ಢಾಕಾ : ಗುಪ್ತಚರ ವರದಿಗಳ ಪ್ರಕಾರ, ಶೇಖ್ ಹಸೀನಾ ಸರ್ಕಾರದ ಪತನಕ್ಕೆ ಕಾರಣವಾದ ಮೀಸಲಾತಿ ವ್ಯವಸ್ಥೆಯ ವಿರುದ್ಧ ಭಾರಿ ಪ್ರತಿಭಟನೆಗಳಿಗೆ ಸಾಕ್ಷಿಯಾದ ಬಾಂಗ್ಲಾದೇಶದಲ್ಲಿ ಆಡಳಿತ ಬದಲಾವಣೆಯ ನೀಲನಕ್ಷೆಯನ್ನು ಲಂಡನ್‌ನಲ್ಲಿ ಪಾಕಿಸ್ತಾನದ ಐಎಸ್‌ಐ ಸಹಯೋಗದೊಂದಿಗೆ ರಚಿಸಲಾಗಿತ್ತು ಎಂದು ವರದಿಯೊಂದು ಹೇಳಿದೆ.

ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯ (ಬಿಎನ್‌ಪಿ) ಹಂಗಾಮಿ ಮುಖ್ಯಸ್ಥ ಹಾಗೂ ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ ಮತ್ತು ಐಎಸ್‌ಐ ಅಧಿಕಾರಿಗಳ ನಡುವೆ ಸೌದಿ ಅರೇಬಿಯಾದಲ್ಲಿ ನಡೆದ ಸಭೆಗಳ ಪುರಾವೆಗಳು ತಮ್ಮ ಬಳಿ ಇವೆ ಎಂದು ಬಾಂಗ್ಲಾದೇಶದ ಅಧಿಕಾರಿಗಳು ಹೇಳಿದ್ದಾರೆ.
ಹಿಂಸಾಚಾರಕ್ಕೆ ಮುನ್ನ, X ನಲ್ಲಿನ ಹಲವಾರು “ಬಾಂಗ್ಲಾದೇಶ ವಿರೋಧಿ” ಹ್ಯಾಂಡಲ್‌ಗಳು ನಿರಂತರವಾಗಿ ಪ್ರತಿಭಟನೆಗೆ ಉತ್ತೇಜನ ನೀಡುತ್ತಿದ್ದವು. ಪಾಕಿಸ್ತಾನಿ ಹ್ಯಾಂಡಲ್‌ಗಳು ಸೇರಿದಂತೆ ಶೇಖ್ ಹಸೀನಾ ಸರ್ಕಾರದ ವಿರುದ್ಧ 500 ಕ್ಕೂ ಹೆಚ್ಚು ನೆಗೆಟಿವ್‌ ಟ್ವೀಟ್‌ಗಳನ್ನು ಮಾಡಲಾಗಿದೆ.
ಹಸೀನಾ ಅವರ ಸರ್ಕಾರವನ್ನು ಅಸ್ಥಿರಗೊಳಿಸಲು ಮತ್ತು ಪಾಕಿಸ್ತಾನದ ಪರವಾಗಿರುವ ವಿರೋಧ ಪಕ್ಷವಾದ ಬಿಎನ್‌ಪಿಯನ್ನು ಪುನಃಸ್ಥಾಪಿಸಲು ಪಾಕಿಸ್ತಾನ ಸೇನೆ ಮತ್ತು ಐಎಸ್‌ಐ ಗುರಿಯನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ. ಐಎಸ್‌ಐ (ISI) ಮೂಲಕ ಚೀನಾ ಕೂಡ ಪ್ರತಿಭಟನೆಯ ಕಾವು ಹೆಚ್ಚಿಸುವಲ್ಲಿ ಪಾತ್ರವಹಿಸಿತು, ಅದು ಅಂತಿಮವಾಗಿ ಹಸೀನಾ ಅವರು ದೇಶ ತೊರೆದು ಭಾರತಕ್ಕೆ ಹೋಗುವಂತೆ ಮಾಡಿತು ಎಂದು ವರದಿ ಹೇಳಿದೆ.

ಹಸೀನಾ ಸರ್ಕಾರದ ವಿರುದ್ಧ ಐಎಸ್‌ಐ, ಚೀನಾ ಪಿತೂರಿ ನಡೆಸಿದ್ದು ಹೇಗೆ?
ಉದ್ಯೋಗ ಮೀಸಲಾತಿಯ ವಿರುದ್ಧ ಪ್ರಾರಂಭವಾದ ಪ್ರತಿಭಟನೆ, ಹಸೀನಾ ವಿರುದ್ಧ ವ್ಯಾಪಕವಾದ ಸರ್ಕಾರಿ ವಿರೋಧಿ ಚಳುವಳಿಯಾಗಿ ವಿಕಸನಗೊಂಡಿತು, 300 ಕ್ಕೂ ಹೆಚ್ಚು ಜನರು ಸತ್ತರು ಮತ್ತು ನೂರಾರು ಹೆಚ್ಚು ಗಾಯಗೊಂಡರು.
ಜಮಾತ್-ಎ-ಇಸ್ಲಾಮಿಯ ಬಾಂಗ್ಲಾದೇಶದ ವಿದ್ಯಾರ್ಥಿ ವಿಭಾಗವಾದ ಐಎಸ್‌ಐ ಬೆಂಬಲಿತ ಇಸ್ಲಾಮಿ ಛಾತ್ರ ಶಿಬಿರ್ (ಐಸಿಎಸ್) ಪ್ರತಿಭಟನೆಯನ್ನು ಪ್ರಚೋದಿಸಿತು ಮತ್ತು ಹಸೀನಾ ಅವರನ್ನು ಬದಲಿಸಿ ಪಾಕಿಸ್ತಾನ ಮತ್ತು ಚೀನಾಕ್ಕೆ ಸ್ನೇಹಪರವಾಗಿರುವ ಆಡಳಿತವನ್ನು ತರುವ ದೃಢವಾದ ಪ್ರಯತ್ನವಾಗಿ ಅದನ್ನು ಪರಿವರ್ತಿಸಿತು ಎಂದು ಗುಪ್ತಚರ ಸಂಸ್ಥೆ ಹೇಳಿದೆ.
ಭಾರತ ವಿರೋಧಿ ನಿಲುವಿಗೆ ಹೆಸರಾದ ಜಮಾತೆ ಇಸ್ಲಾಮಿಯ ಉದ್ದೇಶ ವಿದ್ಯಾರ್ಥಿ ಪ್ರತಿಭಟನೆಯನ್ನು ರಾಜಕೀಯ ಚಳವಳಿಯಾಗಿ ಪರಿವರ್ತಿಸುವುದಾಗಿತ್ತು. ಗುಪ್ತಚರ ಮಾಹಿತಿಗಳು ಇಸ್ಲಾಮಿ ಛಾತ್ರ ಶಿಬಿರ್ ಸದಸ್ಯರು ಹಲವಾರು ತಿಂಗಳುಗಳವರೆಗೆ ಕೈಗೊಂಡ ನಿಖರವಾದ ಯೋಜನೆಯನ್ನು ಸೂಚಿಸುತ್ತವೆ. ಯೋಜನೆಯ ನಿಧಿಯ ಗಮನಾರ್ಹ ಭಾಗವು ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಚೀನಾದ ಘಟಕಗಳಿಂದ ಬಂದಿವೆ ಎಂದು ನಂಬಲಾಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಬಾಂಗ್ಲಾದೇಶದ ಪ್ರತಿಭಟನೆಯ ಸಮಯದಲ್ಲಿ ಸಾಮಾಜಿಕ ಮಾಧ್ಯಮದ ಚಟುವಟಿಕೆಯನ್ನು ಸ್ಕ್ಯಾನ್ ಮಾಡುವಾಗ, ಅವಾಮಿ ಲೀಗ್ ವಿರುದ್ಧದ ಹೆಚ್ಚಿನ ಪೋಸ್ಟ್‌ಗಳು, ಪ್ರತಿಭಟನಾಕಾರರ ವಿರುದ್ಧದ ಹಿಂಸಾಚಾರದ ವೀಡಿಯೊಗಳು ಮತ್ತು ಶೇಖ್ ಹಸೀನಾ ಅವರನ್ನು ರಕ್ಕಸಿಯಂತೆ ತೋರಿಸುವ ಪೋಸ್ಟರ್‌ಗಳನ್ನು ಬಿಎನ್‌ಪಿ (BNP) ಮತ್ತು ಅದರ ಅಂಗಸಂಸ್ಥೆ ಖಾತೆಗಳು ರಚಿಸುತ್ತಿರುವುದು ಕಂಡುಬಂದಿದೆ. ಇವುಗಳಲ್ಲಿ ಹೆಚ್ಚಿನ ಭಾಗವನ್ನು ಅಮೆರಿಕ-ಆಧಾರಿತ ಖಾತೆಗಳಿಂದ ವರ್ಧಿಸಲಾಗಿದೆ.

ಬಾಂಗ್ಲಾದೇಶದಲ್ಲಿ ಏಕೆ ಪ್ರತಿಭಟನೆಗಳು ಭುಗಿಲೆದ್ದವು?
ಪ್ರತಿಭಟನೆಗಳ ಮೂಲವು ವಿವಾದಾತ್ಮಕ ಮೀಸಲಾತಿ ವ್ಯವಸ್ಥೆಯಿಂದ ಬಂದಿದೆ, ಈ ಮೀಸಲಾತಿಯು ಪಾಕಿಸ್ತಾನದ ವಿರುದ್ಧ ಬಾಂಗ್ಲಾದೇಶದ 1971 ರ ಸ್ವಾತಂತ್ರ್ಯದ ಹೋರಾಟಗಾರರ ಕುಟುಂಬದ ಸದಸ್ಯರಿಗೆ 30 ಪ್ರತಿಶತದಷ್ಟು ಸರ್ಕಾರಿ ಉದ್ಯೋಗಗಳನ್ನು ಕಾಯ್ದಿರಿಸಿದೆ.
ಬಾಂಗ್ಲಾದೇಶದ ಸುಪ್ರೀಂ ಕೋರ್ಟ್ ಇದನ್ನು 5% ಕ್ಕೆ ಕಡಿತಗೊಳಿಸಿದ್ದರೂ ಸಹ, ಪ್ರತಿಭಟನೆಗಳು ವಿಭಿನ್ನ ತಿರುವು ಪಡೆದುಕೊಂಡವು, ಹಸೀನಾ ಅವರ ರಾಜೀನಾಮೆಗೆ ಆಗ್ರಹಿಸಿ ಚಳವಳಿಗಾರರು ಆಗಸ್ಟ್ 4 ರಂದು ಪೊಲೀಸರೊಂದಿಗೆ ಘರ್ಷಣೆಯಲ್ಲಿ ತೊಡಗಿದರು. ಇದರಲ್ಲಿ 100 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರಿಂದ ಪ್ರತಿಭಟನೆಗಳು ಉಲ್ಬಣಗೊಂಡವು.
ಸೋಮವಾರ, ಬಾಂಗ್ಲಾದೇಶ ಸೇನೆಯು ರಾಜೀನಾಮೆ ನೀಡುವಂತೆ ಅಂತಿಮ ಸಮಯಾವಕಾಶದ ಗಡುವು ನೀಡಿದ ನಂತರ ಹಸೀನಾ ಬಾಂಗ್ಲಾದೇಶದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರು ಮತ್ತು ದೇಶವನ್ನು ತೊರೆದರು. ನಂತರ ದೇಶದ ಆಡಳಿತವನ್ನು ಸೇನೆಯು ನಿಯಂತ್ರಣಕ್ಕೆ ತೆಗೆದುಕೊಂಡಿತು.
ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ಸಂಸತ್ತನ್ನು ವಿಸರ್ಜಿಸಿದ ನಂತರ ಮಧ್ಯಂತರ ಸರ್ಕಾರವನ್ನು ರಚಿಸಲಾಗುವುದು ಎಂದು ಹೇಳಿದರು. ಅಲ್ಲದೆ, ಅಧ್ಯಕ್ಷರು ಮಾಜಿ ಪ್ರಧಾನಿ ಖಲೀದಾ ಜಿಯಾ ಅವರನ್ನು ಬಿಡುಗಡೆ ಮಾಡಲು ಆದೇಶಿಸಿದರು, ಇದು ಬಾಂಗ್ಲಾದೇಶದ ರಾಜಕೀಯ ಭೂದೃಶ್ಯದಲ್ಲಿ ಮಹತ್ವದ ಬದಲಾವಣೆಯನ್ನು ಸೂಚಿಸುತ್ತದೆ.