ಶ್ರಾವಣ ಮಾಸ ಆರಂಭವಾಯಿತು ಎಂದಾಕ್ಷಣವೇ ಹಿಂದು ಹಬ್ಬಗಳು ಸಾಲು ಸಾಲಾಗಿ ಒಂದರ ಹಿಂದೆ ಒಂದು ಬರತೊಡಗುತ್ತದೆ. ಶ್ರಾವಣ ಮಾಸ ಹಾಗೂ ಮಳೆಗಾಲದಲ್ಲಿಯೇ ಹಬ್ಬಗಳು ಹೆಚ್ಚಾಗಿ ಬರಲು ಕಾರಣವೇನು. ಕಂಡಿತ ಇದಕ್ಕೆ ಕಾರಣ ಇದ್ದೆ ಇದೆ. ಅದನ್ನು ತಿಳಿಯುವ ಪ್ರಯತ್ನ ಮಾಡೋಣ. ಇಂದು ಶ್ರಾಮಣದ ಮೊದಲ ಹಬ್ಬದ ಕುರಿತು ತಿಳಿದುಕೊಳ್ಳುವ ಪ್ರಯತ್ನ ಈ ಲೇಖನ. ಹಿಂದೂ ಪಂಚಾಂಗದ ಪ್ರಕಾರ ಎಲ್ಲ ಹಬ್ಬಗಳಿಗೆ ಮುನ್ನುಡಿಯಂತೆ ಬರುವ ಹಬ್ಬ ಎಂದರೆ ಅದು ನಾಗರ ಪಂಚಮಿ .
ಪಂಚಮಿಯು ಭಾರತದ ಎಲ್ಲ ಭಾಗಗಳಲ್ಲಿ ಹಿಂದೂಗಳು ಆಚರಿಸುವ ಒಂದು ಪವಿತ್ರ ಹಬ್ಬ. ಇದನ್ನು ಶ್ರಾವಣಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ಈ ದಿನದಂದು, ನಾಗ ದೇವತೆಯನ್ನು ಪೂಜಿಸಲಾಗುತ್ತದೆ. ಪೂಜೆಯ ಅಂಗವಾಗಿ ದೇವಸ್ಥಾನ ಹಾಗೂ ಹುತ್ತಗಳಿಗೆ ಭೇಟಿ ನೀಡಿ, ಎಲ್ಲ ತೊಂದರೆ ತಾಪತ್ರಯಗಳಿಂದ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಜನರು ಹಾಲನ್ನು ಅರ್ಪಿಸುತ್ತಾರೆ. ಶ್ರಾವಣ ಶುದ್ಧ ಪಂಚಮಿಯಂದು ಆಚರಿಸಲ್ಪುಡುವ ಈ ಹಬ್ಬ ಮುಂದೆ ಬರಲಿರುವ ಗಣೇಶ ಚತುರ್ಥಿ, ಕೃಷ್ಣಾಷ್ಟಮಿ, ನವರಾತ್ರಿ, ದಸರಾ ಎಲ್ಲ ಶುಭ ಆಚರಣೆಗಳಿಗೆ ಮೊದಲ ಆರಂಭ ಅಥವಾ ಮೆಟ್ಟಿಲು ಎಂದೇ ಹೇಳಬಹುದು.

ನಾಗರ ಪಂಚಮಿ ಸಂಬಂಧಿಸಿದಂತೆ ಜನಪದ ಮತ್ತು ಪುರಾಣದಲ್ಲಿ ಹಲವು ಕಥೆಗಳಿವೆ. ಜನಪದ ಕಥೆಯ ಪ್ರಕಾರ ನಾಗರ ಪಂಚಮಿ ಬರುವುದು ಮುಂಗಾರಿನ ರಭಸದ ದಿನಗಳ ಮಧ್ಯೆ. ಈ ಕಾಲ ಕೃಷಿ ಚಟುವಟಿಕೆಗಳಿಗೆ ಪರ್ವ ಕಾಲ. ಈ ಕಾಲದಲ್ಲಿ ಕೃಷಿ ಕಾರ್ಯಕ್ಕೆ ಕೀಟ, ಮಿಡತೆಗಳ ಹಾವಳಿಯೂ ಅಧಿಕ. ಅಷ್ಟೇ ಅಲ್ಲದೆ ಫಸಲು ತಿನ್ನಲು ಬರುವ ಇಲಿಗಳಿಗಂತೂ ಕೊರತೆಯಿಲ್ಲ. ಇವೆಲ್ಲದರಿಂದ ರೈತನ ಫಸಲನ್ನು ಕಾಪಾಡುವುದು ಹಾವುಗಳು. ಶೃಷ್ಠಿಯ ಆಹಾರ ಚಕ್ರದಂತೆ ಇಲಿ, ಕಪ್ಪೆಗಳ ಅತಿಯಾದ ಹಾವಳಿಯನ್ನು ನಿಯಂತ್ರಿಸುವಲ್ಲಿ ನಾಗರ ಹಾವು ಪಾತ್ರ ಮುಖ್ಯ. ಇಂತಹ ರೈತ ಮಿತ್ರನಿಗೆ ಪುಟ್ಟದೊಂದು ಧನ್ಯವಾದ ಹೇಳಲು ನಡೆಸುವ ಪೂಜೆಯೇ ನಾಗರ ಪಂಚಮಿ.

ನಾಗರಪಂಚಮಿ ಬಗ್ಗೆ ಐತಿಹ್ಯಗಳು
ಸ್ಕಂದ ಪುರಾಣದಲ್ಲಿ ನಾಗರ ಪಂಚಮಿಯ ಮಾಹಿತಿ
ಸ್ಕಂದ ಪುರಾಣದಲ್ಲಿ ನಾಗರ ಪಂಚಮಿಯ ಬಗ್ಗೆ ಕೆಲ ಮಾಹಿತಿಗಳು ಸಿಗುತ್ತದೆ. ಶ್ರೀಕೃಷ್ಣನ ಮಗನಾದ ಸಾಂಬನು ಶಿವಸುತ ಸುಬ್ರಹ್ಮಣ್ಯನಲ್ಲಿ ನಾಗರ ಪಂಚಮಿಯನ್ನು ಯಾಕೆ ಆಚರಿಸಲಾಗುತ್ತದೆ ಎಂದು ಪ್ರಶ್ನೆ ಕೇಳಿದಾಗ ಆತನ ಒಂದು ಕಥೆಯನ್ನು ಹೇಳುತ್ತಾನೆ. ಹಿಂದೆ ದೇವಶರ್ಮ ಎಂಬ ಬ್ರಾಹ್ಮಣನೊಬ್ಬನಿದ್ದನು. ಆತನಿಗೆ 8 ಗಂಡು ಮಕ್ಕಳು ಹಾಗೂ ಒಬ್ಬಾಕೆ ಹೆಣ್ಣು ಮಗಳಿದ್ದಳು. ಒಂದು ದಿನ ಗರುಡನಿಂದ ಹೆದರಿಸಲ್ಪಟ್ಟ ನಾಗರವೊಂದು ಈ ಕನ್ನಿಕೆಯ ಬಳಿ ಬಂದು ಆಶ್ರಯವನ್ನು ಕೇಳುತ್ತದೆ. ಭಕ್ತಿಯಿಂದ ಕನ್ನಿಕೆ ಆ ನಾಗನಿಗೆ ಹಾಲು, ಫಲಗಳನ್ನು ಇಟ್ಟು ಭಕ್ತಿಯಿಂದ ಸಾಕುತ್ತಾಳೆ.
.ಒಂದು ಐತಿಹ್ಯದ ಪ್ರಕಾರ ಈ ಪಂಚಮಿಯನ್ನು ಸರ್ಪಯಜ್ಞವನ್ನು ನಿಲ್ಲಿಸಿದ ದಿನವೆಂದು ಹೇಳಲಾಗುತ್ತದೆ.ಜನಮೇಜಯ ರಾಜ ತನ್ನ ತಂದೆ ಪರೀಕ್ಷಿತ ರಾಜನ ಸಾವಿಗೆ ಸರ್ಪವೊಂದು ಕಾರಣವೆಂದು ತಿಳಿದು, ಭೂಲೋಕದಲ್ಲಿ ಸರ್ಪಸಂಕುಲವನ್ನು ನಿರ್ನಾಮ ಮಾಡಲು ‘ಸರ್ಪಯಜ್ಞ’ವನ್ನು ಆರಂಭಿಸುತ್ತಾನೆ.
ಋತ್ವಿಜರು ಹೋಮಮಾಡಲು ಆರಂಭಿಸಿದಾಗ ಸರ್ಪಗಳು ಒಂದರ ಹಿಂದೆ ಒಂದರಂತೆ ಬಂದು ಅಗ್ನಿಕುಂಡಕ್ಕೆ ಬಿದ್ದು ಬುದಿಯಾಗತೊಡಗಿತು. ಇದನ್ನು ಕಂಡ ಉಳಿದ ಸರ್ಪಗಳು ಸರ್ಪರಾಜ ವಾಸುಕಿಯ ತಂಗಿಯಾದ ಜರತ್ಕಾರು ಬಳಿ ಹೋಗಿ ದಯವಿಟ್ಟು ನಮ್ಮನ್ನು ಆ ರಾಜನ ಹೋಮದಿಂದ ರಕ್ಷಿಸು ಎಂದು ಬೇಡಿಕೊಳ್ಳುತ್ತವೆ. ಸರ್ಪಗಳ ಮನವಿಗೆ ಜರತ್ಕಾರು ಒಪ್ಪಿ ತನ್ನ ಮಗನಾದ ಆಸ್ತೀಕನಿಗೆ ಯಜ್ಞವನ್ನು ನಿಲ್ಲಿಸಿ ಬರುವಂತೆ ಸೂಚನೆ ನೀಡುತ್ತಾಳೆ.

ಆಸ್ತೀಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನ ಯಜ್ಞಶಾಲೆಯನ್ನು ಪ್ರವೇಶಿಸಿ ತನ್ನ ವಿದ್ಯಾಬಲದಿಂದ ಪ್ರಾಣಿ ಹಿಂಸೆ ಮಹಾಪಾಪ, ನೀನು ಈಗಾಗಲೇ ಮಾಡುತ್ತಿರುವ ಸರ್ಪಯಜ್ಞವನ್ನು ನಿಲ್ಲಿಸಬೇಕು ಎಂದು ಬೋಧಿಸಿದ. ಜನಮೇಜಯನು ಆಸ್ತಿಕನ ಮಾತಿಗೆ ಬೆಲೆಕೊಟ್ಟು ಸರ್ಪಯಜ್ಞವನ್ನು ನಿಲ್ಲಿಸಿದ ಎಂದು ಹೇಳಲಾಗುತ್ತದೆ. ಈ ದಿನ ಕೂಡ ಪಂಚಮಿಯ ದಿನವೇ ಆಗಿರುವುದು ವಿಶೇಷವಾಗಿದೆ.ಹೀಗೆ ನಾಗರ ಪಂಚಮಿ ಒಂದು ಕಾಲ,ಒಂದು ಜನಾಂಗ, ಒಂದು ಪ್ರದೇಶಕಷ್ಟೇ ಸೀಮಿತವಾಗದೆ ಎಲ್ಲ ಕಾಲ ಪ್ರದೇಶಗಳನ್ನು ಮೀರಿದ ಭಾವೈಕ್ಯತೆ ಬಾಂಧವ್ಯ ಬೆಸೆಯುವ ಹಬ್ಬವಾಗಿದೆ.

ಲೇಖನಉಮೇಶ ಮುಂಡಳ್ಳಿ

( ಮಾಹಿತಿ ಸಂಗ್ರಹ- ಜನಪದ ಮಾಹಿತಿ, ಸ್ಕಂದ ಪುರಾಣ, ಮಹಾಭಾರತ ಹಾಗೂ ಐತಿಹಾಸಿಕ ದಾಖಲೆಗಳು)