ಮೂಡಲಗಿ:
ಜಲ ಸಂರಕ್ಷಣೆ ಮತ್ತು ಅಂತರ್ಜಲ ಮಟ್ಟ ಮರುಸಂರಕ್ಷಣೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರಂತರವಾಗಿ ಪ್ರಯತ್ನಿಸುತ್ತಿವೆ. 2018-19 ರಿಂದ ನವೆಂಬರ್ 2023 ರ ಅವಧಿಯಲ್ಲಿ ಜಲ ಸಂರಕ್ಷಣೆ ಚಟುವಟಿಕೆಯಡಿ ಮನರೇಗಾ ಯೋಜನೆಯಡಿಯಲ್ಲಿ ದೇಶದಲ್ಲಿ ಒಟ್ಟು 26,14,892 ಜಲ ಸಂರಕ್ಷಣೆ ಮತ್ತು ಮಳೆ ನೀರು ಕೊಯ್ಲು ರಚಿಸಿ ಒಟ್ಟು. 80,931.40 ಕೋಟಿ ರೂ.ಗಳ ಅನುದಾನ ವೆಚ್ಚ ಮಾಡಲಾಗಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ರಾಜ್ಯಸಭೆಯಲ್ಲಿ ಉತ್ತರಿಸಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ರಾಜ್ಯಸಭೆಯ ಚಳಿಗಾಲ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಅಂತರ್ಜಲ ಮಟ್ಟ ಮರುಸಂರಕ್ಷಣೆಗಾಗಿ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ವಿಶ್ವದ ಶೇ.25% ರಷ್ಟು ಅಂತರ್ಜಲವನ್ನು ಉಪಯೋಗಿಸುತ್ತಿರುವ ದೇಶ ಭಾರತ. ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಜೀ ಅವರು ಮುತುವರ್ಜಿ ವಹಿಸಿ, ಅವಕಾಶ ಸಿಕ್ಕಾಗಲೆಲ್ಲಾ ನಿರಂತರವಾಗಿ ಅಂತರ್ಜಲ ಉಳಿಸುವ ಕುರಿತು ಪ್ರಸ್ತಾಪಿಸುತ್ತಾ ಬಂದಿದ್ದಾರೆ.

ಕೇಂದ್ರ ಸರ್ಕಾರವು ದೇಶದಲ್ಲಿ ಜಲಶಕ್ತಿ ಯೋಜನೆ, ಅಮೃತ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು, ಇದರಲ್ಲಿ ಮಳೆನೀರು ಕೊಯ್ಲು/ಅಂತರ್ಜಲ ಮಟ್ಟ ಹೆಚ್ಚಿಸಲು ವಿಶೇಷ ಒತ್ತು ನೀಡಲಾಗುತ್ತಿದೆ. ನೀರು ಮತ್ತು ಅಂತರ್ಜಲದ ಸಂಯೋಜಿತ ಬಳಕೆಗಾಗಿ ಗ್ರಾಮೀಣ ಮಟ್ಟದಲ್ಲಿ ಸಮುದಾಯದ ಸಹಭಾಗಿತ್ವದೊಂದಿಗೆ ಅಂತರ್ಜಲ ನಿರ್ವಹಣೆಯನ್ನು ಉತ್ತೇಜಿಸುತ್ತಿದೆ.

ಇದರ ಜೊತೆಗೆ, ಹಲವಾರು ರಾಜ್ಯಗಳು ನೀರಿನ ಸಂರಕ್ಷಣೆ/ಮಳೆನೀರು ಕೊಯ್ಲು ಕ್ಷೇತ್ರದಲ್ಲಿ ಗಮನಾರ್ಹವಾದ ಕೆಲಸಗಳನ್ನು ಮಾಡಿದೆ, ಉದಾಹರಣೆಗೆ ರಾಜಸ್ಥಾನದ ‘ಮುಖ್ಯಮಂತ್ರಿ ಜಲ ಸ್ವಾವಲಂಬನ್ ಅಭಿಯಾನ’, ಮಹಾರಾಷ್ಟ್ರದ ‘ಜಲಯುಕ್ತ ಶಿಬರ್’, ಗುಜರಾತನಲ್ಲಿ ‘ಸುಜಲಂಸುಫಲಂ ಅಭಿಯಾನ’, ಆಂಧ್ರಪ್ರದೇಶದಲ್ಲಿ ನೀರು ಚೆಟ್ಟು’, ಬಿಹಾರದಲ್ಲಿ ‘ಜಲ್ ಜೀವನ ಹರಿಯಲಿ’, ಹರಿಯಾಣದಲ್ಲಿ ‘ಜಲ್ ಹಿ ಜೀವನ’, ಮತ್ತು ತಮಿಳುನಾಡಿನಲ್ಲಿ ‘ಕುಡಿಮಾರಮಠ’ ಯೋಜನೆ ಅಳವಡಿಸಿಕೊಂಡಿವೆ ಎಂದರು.

ಕರ್ನಾಟಕ, ಗುಜರಾತ್, ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳ 80 ಜಿಲ್ಲೆಗಳ 8,565 ಗ್ರಾಮ ಪಂಚಾಯತ್‌ಗಳಲ್ಲಿ ಸಮುದಾಯ ಸಹಭಾಗಿತ್ವದಲ್ಲಿ ಸುಸ್ಥಿರ ಅಂತರ್ಜಲ ಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಅಟಲ್ ಭುಜಲ್ ಯೋಜನೆ ಜಾರಿಗೊಳಿಸಲಾಗಿದೆ.
ಕರ್ನಾಟಕ ರಾಜ್ಯದ ಬೆಂಗಳೂರು ನಗರದಲ್ಲಿ ಅಂತರ್ಜಲ ಮಟ್ಟವನ್ನು 18 ವೀಕ್ಷಣಾ ಬಾವಿಗಳ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಕಳೆದ ಹತ್ತು ವರ್ಷದಲ್ಲಿ 83.3% ಅಂತರ್ಜಲ ಮಟದಲ್ಲಿ ಏರಿಕೆ ಕಂಡು ಬಂದಿದ್ದು. ಉಳಿದ 16.7% ಅಂತರ್ಜಲ ಮಟ್ಟವು ಕುಸಿಯುತ್ತಿದೆ. ದೇಶದಲ್ಲಿ ಸುಸ್ಥಿರ ಅಂತರ್ಜಲ ನಿರ್ವಹಣೆಗಾಗಿ ಕೇಂದ್ರ ಸರ್ಕಾರವು ವಿವಿಧ ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವರು ಉತ್ತರಿಸಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ಮಾಹಿತಿ ನೀಡಿದರು.