯನ್ನು ಉಂಟುಮಾಡಿದೆ. ನೈಸರ್ಗಿಕ ಘೋರ ವಿಪತ್ತಿನ ಈ ಸಮಯದಲ್ಲಿ ಜನರ ಜೀವವನ್ನು ಉಳಿಸಲು ಮತ್ತು ಅವರಿಗೆ ಆಹಾರ ಪೂರೈಸಲು ಆನೆಗಳನ್ನು ಹತ್ಯೆ ಮಾಡುವುದಕ್ಕೆ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಬುಧವಾರ ಜಿಂಬಾಬ್ವೆ ಸಂಸತ್ತಿನಲ್ಲಿ “ಜಿಂಬಾಬ್ವೆ ಅಗತ್ಯಕ್ಕಿಂತ ‘ಹೆಚ್ಚು ಆನೆಗಳನ್ನು’ ಹೊಂದಿದೆ” ಎಂದು ಪರಿಸರ ಸಚಿವರು ಹೇಳಿದ್ದಾರೆ. 200 ಆನೆಗಳ ಹತ್ಯೆಯ ಬಗ್ಗೆ ಸರ್ಕಾರ ಜಿಂಬಾಬ್ವೆ ಉದ್ಯಾನವನಗಳು ಮತ್ತು ವನ್ಯಜೀವಿ ಪ್ರಾಧಿಕಾರಕ್ಕೆ (ಜಿಂಪಾರ್ಕ್ಸ್) ಸೂಚನೆ ನೀಡಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

“ನಾವು ದೇಶಾದ್ಯಂತ ಸುಮಾರು 200 ಆನೆಗಳನ್ನು ಸಾಯಿಸಲುಯೋಜಿಸುತ್ತಿದ್ದೇವೆ ಎಂದು ನಾವು ಖಚಿತಪಡಿಸಬಹುದು. ನಾವು ಅದನ್ನು ಹೇಗೆ ಮಾಡಲಿದ್ದೇವೆ ಎಂಬುದರ ಕುರಿತು ನಾವು ನಿರ್ದಿಷ್ಟ ವಿಧಾನಗಳಲ್ಲಿ ಕೆಲಸ ಮಾಡುತ್ತಿದ್ದೇವೆ ”ಎಂದು ಜಿಂಬಾಬ್ವೆ ಉದ್ಯಾನವನಗಳು ಮತ್ತು ವನ್ಯಜೀವಿ ಪ್ರಾಧಿಕಾರ (ಜಿಂಪಾರ್ಕ್ಸ್) ವಕ್ತಾರ ಟಿನಾಶೆ ಫರಾವೊ ರಾಯಿಟರ್ಸ್‌ಗೆ ತಿಳಿಸಿದ್ದಾರೆ. ಬರಗಾಲದಿಂದ ಪ್ರಭಾವಿತವಾದ ಜಿಂಬಾಬ್ವೆಯ ಜನರಿಗೆ ಈ ಆನೆಗಳ ಮಾಂಸವನ್ನು ವಿತರಿಸಲಾಗುವುದು ಎಂದು ಅವರು ಹೇಳಿದ್ದಾರೆ.
1988ರ ನಂತರ ದೇಶದಲ್ಲಿ ಮೊದಲನೆಯದಾದ ಈ ಭೀಕರ ಬರಗಾಲವು ಕಲ್, ಹ್ವಾಂಗೆ, ಎಮ್ಬೈರ್, ಟ್ಶೊಲೊಟ್ಶೊ ಮತ್ತು ಚೈರೆಡ್ಜಿ ಮೊದಲಾದ ಜಿಲ್ಲೆಗಳಲ್ಲಿ ಭೀಕರವಾಗಿದೆ. 83 ಆನೆಗಳನ್ನು ಸಾಯಿಸಲು ಮತ್ತು ಬರಗಾಲದಿಂದ ಪ್ರಭಾವಿತರಾದ ಜನರಿಗೆ ಮಾಂಸವನ್ನು ವಿತರಿಸಲು ಕಳೆದ ತಿಂಗಳು ನೆರೆಯ ನಮೀಬಿಯಾದ ನಿರ್ಧಾರ ತೆಗೆದುಕೊಂಡಿತ್ತು. ಈಗ ಜಿಂಬಾಬ್ವೆ ಅದರ ಹೆಜ್ಜೆಯನ್ನು ಅನುಸರಿಸುತ್ತಿದೆ.

ದಕ್ಷಿಣ ಆಫ್ರಿಕಾದ ಐದು ದೇಶಗಳಾದ ಜಿಂಬಾಬ್ವೆ, ಜಾಂಬಿಯಾ, ಬೋಟ್ಸ್ವಾನ, ಅಂಗೋಲಾ ಮತ್ತು ನಮೀಬಿಯಾ ಸಂರಕ್ಷಣಾ ಪ್ರದೇಶದಲ್ಲಿ 2,00,000 ಕ್ಕೂ ಹೆಚ್ಚು ಆನೆಗಳು ವಾಸಿಸುತ್ತಿವೆ ಎಂದು ಅಂದಾಜಿಸಲಾಗಿದೆ. ಈ ಪ್ರದೇಶ ವಿಶ್ವದಾದ್ಯಂತ ಅತಿದೊಡ್ಡ ಆನೆಗಳ ಸಂಖ್ಯೆಗಳನ್ನು ಹೊಂದಿರುವ ಪ್ರದೇಶವಾಗಿದೆ.
ಜಿಂಬಾಬ್ವೆಯ ಕಲ್ಲಿಂಗ್ ಪ್ರದೇಶವು ತನ್ನ ಸಂರಕ್ಷಣಾ ಪ್ರದೇಶದಲ್ಲಿ 55,000 ಆನೆಗಳನ್ನು ಮಾತ್ರ ಉಳಿಸಿಕೊಳ್ಳಬಲ್ಲದು ಎಂದು ಫರಾವೊ ಹೇಳಿದರು. ಜಿಂಬಾಬ್ವೆ 84,000 ಕ್ಕೂ ಹೆಚ್ಚು ಆನೆಗಳ ನೆಲೆಯಾಗಿದೆ. ಅಂತಹ ತೀವ್ರ ಬರಗಾಲ ಕಾಣಿಸಿಕೊಂಡಾಗ ಸಂಪನ್ಮೂಲಗಳು ಕೊರತೆಯಾಗುತ್ತಿದ್ದಂತೆ ಮಾನವ-ವನ್ಯಜೀವಿ ಸಂಘರ್ಷಗಳು ಉಲ್ಬಣಗೊಳ್ಳುತ್ತವೆ. ಕಳೆದ ವರ್ಷ ಜಿಂಬಾಬ್ವೆಯಲ್ಲಿ ಆನೆ ದಾಳಿಗೆ 50 ಜನರು ಸಾವಿಗೀಡಾಗಿದ್ದಾರೆ.

200 ಆನೆಗಳ ಹತ್ಯೆ ಹೇಗೆ ನಡೆಯುತ್ತದೆ?
ದಿ ಗಾರ್ಡಿಯನ್ ನೀಡಿದ ವರದಿಯಲ್ಲಿ, ಕೊಲ್ಲಲ್ಪಡುವ 200 ಆನೆಗಳು ಮಾನವ ಸಂಪರ್ಕಕ್ಕೆ ಬರುವ ಪ್ರದೇಶಕ್ಕೆ ಸೇರಿವೆ. ಈ ಪ್ರದೇಶಗಳಲ್ಲಿ ಜಿಂಬಾಬ್ವೆಯ ಅತಿದೊಡ್ಡ ನೈಸರ್ಗಿಕ ರಿಸರ್ವ್‌ ಪ್ರದೇಶವಿದೆ ಎಂದು ಜಿಂಪಾರ್ಕ್ಸ್‌ನ ಮಹಾನಿರ್ದೇಶಕರಾದ ಫುಲ್ಟನ್ ಮಾಂಗ್ವನ್ಯಾ ಹೇಳಿದ್ದಾರೆ.
ನಮೀಬಿಯಾ ಮಾಡಿದ್ದನ್ನು ಅನುಸರಿಸಲು ನಾವು ಜಿಂಪಾರ್ಕ್ಸ್ ಮತ್ತು ಕೆಲವು ಸಮುದಾಯಗಳೊಂದಿಗೆ ಚರ್ಚೆ ನಡೆಸುತ್ತಿದ್ದೇವೆ, ಇದರಿಂದಾಗಿ ನಾವು ಆನೆಗಳನ್ನು ಸಾಯಿಸಿದ ನಂತರ ಮಾಂಸವನ್ನು ಒಣಗಿಸಲು, ಅದನ್ನು ಪ್ಯಾಕೇಜ್ ಮಾಡಲು ಮಹಿಳೆಯರನ್ನು ಬಳಸಿಕೊಳ್ಳುತ್ತೇವೆ. ನಂತರ ಅಗತ್ಯವಿರುವ ಕೆಲವು ಸಮುದಾಯಗಳಿಗೆ ಈ ಮಾಂಸ ಸಿಗುವಂತೆ ಮಾಡುತ್ತೇವೆ ಎಂದು ಜಿಂಬಾಬ್ವೆಯ ಪರಿಸರ ಸಚಿವ ಸಿಥೆಂಬಿಸೊ ನ್ಯೋನಿ ಅವರು ವಾಯ್ಸ್ ಆಫ್ ಅಮೆರಿಕಕ್ಕೆ ಹೇಳಿದ್ದಾರೆ.

ಜಿಂಬಾಬ್ವೆಯಲ್ಲಿ ಇಂತಹ ತೀವ್ರ ತರಹದ ಕ್ರಮ ಏಕೆ ತೆಗೆದುಕೊಳ್ಳಲಾಗುತ್ತಿದೆ?
ಜಿಂಬಾಬ್ವೆ ಆನೆಗಳಿಗೆ ಹೆಸರುವಾಸಿಯಾಗಿದೆ ಏಕೆಂದರೆ ಇದು ಆಫ್ರಿಕಾದಲ್ಲಿ ಆನೆಗಳ ಅತಿದೊಡ್ಡ ಸಂಖ್ಯೆಯನ್ನು ಹೊಂದಿದ ದೇಶವಾಗಿದೆ. ಈ ದೇಶವು ಸುಮಾರು 1,00,000 ಆನೆಗಳ ನೆಲೆಯಾಗಿದೆ, ಹೆಚ್ಚಾಗಿ ರಾಷ್ಟ್ರೀಯ ಉದ್ಯಾನವನಗಳಾದ ಹ್ವಾಂಗೆ ಮತ್ತು ಗೊನರೆಝೌ ಪ್ರದೇಶಗಳಲ್ಲಿ ಕಂಡುಬರುತ್ತದೆ.
ಈ ಭವ್ಯ ಜೀವಿಗಳನ್ನು ಕಾಡಿನಲ್ಲಿ ನೋಡಲು ವಿಶ್ವದಾದ್ಯಂತದ ಪ್ರವಾಸಿಗರು ಜಿಂಬಾಬ್ವೆಗೆ ಭೇಟಿ ನೀಡುತ್ತಾರೆ. ಆದರೆ ಇದೇವೇಳೆ ಅಂತಹ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಆನೆಯ ಸಂಖ್ಯೆಗಳನ್ನು ನಿರ್ವಹಿಸುವಲ್ಲಿ ಜಿಂಬಾಬ್ವೆ ಸವಾಲುಗಳನ್ನು ಎದುರಿಸುತ್ತಿದೆ.
ವಿಶ್ವಸಂಸ್ಥೆ ಅಂದಾಜಿನ ಪ್ರಕಾರ, ಜಿಂಬಾಬ್ವೆಯ 42%ರಷ್ಟು ಜನರು ಬಡತನದಿಂದ ಬಳಲುತ್ತಿದ್ದಾರೆ, ಆಹಾರದ ಕೊರತೆಯಿರುವ ತಿಂಗಳುಗಳಲ್ಲಿ ಜನರಿಗೆ ಆಹಾರ ಪೂರೈಕೆಯ ಅಗತ್ಯವಿರುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಕಳೆದ ತಿಂಗಳು 160 ವನ್ಯಪ್ರಾಣಿಗಳನ್ನು ಕೊಲ್ಲುವ ಮೂಲಕ ನೆರೆಯ ದೇಶವಾದ ನಮೀಬಿಯಾ ಇದೇ ರೀತಿಯ ಹೆಜ್ಜೆ ಇಟ್ಟಿದೆ. ದಶಕದ ಭೀಕರ ಬರಗಾಲವನ್ನು ಎದುರಿಸಲು ಒಟ್ಟು 700 ವನ್ಯಪ್ರಾಣಿಗಳ ಯೋಜಿತ ಹತ್ಯೆಯಲ್ಲಿ 83 ಆನೆಗಳು ಸೇರಿವೆ.
ಹವಾಮಾನ ಬಿಕ್ಕಟ್ಟಿನ ಮಧ್ಯೆ ಜಿಂಬಾಬ್ವೆ ತನ್ನ ವನ್ಯಜೀವಿಗಳ ಸಂರಕ್ಷಣೆ ಮತ್ತು ಮಾನವ ಅಗತ್ಯತೆಗಳ ಸಂಪನ್ಮೂಲ ನಿರ್ವಹಣೆಯ ಮಿತಿಗಳನ್ನು ಪರೀಕ್ಷಿಸುವ ಸವಾಲನ್ನು ಎದುರಿಸುತ್ತಿದೆ.