ಹೈದರಾಬಾದ್:
ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥ ಅನುಮುಲಾ ರೇವಂತ ರೆಡ್ಡಿ ಅವರು ಇಂದು, ಗುರುವಾರ ರಾಜ್ಯದ ಎರಡನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಹೈದರಾಬಾದ್‌ನ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸುಮಾರು 1 ಲಕ್ಷ ಜನಸಮೂಹದ ಮುಂದೆ ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಅವರು ರೇವಂತ ರೆಡ್ಡಿ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ರೆಡ್ಡಿ ಅವರ ಜೊತೆಗೆ ಅವರ ಸಂಪುಟದ 11 ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯದ ಉಪಮುಖ್ಯಮಂತ್ರಿಯಾಗಿ ಭಟ್ಟಿ ವಿಕ್ರಮಾರ್ಕ ಮಲ್ಲು ಪ್ರಮಾಣ ವಚನ ಸ್ವೀಕರಿಸಿದರು.

ದಾಮೋದರ ರಾಜ ನರಸಿಂಹ, ಉತ್ತಮಕುಮಾರ ರೆಡ್ಡಿ, ಕೋಮಟಿ ರೆಡ್ಡಿ ವೆಂಕಟ ರೆಡ್ಡಿ, ಸೀತಕ್ಕ, ಪೊನ್ನಂ ಪ್ರಭಾಕರ, ಶ್ರೀಧರ ಬಾಬು, ತುಮ್ಮಲ ನಾಗೇಶ್ವರ ರಾವ್, ಕೊಂಡ ಸುರೇಖಾ, ಜೂಪಲ್ಲಿ ಮತ್ತು ಕೃಷ್ಣ ಪೊಂಗುಲೇಟಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ 10 ಮಂದಿ ನಾಯಕರಾಗಿದ್ದಾರೆ.
ವಿಧಾನಸಭೆಯ ಬಲದ ಪ್ರಕಾರ, ತೆಲಂಗಾಣ ಮುಖ್ಯಮಂತ್ರಿ ಸೇರಿದಂತೆ 18 ಸಚಿವರನ್ನು ಹೊಂದಬಹುದು.

ಸಮಾರಂಭದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ರೆಡ್ಡಿಯನ್ನು ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ, ತೆಲಂಗಾಣದ ಪ್ರಗತಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಪ್ರಮಾಣವಚನ ಸ್ವೀಕರಿಸುವ ಮೊದಲು, ರೇವಂತ ರೆಡ್ಡಿ ಮತ್ತು ಸೋನಿಯಾ ಗಾಂಧಿ ಅವರು ತೆರೆದ ವಾಹನದಲ್ಲಿ ಕ್ರೀಡಾಂಗಣದೊಳಗೆ ವಿಜಯದ ಲ್ಯಾಪ್ ನಡೆಸಿದರು.
119 ವಿಧಾನಸಭಾ ಸ್ಥಾನಗಳಲ್ಲಿ 65 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ 2014 ರಲ್ಲಿ ತೆಲಂಗಾಣ ರಚನೆಯಾದಾಗಿನಿಂದ ಆಡಳಿತ ನಡೆಸುತ್ತಿರುವ ಕೆ ಚಂದ್ರಶೇಖರ ರಾವ್ ನೇತೃತ್ವದ ಭಾರತ ರಾಷ್ಟ್ರ ಸಮಿತಿಯನ್ನು‌ ಸೋಲಿಸಿತು.