ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನಕ್ಕೆ ನೀರು ನುಗ್ಗಿದೆ. ಕ್ಷೇತ್ರದ ಆತ್ಮಲಿಂಗದವರೆಗೆ ಕೊಳಚೆ ನೀರು ಹೊಕ್ಕಿದೆ.ಸಮುದ್ರದಲ್ಲಿ ಉಬ್ಬರ ಇದ್ದುದರಿಂದ ಸಂಗಮದ ನಾಲೆಯಿಂದ ಬಂದ ಮಳೆಯ ನೀರು ಸಮುದ್ರಕ್ಕೆ ಸೇರಲು ಅಡ್ಡಿಯಾಯಿತು. ಹೀಗಾಗಿ ಆ ನೀರು ಗರ್ಭಗುಡಿಯಿಂದ ತೀರ್ಥ ಹೊರಹೋಗುವ ಸೋಮಸೂತ್ರದ ಮೂಲಕ ಒಳನುಗ್ಗಿದ್ದರಿಂದ ಗರ್ಭಗುಡಿ ಕೆಲಕಾಲ ಜಲಾವೃತವಾಗಿತ್ತು. ನಂತರ ಸಿಬ್ಬಂದಿ ಹರಸಾಹಸಪಟ್ಟು ನೀರನ್ನೆಲ್ಲ ಹೊರಹಾಕಿದ್ದಾರೆ. ಪ್ರತಿ ವರ್ಷ ಮಳೆಗಾಲದಲ್ಲಿ ಕೆಲವು ಸಲ ಇಂತಹ ಸಮಸ್ಯೆಯಾಗುತ್ತಿದೆ.

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕೆಲವೆಡೆ ಭಾರೀ ಮಳೆಯಾದ ಪರಿಣಾಮ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನಕ್ಕೆ ನೀರು ನುಗ್ಗಿದೆ. ಕ್ಷೇತ್ರದ ಆತ್ಮಲಿಂಗದವರೆಗೆ ಕೊಳಚೆ ನೀರು ಹೊಕ್ಕಿದೆ.

ಗರ್ಭಗುಡಿಗೆ ಹೊಕ್ಕ ನೀರು ಹೊರಹಾಕಲು ದೇವಸ್ಥಾನದ ಸಿಬ್ಬಂದಿ ಪರದಾಡುತ್ತಿದ್ದಾರೆ. ಕಳೆದ ವರ್ಷವೂ ಮಹಾಬಲೇಶ್ವರನ ಆತ್ಮಲಿಂಗವರೆಗೂ ಕೊಳಚೆ ನೀರು ಸಾಗಿತ್ತು. ಗೋಕರ್ಣದ ಸಂಗಮನಾಲಾದ ಮೂಲಕ ಸಮುದ್ರ ಸೇರಬೇಕಿದ್ದ ಮಳೆ ನೀರು ಆದರೆ, ಶ್ರೀ ಮಹಾಬಲೇಶ್ವರ ಕ್ಷೇತ್ರದ ಸೋಮಸೂತ್ರದಿಂದ ಗರ್ಭಗುಡಿಗೆ ನುಗ್ಗಿ ಮಹಾಪೂಜೆಗೆ ತೊಡಕು ಉಂಟಾಗಿತ್ತು.

ಸ್ಮಶಾನಕಾಳಿ ಮಂದಿರದ ಹತ್ತಿರ ಸಂಗಮ ನಾಲಾಕ್ಕೆ ಸೇರುವ ಬಳಿ ಸೇತುವೆ ನಿರ್ಮಿಸಲಾಗಿದೆ. ಸೇತುವೆ ಅಡಿಪಾಯದ ಎತ್ತರ ಹೆಚ್ಚಿಸಿರೋದು ಹಾಗೂ ಪಕ್ಕದಲ್ಲಿ ಹಾಕಿದ ಮಣ್ಣು ತೆಗೆಯದಿರೋದೇ ಈ ಅವಾಂತರಕ್ಕೆ ಕಾರಣ ಎಂದು ತಿಳಿದು ಬಂದಿದೆ.

ಸಂಗಮ ನಾಲಾ ಸಮುದ್ರ ಸೇರುವಲ್ಲಿ ಮರಳ ದಿನ್ನೆ ಕಡಿದು ನೀರು ಸಾಗುವಂತೆ ಮಾಡಲು ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ. ಸುರಿಯುವ ಮಳೆಯನ್ನು ಲೆಕ್ಕಿಸಿದೇ ಶ್ರಮಿಸಿ ಗರ್ಭಗುಡಿಯಲ್ಲಿ ನೀರು ಖಾಲಿ ಮಾಡುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಕ್ಷೇತ್ರದ ಗರ್ಭಗುಡಿಯನ್ನು ಸ್ವಚ್ಛಗೊಳಿಸಿದ ಬಳಿಕ ಪೂಜೆ‌ ಪುನಸ್ಕಾರ ನಡೆದಿದೆ.