ಬೆಳಗಾವಿ :
ಸ್ಥಳೀಯ ನವೋದ್ಯಮಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ‘ಪ್ರಾಶಸ್ತ್ಯದ ಸಾರ್ವಜನಿಕ ಸಂಗ್ರಹಣೆ ನೀತಿ’ ರೂಪಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ರಾಜ್ಯದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಐಟಿ, ಇಎಸ್‌ಡಿಎಂ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ವಲಯಗಳಿಗೆ ಒತ್ತು ನೀಡುವ ನಿಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ-ಬೆಳಗಾವಿ (ಹೆಚ್‌ಡಿಬಿ) ಕ್ಲಸ್ಟರ್‌ನಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಬೆಳಗಾವಿಯಲ್ಲಿ ಶುಕ್ರವಾರ ಆಯೋಜಿಸಿದ್ದ’ಟೆಕ್ಸೆಲರೇಶನ್‌’ನ 3 ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉದ್ಯಮಿಗಳ ಜತೆ ಸಚಿವರು ಸಂವಾದ ನಡೆಸಿದರು.

“ಬಿಯಾಂಡ್‌ ಬೆಂಗಳೂರು ಯೋಜನೆಯಡಿ ಹೂಡಿಕೆ ಮಾಡಿ, ಸ್ಟ್ರಾರ್ಟ್‌ಅಪ್‌ ಸೆಲ್‌ನಲ್ಲಿ ನೋಂದಣಿಯಾದ ನವೋದ್ಯಮಗಳ ಉತ್ಪನ್ನವನ್ನು ಸರ್ಕಾರವೇ ಖರೀದಿಸುವ ಉದ್ದೇಶದಿಂದ ಈ ನೀತಿ ರೂಪಿಸಲಾಗುವುದು. ಈ ಸಂಬಂಧ ಅರ್ಜಿ ಸಲ್ಲಿಸಲು ಇದ್ದ ಗಡುವನ್ನು 2024ರ ಜನವರಿ 5ರವಗೆಗೆ ವಿಸ್ತರಿಸಲಾಗುವುದು. ಈ ನೀತಿ ಮೂಲಕ ರೀತಿ ಮೇಡ್‌ ಇನ್‌ ಕರ್ನಾಟಕದ ಉತ್ಪನ್ನಗಳನ್ನು ಖರೀದಿಸಿ, ಸ್ಟಾರ್ಟ್‌ಅಪ್‌ಗಳನ್ನು ಪೋಷಿಸಲು ನಮ್ಮ ಸರ್ಕಾರ ಬದ್ಧ,” ಎಂದರು.

“ರಾಜ್ಯದ ಎರಡು ಮತ್ತು ಮೂರನೇ ಹಂತದ ನಗರಗಳ ಅಭಿವೃದ್ಧಿಗೆ ಬದ್ಧವಾಗಿ, ಬಿಯಾಂಡ್‌ ಬೆಂಗಳೂರು ಯೋಜನೆಗೆ ಮತ್ತಷ್ಟು ಬಲ ತುಂಬಲಾಗುವುದು. ಇಂಥ ನಗರಗಳಲ್ಲಿ ಹೆಚ್ಚು ಉದ್ಯಮಗಳು ಸ್ಥಾಪನೆಯಾದರೆ, ಸ್ಥಳೀಯವಾಗಿ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತದೆ,”ಎಂದರು.

“ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹಲವಾರು ಸಭೆಗಳಲ್ಲಿ ಪಾಲ್ಗೊಂಡಿದ್ದೆ. ಅಲ್ಲಿ ಅವರು ಮುಂದಿಟ್ಟ ಬೇಡಿಕೆ ಒಂದೇ, ಅದು ಪ್ರತಿಭಾನ್ವಿತರ ಬೇಡಿಕೆ. ಭಾರತದಿಂದ ಮಾತ್ರ ಅದನ್ನು ಪೂರೈಸಲು ಸಾಧ್ಯ ಎಂಬುದು ಅವರ ನಂಬಿಕೆ. ದೇಶದಿಂದ ಅಂದರೆ ಅದು ರಾಜ್ಯದಿಂದ ಎಂಬುದು ನಮಗೆ ಸ್ಪಷ್ಟವಾಗಿದೆ. ಅದಕ್ಕಾಗಿಯೇ ‘ಕೌಶಲ ಸಲಹಾ ಸಮಿತಿ’ಯ ನೇತೃತ್ವವನ್ನು ನಾನೇ ವಹಿಸಿದ್ದೇನೆ. ದೇಶದ ಮೊದಲ ಇಂಥ ಸಮಿತಿ ಇದಾಗಿದೆ. ಉದ್ಯಮಗಳ ಬೇಡಿಕೆಗೆ ಪೂರಕವಾಗಿ ನುರಿತ ಕೆಲಸಗಾರರನ್ನು ಪೂರೈಸುವ ಸಾಮರ್ಥ್ಯ ನಮ್ಮ ರಾಜ್ಯಕ್ಕಿದೆ. ಉಳಿದೆಲ್ಲ ರಾಜ್ಯಗಳಿಗಿಂತ ನಾವು ಮುಂದಿದ್ದೇವೆ,”ಎಂದು ಹೇಳಿದರು.

“ಸೆಂಟರ್‌ ಆಫ್‌ ಎಕ್ಸಲೆನ್ಸ್- ಫಿನ್‌ಟೆಕ್, ಗೇಮಿಂಗ್ ಆಕ್ಸಿಲರೇಟರ್, ಹೆಲ್ತ್‌ ಸೈನ್ಸ್‌, ಬಯೋಟೆಕ್‌ ಆಕ್ಸಿಲರೇಟರ್‌ಗಳನ್ನು ಸ್ಥಾಪಿಸುವ ಗುರಿ ಇದ್ದು, ಈ ಕ್ಷೇತ್ರಗಳಲ್ಲಿ ಪ್ರಾವಿಣ್ಯತೆ ಇರುವವರಿಗೆ ಇವುಗಳನ್ನು ನಡೆಸುವ ಹೊಣೆ ವಹಿಸಲಾಗುತ್ತದೆ. ರಾಜ್ಯ ಬೇರೆ ಬೇರೆ ಭಾಗಗಳಲ್ಲಿ ಸ್ಥಾಪಿಸಲಾಗುವ ಇಂಥ ಈ ಶ್ರೇಷ್ಠತಾ ಕೇಂದ್ರಗಳಿಗೆ ಎಲ್ಲ ರೀತಿಯ ಬೆಂಬಲ ನೀಡಲು ನಮ್ಮ ಸರ್ಕಾರ ಸಿದ್ಧ,” ಎಂದರು.

*ಪ್ರಗತಿಯ ಹಾದಿಯಲ್ಲಿ ಹೆಚ್‌ಬಿಡಿ ಕ್ಲಸ್ಟರ್‌*
ಹೆಚ್‌ಬಿಡಿ ಕ್ಲಸ್ಟರ್‌ನಲ್ಲಿ 16 ಹೊಸ ಕಂಪನಿಗಳು ತಲೆ ಎತ್ತಿದ್ದು, 4 ಕಂಪನಿಗಳು ತಮ್ಮ ಉದ್ಯಮಗಳ ವಿಸ್ತರಣೆ ಮಾಡಿವೆ. ಕ್ಲಸ್ಟರ್‌ ಉದ್ಯಮ ಸ್ಥಾಪಿಸಲು 40 ಕಂಪನಿಗಳು ಮುಂದೆ ಬಂದಿವೆ. ಜತೆಗೆ, ಒಂದು ಉತ್ಪಾದನಾ ಘಟಕ ಸಹ ಆರಂಭವಾಗಿದ್ದು ಇದರಿಂದ 3,000 ಜನರಿಗೆ ಉದ್ಯೋಗ ಲಭಿಸಿದೆ. ಬರೋಬ್ಬರಿ 25 ಕೋಟಿ ರೂ. ಬಂಡವಾಳದೊಂದಿಗೆ 150 ಸ್ಟಾರ್ಟ್‌ಅಪ್‌ಗಳು ಕಾರ್ಯಾರಂಭಿಸಿವೆ.

*’ಟೆಕ್ಸೆಲರೇಶನ್‌’ಸಂವಾದ*:
ರಾಜ್ಯದಾದ್ಯಂತ ಸ್ಟಾರ್ಟ್‌ಅಪ್‌ಗಳಿಗೆ ಬಂಡವಾಳ ಲಭ್ಯತೆಯನ್ನು ಹೆಚ್ಚಿಸಲು ಸರ್ಕಾರ ಕೈಗೊಂಡಿರುವ ಉಪಕ್ರಮಗಳ ಬಗ್ಗೆ ಎಲೆಕ್ಟ್ರಾನಿಕ್ಸ್ ಇಲಾಖೆ ನಿರ್ದೇಶಕರು, ಕಿಟ್ಸ್ ವ್ಯವಸ್ಥಾಪಕ ನಿರ್ದೇಶಕ ದರ್ಶನ್ ಎಚ್.ವಿ. ಮಾತನಾಡಿದರು. ಇದಲ್ಲದೇ, ನಾಗರಿಕ ಸ್ನೇಹಿ ಸ್ಟಾರ್ಟ್‌ಅಪ್‌ಗಳು, ಉದಯೋನ್ಮುಖ ಕ್ಲಸ್ಟರ್‌ಗಳಲ್ಲಿ ಇಎಸ್‌ಡಿಎಂ ಭವಿಷ್ಯ, ಎಂಜಿನಿಯರಿಂಗ್ ಮತ್ತು ವಿನ್ಯಾಸ ಕೇಂದ್ರವಾಗಿ ಹೆಚ್‌ಡಿಬಿ ಕ್ಲಸ್ಟರ್‌, ಕ್ಲಸ್ಟರ್‌ನಲ್ಲಿ ಆರಂಭಿಕ ಪರಿಸರ ವ್ಯವಸ್ಥೆಗೆ ಬಂಡವಾಳ, ಹೆಚ್‌ಡಿಬಿ ಕ್ಲಸ್ಟರ್‌ನೊಂದಿಗೆ ಜಾಗತಿಕ ಸಾಮರ್ಥ್ಯ ಕೇಂದ್ರಗಳ ಜೋಡಣೆ, ಕರ್ನಾಟಕ ಸ್ಕಿಲ್ ಕನೆಕ್ಟ್ ಪೋರ್ಟಲ್ ಮತ್ತು ಜಿಸಿಸಿಯ ಬೆಳವಣಿಗೆಗೆ ಇತರ ಉಪಕ್ರಮಗಳು, 100 ದಿನಗಳಲ್ಲಿ 1000 ಉದ್ಯಮ-ಸಿದ್ಧ ವೃತ್ತಿಪರರ ರೂಪಿಸುವ ಬಗ್ಗೆ ಸಂವಾದ ನಡೆಯಿತು.

ಉದ್ಯಮಿಗಳಿಗೆ ಸನ್ಮಾನ:
ಹೆಚ್‌ಡಿಬಿ ಕ್ಲಸ್ಟರ್‌ ಸೀಡ್‌ ಫಂಡ್‌ಗೆ 2 ಕೋಟಿ ರೂ. ನೀಡಿದ್ದ ಗೋಲ್ಡ್‌ ಪ್ಲಸ್‌ನ ಸುಭಾಷ್‌ ತ್ಯಾಗಿ ಹಾಗೂ ಹೆಚ್‌ಬಿಡಿ ಕ್ಲಸ್ಟರ್‌ ಲೀಡ್‌ ಇಂಡಸ್ಟ್ರಿ ಆಂಕರ್‌ ವೆಂಕಟೇಶ್‌ ಪಾಟೀಲ್‌ ಅವರನ್ನು ಸಚಿವರು ಸನ್ಮಾನಿಸಿದರು. ಸಮಾರೋಪ ಸಮಾರಂಭದಲ್ಲಿ ಹೆಚ್‌ಡಿಬಿ ಕ್ಲಸ್ಟರ್‌ನ ಉದ್ಯಮಿಗಳನ್ನು ಅಭಿನಂದಿಸಲಾಯಿತು. ನಂತರ ಕೆಎಲ್‌ಇ ಟೆಕ್‌, ಐಎಂಇಆರ್‌, ಜಿಐಟಿ ಜತೆಗಿನ ಒಪ್ಪಂದ ಪತ್ರಕ್ಕೆ ಕೆಡಿಇಎಂ ಸಹಿ ಹಾಕಿತು. ನವೋದ್ಯಮಗಳ ಉತ್ಪನ್ನಗಳ ಬಿಡುಗಡೆಗೂ ಕಾರ್ಯಕ್ರಮ ಸಾಕ್ಷಿಯಾಯಿತು.

ಕಾರ್ಯಕ್ರಮದಲ್ಲಿ ಐಟಿ ಮತ್ತು ಬಿಟಿ, ಎಲೆಕ್ಟ್ರಾನಿಕ್ಸ್ ಇಲಾಖೆ ನಿರ್ದೇಶಕರು, ಕಿಟ್ಸ್ ವ್ಯವಸ್ಥಾಪಕ ನಿರ್ದೇಶಕ ದರ್ಶನ್ ಎಚ್ ವಿ, ಕೆಡಿಇಎಂ ಅಧ್ಯಕ್ಷ ಬಿ.ವಿ ನಾಯ್ಡು, ಕೆಡಿಇಎಂನ ಸಿಇಓ ಸಂಜೀವ್ ಗುಪ್ತಾ, ಹೆಚ್‌ಬಿಡಿ ಕ್ಲಸ್ಟರ್‌ ಲೀಡ್‌ ಇಂಡಸ್ಟ್ರಿ ಆಂಕರ್‌ಗಳಾದ ವೆಂಕಟೇಶ್‌ ಪಾಟೀಲ್‌, ಸಂತೋಷ್‌ ಹುರಳಿಕೊಪ್ಪಿ ಉಪಸ್ಥಿತರಿದ್ದರು.