ಬೆಳಗಾವಿ : ಪ್ರಕೃತಿ ಪ್ರತಿಯೊಂದು ಜೀವಿಗೂ ಆಶ್ರಯ ನೀಡಿ ಪೋಷಿಸುತ್ತಿದೆ. ಅದರ ಉಸಿರಿನೊಂದಿಗೆ ನಮ್ಮ ಉಸಿರು ಅಡಗಿದೆ ಎಂದು ಬೆಳಗಾವಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯ ನ್ಯಾಯಮೂರ್ತಿ ಮತ್ತು ಸದಸ್ಯ ಕಾರ್ಯದರ್ಶಿ ಪಿ. ಮುರಳಿ ಮೋಹನ ರೆಡ್ಡಿ ಅಭಿಪ್ರಾಯಪಟ್ಟರು.
ಮಹಾನಗರ ಪಾಲಿಕೆ ಬೆಳಗಾವಿ ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೆಳಗಾವಿ ಹಾಗೂ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಭೂಗೋಳಶಾಸ್ತ್ರ ವಿಭಾಗದ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ನಿಮಿತ್ತ ಘನತ್ಯಾಜ್ಯ ನಿರ್ವಹಣೆಯ ಮೇಲೆ ಕೇಂದ್ರೀಕರಿಸುವುದರೊಂದಿಗೆ ಪರಿಸರ ಸಂರಕ್ಷಣೆ ಎಂಬ ಪರಿಕಲ್ಪನೆಯಡಿಯಲ್ಲಿ ಕಾರ್ಯಕ್ರಮವನ್ನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮ ಉದ್ಘಾಟಿಸಿ
ಮಾತನಾಡಿದ ಬೆಳಗಾವಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯ ನ್ಯಾಯಮೂರ್ತಿಗಳು ಮತ್ತು ಸದಸ್ಯ ಕಾರ್ಯದರ್ಶಿ ಪಿ. ಮುರಳಿ ಮೋಹನ ರೆಡ್ಡಿ ಅವರು ಪರಿಸರದ ಉಸಿರಿನೊಂದಿಗೆ ನಮ್ಮ ಉಸಿರಿದೆ. ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ವಿದ್ಯಾರ್ಥಿಗಳು ಪರಿಸರದ ಕುರಿತು ಜ್ಞಾನ ಪಡೆದುಕೊಳ್ಳುವುದರ ಜೊತೆಗೆ ತಮ್ಮ ಪೋಷಕರಿಗೂ ತಿಳಿಹೇಳಬೇಕು. ನಮ್ಮ ಪೂರ್ವಜರು ನಮಗೆ ಕೊಟ್ಟ ಈ ಸುಂದರ ಪ್ರಕೃತಿಯನ್ನು ನಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸೋಣ. ಸರ್ಕಾರದೊಂದಿಗೆ ಪ್ರಜೆಗಳೂ ಸೇರಿಕೊಂಡಾಗ ಪರಿಸರ ಸಂರಕ್ಷಣೆ ಸಾಧ್ಯ ಎಂದರು. ತಮ್ಮ ಪ್ರಾಧಿಕಾರದ ಅಡಿಯಲ್ಲಿ ಬರುವ ಕಾನೂನು ಸೇವೆಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ವಿದ್ಯಾರ್ಥಿಗಳು ಓದಿನತ್ತ ಗಮನ ಹರಿಸಿ ಬದುಕನ್ನು ರೂಪಿಸಿಕೊಳ್ಳಬೇಕು. ಇತ್ತೀಚೆಗೆ ಪೋಕ್ಷೋ ಅಡಿಯಲ್ಲಿ ದಾಖಲಾಗುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಕೋರ್ಟ್ಗುಗಳಲ್ಲಿ ಕೇಸುಗಳು ಬಗೆಹರಿಯುವಲ್ಲಿ ತುಂಬಾ ದೀರ್ಘಾವಧಿಯನ್ನು ಪಡೆಯುತ್ತದೆ ಎಂದು ಸಿನಿಮಾದಲ್ಲಿ ತೋರಿಸುತ್ತಾರೆ. ಅಷ್ಟು ದೀರ್ಘಾವಧಿ ಪಡೆಯಲು ಕಾರಣವಿದೆ. ಯುರೋಪಿನಲ್ಲಿ ಒಬ್ಬ ನ್ಯಾಯಾಧೀಶರಿಗೆ ಸರಾಸರಿ ನಾಲ್ಕುನೂರು ಕೇಸುಗಳು ಬಂದರೆ ನಮ್ಮ ದೇಶದಲ್ಲಿ ಒಬ್ಬ ನ್ಯಾಯಾಧೀಶರಿಗೆ ನಾಲ್ಕು ಸಾವಿರ ಕೇಸುಗಳು ಬರುತ್ತವೆ. ಇತ್ತೀಚೆಗೆ ನ್ಯಾಯಾಂಗ ವ್ಯವಸ್ಥೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಆಮೂಲಾಗ್ರ ಬದಲಾವಣೆಯಾಗುತ್ತಿದೆ ಎಂದರು.
ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಎಚ್. ವಿ. ಕಲಾದಗಿ ಅವರು ಮಹಾನಗರ ಪಾಲಿಕೆ ಘನತ್ಯಾಜ್ಯ ವಸ್ತುಗಳ ನಿರ್ವಹಣೆಯನ್ನು ಮಾಡುವ ವಿಧಾನಗಳನ್ನು ಮತ್ತು ಘನತ್ಯಾಜ್ಯ ವಸ್ತುಗಳ ನಿರ್ವಹಣೆಯಲ್ಲಿ ನಾಗರಿಕರ ಹಾಗೂ ವಿದ್ಯಾರ್ಥಿಗಳ ಜವಾಬ್ದಾರಿಯ ಕುರಿತು ಉಪನ್ಯಾಸ ನೀಡಿದರು.
ನಗರ ಸೇವಕಿ ಲಕ್ಷ್ಮೀ ಮಹಾದೇವ ರಾಠೋಡ ಅವರು ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ಮಾತನಾಡಿದರು.
ನಗರ ಸೇವಕ ಹನುಮಂತ ಕೊಂಗಾಲಿ ಅವರು ಪಾಲಿಕೆಯು ಪರಿಸರ ಸಂರಕ್ಷಣೆಯ ಅರಿವು ಮೂಡಿಸುವುದರ ಜೊತೆಗೆ ವಾಹನಗಳಿಂದ ಉಂಟಾಗುವ ಪರಿಸರದ ಮಾಲಿನ್ಯದ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಎಸ್ ಎಸ್ ತೇರದಾಳ ಅವರು ಪದವಿಯಲ್ಲಿ ಪರಿಸರ ವಿಜ್ಞಾನ ವಿಷಯವನ್ನು ಕಡ್ಡಾಯಗೊಳಿಸಿದ್ದೇವೆ. ವಿದ್ಯಾರ್ಥಿಗಳು ಪರಿಸರದ ಕುರಿತು ಇನ್ನಷ್ಟು ತಿಳಿವಳಿಕೆ ಪಡೆದುಕೊಂಡು ಪರಿಸರ ಉಳಿಸುವಲ್ಲಿ ಕಂಕಣ ಬದ್ಧರಾಗಬೇಕು. ಪ್ರತಿ ವರ್ಷ ಪ್ರತಿಯೊಬ್ಬ ವಿದ್ಯಾರ್ಥಿಯೂ ಕನಿಷ್ಠ ಒಂದು ಗಿಡವನ್ನಾದರೂ ನೆಟ್ಟು ಪೋಷಿಸಬೇಕು ಎಂದರು.
ಮಹಾವಿದ್ಯಾಲಯದ ಭೂಗೋಳ ಶಾಸ್ತ್ರದ ಮುಖ್ಯಸ್ಥ ಡಾ. ಅರುಣ ವೊಡ್ಡಿನ್ ಅವರು ಪರಿಸರ ದಿನಾಚರಣೆ ಮಹತ್ವ ಮತ್ತು ಅದು ಬೆಳೆದು ಬಂದ ಚಾರಿತ್ರಿಕ ಹಿನ್ನೆಲೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ವಿಕ್ರಮ ಗುಡೊಡಗಿ ಸ್ವಾಗತಿಸಿದರು, ನೀಲಾ ಬುರ್ಜಿ ಪರಿಚಯಿಸಿದರು . ಡಾ. ರಾಧಾ ಬಿ. ಆರ್ ನಿರೂಪಿಸಿದರು. ಡಾ. ದೀಪಿಕಾ ದೇವರಮನಿ ವಂದಿಸಿದರು.
ವಿದ್ಯಾರ್ಥಿನಿ ಪ್ರಿಯಾಂಕಾ ತಿಳಗಾರ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.