ಮಂತ್ರಾಲಯ :ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಗುರುಸಾರ್ವಭೌಮರ 403 ನೇ ಪಟ್ಟಾಭಿಷೇಕ ಹಾಗೂ 429ನೇ ವರ್ಧಂತ್ಯುತ್ಸವಗಳನ್ನೊಳಗೊಂಡ ಶ್ರೀರಾಘವೇಂದ್ರ ಗುರುವೈಭವೋತ್ಸವನ್ನು ಮಾ.11 ರಿಂದ 16 ರವರೆಗೆ ಆಯೋಜಿಸಲಾಗಿದೆ.

ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರ ಸಾನ್ನಿಧ್ಯದಲ್ಲಿ ಶ್ರೀಮಠದಲ್ಲಿ ಆರು ದಿನಗಳ ಕಾಲ ಜರುಗಲಿರುವ ಗುರುವೈಭವೋ ತ್ಸವದಲ್ಲಿ ವಿವಿಧ ಧಾರ್ಮಿಕ, ದಾಸವಾಣಿ- ಪ್ರವಚನ, ಸಾಂಸ್ಕೃತಿಕ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರಿಗೆ ಪ್ರಶಸ್ತಿ ಪ್ರದಾನ ಸೇರಿ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ. ಮಾ.11ಕ್ಕೆ ವಿದ್ವಾನ್ ಪುರೋಹಿತ್ ವೇಣುಗೋಪಾಲಚಾರ್ಯ ಅವರಿಂದ ಪ್ರವಚನ ನಡೆಯಲಿದೆ. 12ಕ್ಕೆ ಶ್ರೀಗುರುರಾಯರ 403ನೇ ಪಟ್ಟಾಭಿಷೇಕ ಮಹೋತ್ಸವ, 13 ರಿಂದ 15 ವರೆಗೆ ಶ್ರೀಮಠದ ಪ್ರಾಕಾರದಲ್ಲಿ ವಿದ್ವಾಂಸರಿಂದ ಪ್ರವಚನ ಹಾಗೂ ಪ್ರತಿದಿನ ಸಂಜೆ ವಿವಿಧ ರಾಜ್ಯಗಳ ಕಲಾವಿದರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ದಾಸವಾಣಿ, ಭರತನಾಟ್ಯ ವಿವಿಧ ಕಲಾವಿದರಿಂದ ನಡೆಯಲಿದೆ. ವಿವಿಧ ಆಧ್ಯಾತ್ಮಿಕ ಪುಸ್ತಕಗಳನ್ನು ಬಿಡುಗಡೆ ಮಾಡಲಾಗುತ್ತಿದೆ.