ಬೆಳಗಾವಿ :
“ರಾಜ್ಯದ ಜನ 65 ಬಿಜೆಪಿ ಶಾಸಕರನ್ನು ಆಯ್ಕೆ ಮಾಡಿರುವುದು ವಿಧಾನಸಭೆಯಲ್ಲಿ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲೆಂದು. ಆದರೆ ಇವರು ಸದನದಲ್ಲಿ ಚರ್ಚೆ ಮಾಡದೇ ಹೊರಗೆ ಹೋರಾಟ ಮಾಡಿದರೆ ಏನು ಪ್ರಯೋಜನ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಹೇಳಿದಿಷ್ಟು:
“ಬಿಜೆಪಿಯವರ ನಡವಳಿಕೆಯಿಂದ ಅವರ ಪಕ್ಷದಲ್ಲಿ ಒಮ್ಮತವಿಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಬಿಜೆಪಿ ಆರ್. ಅಶೋಕ್ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷರೂ ವಿಧಾನಸಭೆಯಲ್ಲಿ ಇದ್ದಾರೆ. ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸುವರ್ಣಸೌಧ ಕಟ್ಟಿಸಿರುವುದು ಉತ್ತರ ಕರ್ನಾಟಕದ ಸಮಸ್ಯೆಗಳು, ಬರ ಪರಿಸ್ಥಿತಿ ಹಾಗೂ ಸರ್ಕಾರದ ವೈಫಲ್ಯಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತಬೇಕು ಎಂದು. ಅವರ ಆಚಾರ, ವಿಚಾರ, ಜನಪರ ಧ್ವನಿಯನ್ನು ಸದನದಲ್ಲಿ ವ್ಯಕ್ತಪಡಿಸಬೇಕು. ಅದನ್ನು ಬಿಟ್ಟು ಹೊರಗೆ ಹೊರಾಟ ಮಾಡುತ್ತೇನೆ ಎಂದರೆ ಯಾರು ಕೇಳುತ್ತಾರೆ? ಅದರಿಂದ ಏನು ಪ್ರಯೋಜನ?
ಯಡಿಯೂರಪ್ಪ ಅವರು ಸಹ ಯಾವುದಾದರೂ ಕ್ಷೇತ್ರ ಆಯ್ಕೆಮಾಡಿಕೊಂಡು, ಸದನಕ್ಕೆ ಬಂದು ಮಾತನಾಡಲಿ. ನಮಗೆ ಯಾವುದೇ ಅಭ್ಯಂತರವಿಲ್ಲ. ಬಿಜೆಪಿ ಪಕ್ಷದಲ್ಲಿನ ಸಮನ್ವಯತೆ ಕೊರತೆ, ಆ ಪಕ್ಷದ ದೌರ್ಬಲ್ಯ ಮತ್ತು ವೈಫಲ್ಯ ಎದ್ದು ಕಾಣುತ್ತಿದೆ.
ರಮೇಶ್ ಜಾರಕಿಹೊಳಿ ಅವರ ಪ್ರಕರಣದ ಬಗ್ಗೆ ಮತ್ತೆ ತನಿಖೆ ನಡೆಸಲು ಸರ್ಕಾರ ತಯಾರಿ ನಡೆಸುತ್ತಿದೆಯೇ ಎಂಬ ಪ್ರಶ್ನೆಗೆ ನನಗದು ಗೊತ್ತಿಲ್ಲ ಎಂದರು.