ನವದೆಹಲಿ: ಹೊಸ ಮುಖ್ಯಮಂತ್ರಿ ನೇಮಕವಾಗುತ್ತಲೇ ಅವರ ಬಗ್ಗೆ ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಚುನಾವಣಾ ಹೊಸ್ತಿಲಲ್ಲಿರುವ ದೆಹಲಿಯಲ್ಲಿ ಮತ್ತೆ ಮಹಿಳೆಯೊಬ್ಬರು ಸಿಎಂ ಗದ್ದುಗೆ ಏರಿದ್ದಾರೆ. ದೆಹಲಿ ಸಿಎಂ ಆಗಿದ್ದ ಎಎಪಿ ನಾಯಕ ಅರವಿಂದ್‌ ಕೇಜ್ರಿವಾಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ ಸಚಿವೆಯಾಗಿದ್ದ ಅತಿಶಿ ಅವರಿಗೆ ಸಿಎಂ ಸ್ಥಾನ ಒಲಿದು ಬಂದಿದೆ. ಇಂದು ನಡೆದ ಎಎಪಿ ಶಾಸಕರ ಸಭೆಯಲ್ಲಿ ಚರ್ಚೆ ನಡೆಸಿ ಸಚಿವೆಯಾಗಿದ್ದ ಅತಿಶಿ ಅವರನ್ನು ಸಿಎಂ ಆಗಿ ನೇಮಕ ಮಾಡಲಾಗಿದೆ. ದೆಹಲಿ ಸಿಎಂ ಆಗಿದ್ದ ಅರವಿಂದ್‌ ಕೇಜ್ರಿವಾಲ್ ಅವರು ಎರಡು ದಿನಗಳ ಹಿಂದಷ್ಟೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಅವರು ಇಂದು ಸಂಜೆ 4 ಗಂಟೆಗೆ ಅವರು ರಾಜೀನಾಮೆ ನೀಡಿದ್ದು, ಹೀಗಾಗಿ ಅತಿಶಿ ಅವರನ್ನು ಸಿಎಂ ಆಗಿ ನೇಮಕ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್ ನಂತರ ದೆಹಲಿ ಸಿಎಂ ಗದ್ದುಗೆ ಹಿಡಿದ ಎರಡನೇ ಮಹಿಳೆ ಹಾಗೂ ರಾಜ್ಯದ ಸಿಎಂ ಆದ ಮೂರನೇ ಮಹಿಳೆ ಎಂಬ ಹೆಗ್ಗಳಿಕೆಗೆ ಅತಿಶಿ ಪಾತ್ರರಾಗಿದ್ದಾರೆ.

ಶೀಲಾ ದೀಕ್ಷಿತ್‌ಗೂ ಮೊದಲು ಬಿಜೆಪಿ ನಾಯಕಿ ದಿವಂಗತ ಸುಷ್ಮಾ ಸ್ವರಾಜ್ ಅವರು ದೆಹಲಿ ಸಿಎಂ ಆಗಿದ್ದರು. 1988ರಲ್ಲಿ ದೆಹಲಿ ಸಿಎಂ ಆಗಿದ್ದ ಅವರು 52 ದಿನಗಳ ಕಾಲ ದೆಹಲಿ ಸಿಎಂ ಆಗಿ ಕಾರ್ಯನಿರ್ವಹಿಸಿದ್ದರು. ಆದರೆ ಇವರ ನಂತರ ದೆಹಲಿ ಅಧಿಕಾರದ ಗದ್ದುಗೆ ಹಿಡಿದ ಕಾಂಗ್ರೆಸ್ ನಾಯಕಿ ದಿವಂಗತ ಶೀಲಾ ದೀಕ್ಷಿತ್ ಅವರು ಸುಮಾರು 15 ವರ್ಷಗಳ ಕಾಲ ದೆಹಲಿ ಸಿಎಂ ಆಗಿ ಕಾರ್ಯನಿರ್ವಹಿಸುವ ಮೂಲಕ ಅತೀ ಹೆಚ್ಚು ಅವಧಿಯವರೆಗೆ ದೆಹಲಿ ಸಿಎಂ ಆಗಿದ್ದ ನಾಯಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಅತಿಶಿ ಅವರು ದೆಹಲಿ ಸರ್ಕಾರದಲ್ಲಿ ಶಿಕ್ಷಣ ಹಾಗೂ ಲೋಕೋಪಯೋಗಿ ಇಲಾಖೆಯಂತಹ ಮಹತ್ವ ಖಾತೆಗಳನ್ನು ಹೊಂದಿದ್ದಾರೆ. ಆಕ್ಸ್‌ಫರ್ಡ್ ಯುನಿವರ್ಸಿಟಿಯ ಹಳೆ ವಿದ್ಯಾರ್ಥಿಯಾಗಿರುವ ಅತಿಶಿ ಮರ್ಲೆನಾ, ರೋಡಿಸ್ ವಿಶ್ವ ವಿದ್ಯಾನಿಲಯದಿಂದಲೂ ಪದವಿ ಪಡೆದಿದ್ದಾರೆ. ದೆಹಲಿಯ ಕಲ್ಕಾಜಿ ಕ್ಷೇತ್ರದ ಶಾಸಕರಾಗಿದ್ದ ಅತಿಶಿ, ಅಬಕಾರಿ ಮದ್ಯ ಹಗರಣದಲ್ಲಿ ಸಚಿವ ಮನೀಷ್ ಸಿಸೋದಿಯಾ ಅವರ ಬಂಧನದ ನಂತರ ಸಚಿವೆಯಾಗಿ ಆಯ್ಕೆಯಾಗಿದ್ದರು. ಕೇಜ್ರಿವಾಲ್ ಹಾಗೂ ಮನೀಷ್ ಸಿಸೋದಿಯಾ ಅವರು ಜೈಲಿನಲ್ಲಿದ್ದಾಗ ಪಕ್ಷದ ಕಾರ್ಯಕ್ರಮಗಳಲ್ಲಿ, ಮಾಧ್ಯಮಗಳಲ್ಲಿ ಪಕ್ಷ ಹಾಗೂ ನಾಯಕರನ್ನು ಸಮರ್ಥಿಸಿಕೊಳ್ಳುವ ಮೂಲಕ ಎಎಪಿಯ ನಿಷ್ಠಾವಂತ ನಾಯಕಿ ಎನಿಸಿದ್ದರು.

43 ವರ್ಷದ ಅತಿಶಿ ಅವರನ್ನು ಆಗಸ್ಟ್‌ 15 ರಂದು ನಡೆದ ಸ್ವಾತಂತ್ರ ದಿನಾಚರಣೆಯಂದು ದೆಹಲಿ ಸರ್ಕಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಲು ಅತಿಶಿ ಅವರನ್ನು ತಮ್ಮ ಅನುಪಸ್ಥಿತಿಯಲ್ಲಿ ಅರವಿಂದ ಕೇಜ್ರಿವಾಲ್ ಅವರು ಆಯ್ಕೆ ಮಾಡಿದ್ದರು.

ಅಬಕಾರಿ ಮಧ್ಯ ಹಗರಣದಲ್ಲಿ ಜೈಲು ಪಾಲಾಗಿ ಆರು ತಿಂಗಳ ಕಾಲ ಜೈಲಿನಲ್ಲಿ ಕಳೆದ ಅರವಿಂದ್ ಕೇಜ್ರಿವಾಲ್‌ ಅವರಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದ ಹಿನ್ನೆಲೆಯಲ್ಲಿ ಆಕ್ಟೋಬರ್ 13 ರಂದು ಜೈಲಿನಿಂದ ಬಿಡುಗಡೆಯಾಗಿದ್ದರು. ಇದಾಗಿ ಎರಡು ದಿನದ ನಂತರ ಎಎಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅರವಿಂದ್ ಕೇಜ್ರಿವಾಲ್ ಅವರು ಎರಡು ದಿನದಲ್ಲಿ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದರು, ಜನರೇ ತಾನು ಪ್ರಾಮಾಣಿಕ ಎಂದು ತೀರ್ಪು ನೀಡುವವರೆಗೆ ಸಿಎಂ ಕುರ್ಚಿ ಏರುವುದಿಲ್ಲ ಎಂದು ಹೇಳಿದ್ದರು. ಅದರಂತೆ ಇಂದು ಅವರು ರಾಜೀನಾಮೆ ನೀಡಲಿದ್ದು, ನೂತನ ಸಿಎಂ ಆಗಿ ಅತಿಶಿ ಅವರನ್ನು ಆಯ್ಕೆ ಮಾಡಿದ್ದಾರೆ.

ದೆಹಲಿ ವಿಧಾನಸಭಾ ಕ್ಷೇತ್ರಕ್ಕೆ ಮುಂದಿನ ವರ್ಷದ ಫೆಬ್ರವರಿ ತಿಂಗಳಲ್ಲಿ ಚುನಾವಣೆ ನಿಗದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್ ರಾಜೀನಾಮೆಯ ಹಿಂದೆ ಹಲವು ರಾಜಕೀಯ ಲೆಕ್ಕಾಚಾರಗಳಿವೆ ಎಂಬ ಚರ್ಚೆಯಾಗುತ್ತಿದೆ.

ದೆಹಲಿ ಗದ್ದುಗೆಗೆ ಹೊಸ ಸಿಎಂ ಘೋಷಣೆಯಾಗಿದೆ. ಅತಿಶಿ ಮರ್ಲೆನಾ ಶಾಸಕಾಂಗ ಪಕ್ಷದ ನೂತನ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸಿಎಂ ಸ್ಪರ್ಧೆಯಲ್ಲಿದ್ದ ಕೈಲಾಶ್ ಗೆಹ್ಲೋಟ್ ಅವರನ್ನು ಹಿಂದಿಕ್ಕಿ ಅತಿಶಿ ಮರ್ಲೆನಾ, ಸಿಎಂ ಹುದ್ದೆಯನ್ನು ಅಲಂಕರಿಸಲಿದ್ದಾರೆ. ವಿದೇಶದಲ್ಲಿ ಓದು ಮುಗಿಸಿರುವ ಈ ಅತಿಶಿ ಮರ್ಲೆನಾ ಯಾರು ?

ಹೊಸ ಸಿಎಂ ಬಳಿ ಇದೆ 1.41 ಕೋಟಿ ಮೌಲ್ಯದ ಆಸ್ತಿ ?: ದೆಹಲಿಯ ಸಿಎಂ ಆಗಿ ಅಧಿಕಾರ ಸ್ವೀಕರಿಸಲಿರುವ ಅತಿಶಿ ಮರ್ಲೆನಾ ದೆಹಲಿಯ ಕಲ್ಕಾಜಿ ದಕ್ಷಿಣದಿಂದ ಚುನಾವಣೆಯಲ್ಲಿ ಗೆದ್ದಿದ್ದರು. ಚುನಾವಣೆ ಸಮಯದಲ್ಲಿ ಅವರು ಹಂಚಿಕೊಂಡ ಅಫಿಡೆವಿಟ್ ಪ್ರಕಾರ ಅವರ ಬಳಿ 1.41 ಕೋಟಿ ಮೌಲ್ಯದ ನಿವ್ವಳ ಆಸ್ತಿ ಇದೆ. ದೆಹಲಿಯ ಕೋಟ್ಯಾಧಿಪತಿ ಮಂತ್ರಿಗಳ ಪಟ್ಟಿಯಲ್ಲಿ ಸೇರಿದ್ರೂ ಅತಿಶಿ ಮರ್ಲೆನಾ ವಿರುದ್ಧ ಯಾವುದೇ ಕೇಸ್ ಇಲ್ಲ. ಅತಿಶಿ ಮರ್ಲೆನಾ, ಎಲೆಕ್ಷನ್ ಕಮಿಷನ್ ಮುಂದೆ ತಮ್ಮ ಆಸ್ತಿಯ ವಿವರ ನೀಡಿದ್ದರು. ಅದ್ರ ಪ್ರಕಾರ, ಅವರ ಬಳಿ 30000 ರೂಪಾಯಿ ಕ್ಯಾಶ್ ಇದೆ. ಹಾಗೆಯೇ ಎಫ್ ಡಿ ಸೇರಿದಂತೆ 1.22 ಕೋಟಿ ರೂಪಾಯಿ ಬ್ಯಾಂಕ್ ನಲ್ಲಿದೆ.

ಕೋಟಿ ರೂಪಾಯಿ ಆಸ್ತಿ ಹೊಂದಿದ್ದರು, ಅತಿಶಿ ಮರ್ಲೆನಾ ಯಾವುದೇ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿಲ್ಲ. ಅವರು ಎಲ್ ಐಸಿ ಪಾಲಿಸಿ ಒಂದನ್ನು ಹೊಂದಿದ್ದಾರೆ. ಐದು ಲಕ್ಷ ರೂಪಾಯಿಯ ಎಲ್ ಐಸಿ ಹೆಲ್ತ್ ಇನ್ಶುರೆನ್ಸ್ ಪಾಲಿಸಿ ಹೊಂದಿರುವ ಅತಿಶಿ ಮರ್ಲೆನಾ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಆಸಕ್ತಿ ತೋರಿಸಿಲ್ಲ.

ಅತಿಶಿ ಮರ್ಲೆನಾ ಬಳಿ ಇಲ್ಲ ಸ್ವಂತ ಮನೆ, ಆಸ್ತಿ : 2012 ರಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನದ ಸಮಯದಲ್ಲಿ ರಾಜಕೀಯ ಪ್ರವೇಶಿಸಿದ ಅತಿಶಿ ಮರ್ಲೆನಾ ಅವರು ಆಮ್ ಆದ್ಮಿ ಪಕ್ಷದ (ಎಎಪಿ) ಸ್ಥಾಪಕ ಸದಸ್ಯರಲ್ಲಿ ಒಬ್ಬರು. 2019 ರ ಲೋಕಸಭಾ ಚುನಾವಣೆಯಲ್ಲಿ ಪೂರ್ವ ದೆಹಲಿ ಕ್ಷೇತ್ರದಿಂದ ಅತಿಶಿ ಮರ್ಲೆನಾ ಸ್ಪರ್ಧಿಸಿದ್ದರು. ಆದ್ರೆ ಬಿಜೆಪಿಯ ಗೌತಮ್ ಗಂಭೀರ್ ವಿರುದ್ಧ ಸೋತಿದ್ದರು. ಪಕ್ಷದ ವಿಶ್ವಾಸ ಗಳಿಸಿದ್ದ ಅತಿಶಿ, 2020 ರಲ್ಲಿ ದೆಹಲಿಯ ಕಲ್ಕಾಜಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅಲ್ಲಿಂದ ಆಮ್ ಆದ್ಮಿ ಪಕ್ಷದ ಶಾಸಕರಾಗಿದ್ದಾರೆ. ಅತಿಶಿ ಮರ್ಲೆನಾ ಬಳಿ ಸ್ವಂತ ಮನೆಯಿಲ್ಲ. ಸ್ವಂತ ಆಸ್ತಿ, ಜಮೀನನ್ನು ಕೂಡ ಅವರು ಹೊಂದಿಲ್ಲ.

43 ವರ್ಷದ ಅತಿಶಿ ಮರ್ಲೆನಾ, ಜೂನ್ 8, 1981ರಲ್ಲಿ ಜನಿಸಿದ್ದಾರೆ. ತಾಯಿಯ ಹೆಸರು ತ್ರಿಪ್ತ ವಾಹಿ ಮತ್ತು ತಂದೆಯ ಹೆಸರು ವಿಜಯ್ ಕುಮಾರ್ ಸಿಂಗ್, ಇವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಅತಿಶಿ ತನ್ನ ಶಾಲಾ ದಿನಗಳಲ್ಲಿ ತನ್ನ ಹೆಸರಿನೊಂದಿಗೆ ಮಾರ್ಕ್ಸ್ ಮತ್ತು ಲೆನಿನ್ ಪದ ಸೇರಿಸಿ ಮರ್ಲೆನಾ ಮಾಡಿ ತಮ್ಮ ಹೆಸರಿಗೆ ಜೋಡಿಸಿಕೊಂಡಿದ್ದರು. ಅತಿಶಿ ದೆಹಲಿಯ ಸ್ಪ್ರಿಂಗ್‌ಡೇಲ್ ಶಾಲೆಯಲ್ಲಿ ಪ್ರಾರಂಭಿಕ ಅಧ್ಯಯನ ನಡೆಸಿದ್ದರು. ನಂತರ ಅವರು ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ರೋಡ್ಸ್ ವಿದ್ಯಾರ್ಥಿವೇತನ ಪಡೆದ ಅವರು, ಲಂಡನ್ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು.

ಅತಿಶಿ ಮರ್ಲೆನಾ ಪತಿ : ದೆಹಲಿ ನೂತನ ಸಿಎಂ ಅತಿಶಿ ಮರ್ಲೆನಾ ಪತಿ ಹೆಸರು ಪ್ರವೀಣ್ ಸಿಂಗ್ . ಪ್ರವೀಣ್ ಸಿಂಗ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂದರೆ ಐಐಟಿ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಹಮದಾಬಾದ್ ಅಂದರೆ ಐಐಎಂನಲ್ಲಿ ಅಧ್ಯಯನ ಮಾಡಿದ್ದಾರೆ. ನಮ್ಮಷ್ಟಕ್ಕೆ ತಾವು ಕೆಲಸ ಮಾಡುವ ಅವರು ಇನ್ನೂ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿಲ್ಲ.