ನವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಸ್ಥಾನಗಳಷ್ಟನ್ನು ಕಾಂಗ್ರೆಸ್‌ ಮೂರು ಚುನಾವಣೆಗಳನ್ನು ಸೇರಿಸಿದರೂ ಅದಕ್ಕೆ ಗೆಲ್ಲಲು ಸಾಧ್ಯವಾಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ಮತ್ತೊಮ್ಮೆ 100 ಸ್ಥಾನಗಳ ಗಡಿ ದಾಟಲು ವಿಫಲವಾಗಿದ್ದು, ಕಳೆದ ಮೂರು ಚುನಾವಣೆಗಳಲ್ಲಿ ಗೆದ್ದಿದ್ದನ್ನು ಸೇರಿಸಿದರೂ ಅದು ಬಿಜೆಪಿ ಒಂದು ಚುನಾವಣೆಯಲ್ಲಿ ಗೆದ್ದಷ್ಟು ಸ್ಥಾನಗಳಷ್ಟು ಆಗುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಬಹುಮತಕ್ಕೆ ಬೇಕಾದ ಸ್ಥಾನಗಳನ್ನು ಗಳಿಸಿರುವ ಹಿನ್ನೆಲೆಯಲ್ಲಿ ಸತತ ಮೂರನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಭಾನುವಾರ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ಶುಕ್ರವಾರ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ತನ್ನನ್ನು ಸಂಸದೀಯ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ ನಂತರ ಮಾತನಾಡಿದ ಮೋದಿ,”ಕಾಂಗ್ರೆಸ್ ಮೂರು ಚುನಾವಣೆಗಳಲ್ಲಿ (2014, 2019 ಮತ್ತು 2024 ರ ಚುನಾವಣೆಗಳಲ್ಲಿ) ಗೆಲ್ಲಲು ಸಾಧ್ಯವಾಗದೇ ಇರುವುದನ್ನು ನಾವು ಒಂದು ಚುನಾವಣೆಯಲ್ಲಿ ಗೆದ್ದಿದ್ದೇವೆ ಎಂದು ಮೋದಿ ಹೇಳಿದ್ದಾರೆ.
ಈ ಚುನಾವಣೆಯಲ್ಲಿ ವಿರೋಧ ಪಕ್ಷಗಳ ನೇತೃತ್ವ ವಹಿಸಿದ್ದ ಕಾಂಗ್ರೆಸ್ ತಾನು ಸ್ಪರ್ಧಿಸಿದ್ದ 328 ಸ್ಥಾನಗಳಲ್ಲಿ 99ರಲ್ಲಿ ಗೆಲುವು ಸಾಧಿಸಿದೆ. ಇದು ಕಳೆದ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷದ ಅತ್ಯುತ್ತಮ ಫಲಿತಾಂಶವಾಗಿದೆ. 2014ರಲ್ಲಿ ಕಾಂಗ್ರೆಸ್‌ 44 ಮತ್ತು 2019ರಲ್ಲಿ 52ರಲ್ಲಿ ಗೆಲುವು ಸಾಧಿಸಿತ್ತು.
ಕೊನೆಯ ಬಾರಿಗೆ ಪಕ್ಷವು 2009ರಲ್ಲಿ ಮೂರು-ಅಂಕಿಯ ಸ್ಥಾನಗಳನ್ನು ಗೆದ್ದಿತ್ತು. ಈ ವೇಳೆ ಪಕ್ಷವು 206 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆ ಸಂದರ್ಭದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಎರಡನೇ ಬಾರಿಗೆ ಕೇಂದ್ರದಲ್ಲಿ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಯನ್ಸ್ (ಯುಪಿಎ) ಸರಕಾರ ಅಧಿಕಾರಕ್ಕೆ ಬಂದಿತ್ತು.