ದೆಹಲಿ: ಬಹುಕಾಲದಿಂದ ನೆನೆಗುದಿಗೆ ಬಿದ್ದಿರುವ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಮಾರ್ಗಕ್ಕೆ ಹೊಸ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್)ಸಿದ್ಧಪಡಿಸಲಾಗುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ ತಿಳಿಸಿದ್ದಾರೆ. ಯೋಜನೆಗೆ ಪರಿಸರವಾದಿಗಳಿಂದ ವಿರೋಧವಿದೆ, ಈ ಕಾರಣಕ್ಕೆ ರೈಲ್ವೆ ಮಾರ್ಗ ಯೋಜನೆಗೆ ಈಗಾಗಲೇ ಮಾಡಿರುವ ವಿನ್ಯಾಸವನ್ನು ರೈಲ್ವೆ ಇಲಾಖೆ ಬದಲಿಸಲಿದ್ದು ಜೋಡಿ ರೈಲ್ವೆ ಹಳಿ ನಿರ್ಮಾಣ ಮಾಡಲಾಗುವುದು ಎಂದು ಅವರು ಲೋಕಸಭೆಯಲ್ಲಿ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪ್ರಶ್ನೆಗೆ ಉತ್ತರ ನೀಡಿದರು.
ಹುಬ್ಬಳ್ಳಿ ಮತ್ತು ಕಿರಾವತಿ (47 km) ಭಾಗದಲ್ಲಿ ಮಣ್ಣು ಮತ್ತು ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ 569. 64 ಹೆಕ್ಟೇರ್ ಅರಣ್ಯ ಭೂಮಿ ಹಾಗೂ ಅದಕ್ಕೆ ಸಂಬಂಧಿಸಿದ ವ್ಯಾಜ್ಯಗಳ ಕಾರಣ ಮುಂದಿನ ಕೆಲಸ ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ. ಈಗ ವ್ಯಾಜ್ಯಗಳ ಪರಿಹಾರದ ನಂತರ ರೈಲು ಮಾರ್ಗವನ್ನು ಜೋಡಿ ಹಳಿಗಳೊಂದಿಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ರೈಲು ಮಾರ್ಗ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದು ಹೋಗುವುದರಿಂದ ಅರಣ್ಯ ಮತ್ತು ವನ್ಯಜೀವಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಇತ್ತೀಚಿಗೆ ರೈಲ್ವೆ ಇಲಾಖೆ ನಿರ್ಧರಿಸಿತ್ತು.