ಕಟೀಲು :
ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ತಿರುಗಾಟ ಡಿ.7ರಂದು ಆರಂಭವಾಗಲಿದೆ.
ಸಂಜೆ 5.15ಕ್ಕೆ ದೇವಸ್ಥಾನದಲ್ಲಿ ತಾಳಮದ್ದಳೆ ನಡೆಯಲಿದೆ. ಸಂಜೆ 6.45ಕ್ಕೆ ಕಲಾವಿದರಿಗೆ ಗೆಜ್ಜೆ ಹಸ್ತಾಂತರ, ರಾತ್ರಿ 8.30ಕ್ಕೆ ಚೌಕಿ ಪೂಜೆ ಬಳಿಕ ಆರು ರಂಗಸ್ಥಳಗಳಲ್ಲಿ ಏಕಕಾಲಕ್ಕೆ ಪೂರ್ವರಂಗ ಪ್ರದರ್ಶನ, 10.30ಕ್ಕೆ ಪಾಂಡವಾಶ್ವಮೇಧ ಯಕ್ಷಗಾನ ಬೆಳಗ್ಗಿನವರೆಗೆ ನಡೆಯಲಿದೆ ಎಂದು ಕಟೀಲು ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಸನತ್‌ಕುಮಾರ್‌ಶೆಟ್ಟಿ ತಿಳಿಸಿದ್ದಾರೆ.
ಈ ಬಾರಿ ಅಧಿಕಮಾಸದ ಕಾರಣ ತಿರುಗಾಟ ತಡವಾಗಿ ಆರಂಭವಾಗುತ್ತಿದ್ದು, ಮೇ 25 ರ ವರೆಗೆ 167 ದಿನಗಳ ಯಕ್ಷಗಾನದ ತಿರುಗಾಟ ನಡೆಯಲಿದೆ.
ಆಸ್ರಣ್ಣರು ಕಲಾವಿದರಿಗೆ ಗೆಜ್ಜೆ ಕೊಡುವ ಮೂಲಕ ತಿರುಗಾಟ ಆರಂಭವಾಗಲಿದ್ದು, ಅದಕ್ಕೂ ಮುನ್ನ ದೇವರ ಎದುರು ಮೇಳದ ದೇವರು, ಆಭರಣ, ಆಯುಧ, ಇತ್ಯಾದಿಗಳನ್ನು ಇಟ್ಟು ಪೂಜೆ ನಡೆಯಲಿದೆ ಎಂದು ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದ್ದಾರೆ.
ಈ ವರುಷ ಆರು ಮೇಳಗಳಿಂದ ಒಟ್ಟು 1002 ಸೇವೆಯಾಟಗಳು ಪ್ರದರ್ಶಿತವಾಗಲಿವೆ. ಪ್ರತಿ ವರ್ಷ 450 ಆಟಗಳು ಕಾಯಂ ಇದ್ದ ಕಾರಣ ಸುಮಾರು 550 ಆಟಗಳನ್ನು ಮಾತ್ರ ನೀಡಲು ಸಾಧ್ಯವಾಗಿದೆ, ಕಳೆದ ವರ್ಷ 774 ಹೊಸ ಆಟಗಳು ಬುಕಿಂಗ್ ಆಗಿವೆ ಎಂದು ಅವರು ತಿಳಿಸಿದ್ದಾರೆ.
ವರ್ಷಂಪ್ರತಿ ಮೇಳದ ಉಡುಗೆ, ಮಣಿ ಸಾಮಾನು, ಪರಿಕರಗಳನ್ನು ರಿಪೇರಿ ಮಾಡಲಾಗುತ್ತಿದ್ದು, ಈ ಬಾರಿ ವೇಷ ಭೂಷಣಗಳನ್ನು ಹೊಸದಾಗಿ ತಯಾರಿಸಿದ್ದು, ಮಣಿ ಸಾಮಾನುಗಳಲ್ಲದೆ ಕಿರೀಟ ಮತ್ತಿತರ ಸಾಮಾಗ್ರಿ ಹೊಸದಾಗಿ ಸಿದ್ದವಾಗಿವೆ. ಐದಾರು ಕಲಾವಿದರು ಹೊಸದಾಗಿ ಮೇಳಗಳಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಮೇಳಕ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ ತಿಳಿಸಿದ್ದಾರೆ.