ಬೆಳಗಾವಿ :
“ಕೃಷ್ಣಾ ಭಾಗ್ಯ ಜಲ ನಿಗಮದ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕಲಬುರ್ಗಿ, ಯಾದಗಿರಿ ಮತ್ತು ಬೀದರ್ ಜಿಲ್ಲೆಗಳ 6 ನೀರಾವರಿ ಯೋಜನೆಗಳಲ್ಲಿ ಮೂರು, ಕರ್ನಾಟಕ ನೀರಾವರಿ ನಿಗಮದ ಅಡಿಯಲ್ಲಿ 11 ಯೋಜನೆಗಳು ಪೂರ್ಣಗೊಂಡಿವೆ” ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರ ಪರವಾಗಿ ಸಚಿವ ರಾಮಲಿಂಗಾರೆಡ್ಡಿ ಅವರು ವಿಧಾನ ಪರಿಷತ್ ನಲ್ಲಿ ಗುರುವಾರ ತಿಳಿಸಿದರು.

ವಿಧಾನ ಪರಿಷತ್ ನಲ್ಲಿ ಪ್ರಶನೋತ್ತರ ಕಲಾಪದಲ್ಲಿ ತಳವಾರ ಸಾಬಣ್ಣ ಅವರು, “ಕಲ್ಯಾಣ ಕರ್ನಾಟಕ ಭಾಗದ ಕಲಬುರ್ಗಿ, ಬೀದರ್ ಮತ್ತು ಯಾದಗಿರಿ ವ್ಯಾಪ್ತಿಯಲ್ಲಿರುವ ಮಧ್ಯಮ ಮತ್ತು ಬೃಹತ್ ನೀರಾವರಿ ಯೋಜನೆಗಳು ಮತ್ತು ಈ ಯೋಜನೆಗಳಿಗೆ ಕಳೆದ 5 ವರ್ಷಗಳಲ್ಲಿ ಮಾಡಿದ ವೆಚ್ಚ, ಕಾಲುವೆಗಳ ದುಸ್ಥಿತಿ ಸೇರಿದಂತೆ ಅಧಿಕಾರಿಗಳ, ಗುತ್ತಿಗೆದಾರರ ವಂಚನೆ” ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

“ಎರಡು ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಗೆಜೆಟ್ ತಯಾರಾಗಬೇಕು. ಈ ವೇಳೆ ಆಂಧ್ರ ಮತ್ತು ತೆಲಂಗಾಣ ರಾಜ್ಯದವರು ಗೆಜೆಟ್ ತಯಾರಿಸದಂತೆ ನ್ಯಾಯಲಯದ ಮೊರೆ ಹೋದ ಕಾರಣ ಕೆಲಸ ಮುಂದುವರೆದಿಲ್ಲ. ಬೂದಿಹಾಳ- ವೀರಾಪುರ ಏತ ನೀರಾವರಿ ಯೋಜನೆ ವಿಸ್ತರಣೆ ಕಾರ್ಯ ಪ್ರಗತಿಯಲ್ಲಿದೆ” ಎಂದು ಹೇಳಿದರು.

“ಕಲ್ಯಾಣ ಕರ್ನಾಟಕ ಭಾಗದ ಕಲಬುರ್ಗಿ, ಬೀದರ್ ಮತ್ತು ಯಾದಗಿರಿ ವ್ಯಾಪ್ತಿಯ ಕೃಷ್ಣ ಜಲಭಾಗ್ಯ ನಿಗಮದ ಯೋಜನೆಗಳಿಗೆ 1,306 ಕೋಟಿ ಹಣವನ್ನು ಕಳೆದ 5 ವರ್ಷದಲ್ಲಿ ವೆಚ್ಚ ಮಾಡಲಾಗಿದೆ. ಕರ್ನಾಟಕ ನೀರಾವರಿ ನಿಗಮದ 11 ಯೋಜನೆಗಳಿಗೆ ಕಳೆದ 5 ವರ್ಷದಲ್ಲಿ 489 ಕೋಟಿ ಹಣ ವೆಚ್ಚ ಮಾಡಲಾಗಿದೆ” ಎಂದು ತಿಳಿಸಿದರು.

“ಹೂಳು, ಅವಶ್ಯಕ ದುರಸ್ತಿ ಸೇರಿದಂತೆ ನೀರು ಹರಿಸಲು ಬೇಕಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ಎಲ್ಲಾ ಟೆಂಡರ್ ಗಳನ್ನು ಈ- ಪ್ರಕ್ಯೂರ್ಮೆಂಟ್ ಮೂಲಕವೇ ಪಾರದರ್ಶಕವಾಗಿ ಮಾಡಲಾಗಿದೆ. ಗುಣಮಟ್ಟ ಖಾತರಿಗೂ ಆದ್ಯತೆ ನೀಡಲಾಗಿದ್ದು, ಯಾವುದೇ ಗುತ್ತಿಗೆದಾರರಿಗೆ ನೇರವಾಗಿ ಕಾಮಗಾರಿಗಳನ್ನು ನೀಡುತ್ತಿಲ್ಲ” ಎಂದರು.