ಬೆಳಗಾವಿ : ಸದೃಢ ದೇಶದ ನಿರ್ಮಾಣಕ್ಕಾಗಿ ಮಕ್ಕಳಲ್ಲಿ ಈಗಿನಿಂದಲೇ ದೇಶ ಭಕ್ತಿ ಬೀಜ ಬಿತ್ತಬೇಕು. ಅವರು ಬೆಳೆಯುತ್ತ ಅವರಲ್ಲಿ ದೇಶ ಮೊದಲು ಎಂಬ ಭಾವನೆ ಗಟ್ಟಿಯಾಗುತ್ತದೆ. ಇಂತಹ ಕ್ಷಾತ್ರತೇಜವನ್ನು ಒಳಗೊಂಡ ಸಮಾಜ ಸೃಷ್ಟಿಯಾದಾಗ ಯಾವ ದುಷ್ಟ ಶಕ್ತಿ ನಮ್ಮ ದೇಶವನ್ನು ಏನೂ ಮಾಡಲು
ಸಾಧ್ಯವಿಲ್ಲ ಎಂದು ನಿವೃತ್ತ ಯೋಧ ಪ್ರದೀಪ ತಿಪ್ಪನಾಚೆ ಆಶಯ ವ್ಯಕ್ತಪಡಿದರು.ನಗರದ ಕಾಕತಿವೇಸನಲ್ಲಿರುವ ಗುರು ವಿವೇಕಾನಂದ
ವಿವಿಧೋದ್ದೇಶಗಳ ಸಹಕಾರ ಸಂಘದ ಕಚೇರಿಯಲ್ಲಿ ಸ್ವಾಂತ್ರ್ಯ ದಿನದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ದೇಶದ ರಕ್ಷಣೆಗೊಸ್ಕರ ಪ್ರತಿಯೊಬ್ಬರು ತಮ್ಮ ಸ್ವಾರ್ಥವನ್ನು ಬದಿಗಿಟ್ಟು ದೇಶಕ್ಕಾಗಿ ನಾವು ಎಂಬ ಮನೋಭಾವನೆ ಬೆಳೆಸಿಕೊಳ್ಳಬೇಕು. ಬೇರೆ ಬೇರೆ ಚಿಕ್ಕ ರಾಷ್ಟ್ರಗಳಲ್ಲಿರುವ ದೇಶಾಭಿಮಾನ ನಮ್ಮಲ್ಲಿಯೂ ಮೂಡಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಡಾ. ನಾರಾಯಣ ನಾಯ್ಕ ಮಾತನಾಡಿ, ಭಾರತಕ್ಕೆ
ಸ್ವಾತಂತ್ರ‍್ಯ ಬಂದು 78 ವಸಂತಗಳು ಪೂರ್ಣಗೊಂಡಿವೆ. ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಟ ನಡೆಸಿ ಸ್ವಾತಂತ್ರ್ಯವನ್ನು ತಂದು ಕೊಟ್ಟ ಮಹನೀಯರನ್ನು ಸದಾ ನಾವು ಸ್ಮರಿಸಿ ಕೊಳ್ಳುತ್ತಿರಬೇಕು. ಸ್ವಾತಂತ್ರ‍್ಯ ಸಂಗ್ರಾಮದ ಯಜ್ಞಕ್ಕೆ ತಮ್ಮನ್ನು ತಾವು ಆಹುತಿ ಕೊಟ್ಟಂತಹ ಸೇನಾನಿಗಳು ನಮಗೆ ಆರಾಧ್ಯರಾದರು. ಅವರು ಕೊಟ್ಟಂತಹ ಸ್ವಾತಂತ್ರ‍್ಯವನ್ನು ಹಗಲಿರುಳೆನ್ನದೇ ರಕ್ಷಿಸುತ್ತ ಬಂದವರು ನಮ್ಮ ಹೆಮ್ಮೆಯ ಸೈನಿಕರು. ಜೊತೆಗೆ ಇಡೀ ದೇಶಕ್ಕೆ ಅನ್ನ ಹಾಕುವ ರೈತ ನಮಗೆ ಪೂಜ್ಯನೀಯರು. ಇವರಿಬ್ಬರನ್ನು ನಾವು ಸದಾ ಗೌರವಿಸುತ್ತಿರಬೇಕು. ನಮ್ಮಲ್ಲಿರುವ ಒಡಕುಗಳನ್ನು ಬದಿಗಿಟ್ಟು
ದೇಶವೇ ಮೊದಲು ಎಂಬ ಸಂಕಲ್ಪ ನಮ್ಮದಾದಾಗ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು.ಸಂಘದ ಉಪಾಧ್ಯಕ್ಷ ಆನಂದ ರಾವ್, ನಿರ್ದೇಶಕರಾದ ಅಂಜನಕುಮಾರ ಗಂಡಗುದರಿ, ರಾಜೇಶ ಗೌಡ, ಆನಂದ ಶೆಟ್ಟಿ, ಗಣೇಶ ನಾಯಕ, ದುರ್ಗಪ್ಪಾ ತಳವಾರ, ಭಾರತಿ ಶೆಟ್ಟಿಗಾರ, ರೂಪಾ ಮಗದುಮ್, ಗಣೇಶ ಮರಕಲ, ಚಂದ್ರಕಾಂತ ಅಥಣಿಮಠ ಹಾಗೂ ಸಿಬ್ಬಂದಿ ವರ್ಗ, ಪಿಗ್ಮಿ ಸಂಗ್ರಹಕಾರರು, ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ವಿಶಾಲ ಪಾಟೀಲ ಸ್ವಾಗತಿಸಿದರು, ವನಿತಾ ಮೂಲ್ಯ ವಂದಿಸಿದರು, ನಿಧಿ ಕುಂದರ ನಿರೂಪಿಸಿದರು.