ಬೆಳಗಾವಿ:
ಚಾರಣಕ್ಕೆಂದು ಹೋಗಿ ಕಾಡಿನಲ್ಲಿ ಕಣ್ಮರೆಯಾಗಿದ್ದ ಬೆಳಗಾವಿ ಕಾಲೇಜಿನ 9 ವಿದ್ಯಾರ್ಥಿಗಳನ್ನು ಕರ್ನಾಟಕ ಹಾಗೂ ಗೋವಾ ಅರಣ್ಯ ಇಲಾಖೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಿದ್ದಾರೆ.

ಅಕ್ರಮ ಅರಣ್ಯ ಪ್ರದೇಶ ಪ್ರವೇಶ ಆರೋಪದಡಿ ಗೋವಾ ಅರಣ್ಯ ಇಲಾಖೆಯಿಂದ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಲಾಗಿದೆ.

ಇವರು ಕರ್ನಾಟಕ-ಗೋವಾ ಗಡಿಭಾಗದಲ್ಲಿರುವ ಜಲ್ವಾಣಿ ಫಾಲ್ಸ್ ನೋಡಲು ಕಣಕುಂಬಿ ಅರಣ್ಯ ಪ್ರದೇಶದ ಮೂಲಕ ತೆರಳಿದ್ದರು.

ಪಾರವಾಡದಿಂದ ಮೂರು ಕಿಲೋಮೀಟರ್ ಬೈಕ್‌ನಲ್ಲಿ ತೆರಳಿದ್ದರು. ನಂತರ ಕಾಲು ದಾರಿಯಲ್ಲಿ ಜಲ್ವಾಣಿ ಫಾಲ್ಸ್‌ಗೆ ತೆರಳಿದ್ದರು. ಶುಕ್ರವಾರ ಸಂಜೆ ಮರಳಿ ಬರುವಾಗ ದಾರಿ ಗೊತ್ತಾಗದೇ ದಟ್ಟ ಕಾಡು ಪಾಲಾಗಿದ್ದಾರೆ. ತಕ್ಷಣ ಯುವಕರು ಸ್ನೇಹಿತರಿಗೆ ಫೋನ್ ಮಾಡಿ ಕಾಡಿನಲ್ಲಿರುವ ಕುರಿತು ಮಾಹಿತಿ ರವಾನಿಸಿದ್ದಾರೆ.

ರಾತ್ರಿ ಕರ್ನಾಟಕ ಹಾಗೂ ಗೋವಾ ಅರಣ್ಯ ಇಲಾಖೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ 30 ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ವಿದ್ಯಾರ್ಥಿಗಳನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಕಾಡಿನಿಂದ ಹೊರಗೆ ಕರೆದುಕೊಂಡು ಬಂದಿದ್ದಾರೆ.