ಗದಗ: ಒಂದೇ ಕುಟುಂಬದ ನಾಲ್ಕು ಮಂದಿಯನ್ನು ಮನೆಯಲ್ಲಿ ಮಲಗಿದಲ್ಲೇ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಲಾದ ಘಟನೆ ಗದಗ ನಗರದ ದಾಸರ ಓಣಿಯಲ್ಲಿ ನಡೆದಿದೆ.

ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ ಕಾರ್ತಿಕ್ ಬಾಕಳೆ (27), ಪರಶುರಾಮ (55), ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷಾ (16) ಕೊಲೆಯಾದವರು. ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಮೊದಲನೇ ಮಹಡಿಯ ಕೋಣೆಯಲ್ಲಿ ಮಲಗಿದ್ದ ಪತಿ, ಪತ್ನಿ, ಮಗಳನ್ನು ಕೊಲೆ ಮಾಡಲಾಗಿದೆ. ಈ ಮೂವರೂ ಕೊಪ್ಪಳ ಮೂಲದವರಾಗಿದ್ದು, ಏಪ್ರಿಲ್‌ 17ರಂದು ನಡೆದ ಪ್ರಕಾಶ್ ಬಾಕಳೆ ಪುತ್ರ ಕಾರ್ತಿಕ್‌ನ ಮದುವೆ ಫಿಕ್ಸ್ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದ ಸಂಬಂಧಿಗಳಾಗಿದ್ದಾರೆ.

ಮೇಲಿನ ಮಹಡಿಯ ಬಾಗಿಲು ಸದ್ದು ಕೇಳಿ ಅನುಮಾನಗೊಂಡು ಕುಟುಂಬಸ್ಥರು ಪೊಲೀಸರಿಗೆ ಫೋನ್ ಮಾಡಿದ್ದರು. ಪೊಲೀಸರಿಗೆ ಫೋನ್ ಮಾಡುತ್ತಿದ್ದಂತೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಬಾಗಿಲು ತೆಗೆದಿದ್ದರೆ ನಮ್ಮನ್ನೂ ಕೊಲೆ ಮಾಡುವ ಸಾಧ್ಯತೆಯಿತ್ತು ಎಂದು ಮನೆ ಮಾಲೀಕ‌ ಪ್ರಕಾಶ ಬಾಕಳೆ ತಿಳಿಸಿದ್ದಾರೆ.

ಶ್ವಾನದಳ, ಫಾರೆನ್ಸಿಕ್‌ ತಂಡಗಳು ಆಗಮಿಸಿದ್ದು, ಮನೆಯ ಇಂಚಿಂಚೂ ಪರಿಶೀಲನೆ ಮಾಡಲಾಗಿದೆ. ಸ್ಥಳಕ್ಕೆ ಎಸ್ಪಿ ಬಿ.ಎಸ್ ನೇಮಗೌಡ, ಹೆಚ್ಚುವರಿ ಎಸ್ಪಿ ಎಂ.ಬಿ ಸಂಕದ, ಡಿವೈಎಸ್ಪಿ, ಸಿಪಿಐ ಸೇರಿ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೇಲ್ನೋಟಕ್ಕೆ ದರೋಡೆಗೆ ಬಂದ ತಂಡ ನಡೆಸಿರುವ ಕೃತ್ಯದಂತೆ ಕಂಡುಬಂದಿದ್ದರೂ, ಪ್ರಕರಣದ ಹಲವು ಮಗ್ಗಲುಗಳನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.