ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರಿ, ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಅವರು 9.11 ಕೋಟಿ ರೂ. ಮೌಲ್ಯದ ಆಸ್ತಿಯ ಒಡತಿಯಾಗಿದ್ದಾರೆ.

ತಮ್ಮ ನಾಮಪತ್ರದೊಂದಿಗೆ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ತಮ್ಮ ಆಸ್ತಿ ಕುರಿತು ಅಫಿಡವೀಡ್‌ನಲ್ಲಿ ಘೋಷಣೆ ಮಾಡಿದ್ದಾರೆ. ಎಂಬಿಎ ಪದವೀಧರೆ ಆಗಿರುವ ಪ್ರಿಯಾಂಕಾ ಅವರು ಉದ್ಯಮಿಯೂ ಹೌದು. ಸತೀಶ ಶುಗರ್ಸ್ , ಬೆಳಗಾಮ್‌ ಶುಗರ್ಸ್ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ನಿರ್ದೇಶಕರಾಗಿದ್ದಾರೆ. ಕೆಲವು ಉದ್ಯಮಗಳಲ್ಲಿ ಪಾಲುದಾರಿಕೆಯನ್ನು ಹೊಂದಿದ್ದಾರೆ.
ಪ್ರಿಯಾಂಕಾ ಜಾರಕಿಹೊಳಿ ಅವರು 72913956 ರೂ. ಮೌಲ್ಯದ ಚರಾಸ್ತಿ, 18243688 ರೂ. ಮೌಲ್ಯದ ಸ್ಥಿರಾಸ್ತಿ ಸೇರಿದಂತೆ ಒಟ್ಟು 91157644 ರೂ. ಮೌಲ್ಯದ ಆಸ್ತಿ ಒಡತಿಯಾಗಿದ್ದಾರೆ. ತಂದೆ ಸತೀಶ ಜಾರಕಿಹೊಳಿ 14718768 ರೂ. ಹಾಗೂ ತಾಯಿ ಎಸ್‌.ಎಸ್‌.ಜಾರಕಿಹೊಳಿ ಹೆಸರಿನಲ್ಲಿ 1025000 ರೂ. ಸೇರಿದಂತೆ ಒಟ್ಟು 15743768 ರೂ. ಕೈಗಡ ಸಾಲ ಪಡೆದುಕೊಂಡಿದ್ದಾರೆ. 487965 ರೂ. ನಗದು ಹಣವನ್ನು ಹೊಂದಿದ್ದಾರೆ.