ಪ್ರಯಾಗರಾಜ್ :
ಶ್ರೀಕೃಷ್ಣ ಜನ್ಮಭೂಮಿ ಪ್ರಕರಣದ ಪ್ರಮುಖ ಬೆಳವಣಿಗೆಯಲ್ಲಿ ಅಲಹಾಬಾದ್ ಹೈಕೋರ್ಟ್ ಗುರುವಾರ ಮಥುರಾದ ಶಾಹಿ ಈದ್ಗಾ ಸಂಕೀರ್ಣದ ಸರ್ವೆ ನಡೆಸಲು ಅನುಮೋದನೆ ನೀಡಿದೆ.
ಹಿಂದೂಪರ ಸಂಘಟನೆಗಳು ಸಲ್ಲಿಸಿದ್ದ ಮನವಿಯನ್ನು ಸ್ವೀಕರಿಸಿರುವ ಅಲಹಾಬಾದ್ ಹೈಕೋರ್ಟ್ ವಿವಾದಿತ ಶಾಹಿ ಈದ್ಗಾ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆ ನಡೆಸಲು ಅನುಮತಿ ನೀಡಿದೆ.
ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಅವರು, “ಅಲಹಾಬಾದ್ ಹೈಕೋರ್ಟ್ ನಮ್ಮ ಅರ್ಜಿಯನ್ನು ವಕೀಲ ಕಮಿಷನರ್ ಮೂಲಕ (ಶಾಹಿ ಈದ್ಗಾ ಮಸೀದಿ) ಸಮೀಕ್ಷೆಗೆ ಒತ್ತಾಯಿಸಿ ಅನುಮತಿ ನೀಡಿದೆ.
ಶಾಹಿ ಈದ್ಗಾ ಮಸೀದಿಯ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ. ನಮ್ಮ ಬೇಡಿಕೆಯು ಶಾಹಿ ಈದ್ಗಾ ಮಸೀದಿ ಸರ್ವೆಯಾಗಿತ್ತು. ಶಾಹಿ ಈದ್ಗಾ ಸಂಕೀರ್ಣದಲ್ಲಿ ಹಿಂದೂ ದೇವಾಲಯದ ಸಾಕಷ್ಟು ಚಿಹ್ನೆಗಳಿವೆ. ಈ ಸಮೀಕ್ಷೆ ನಡೆಸಲು ಕೋರ್ಟ್ ಅನುಮತಿ ನೀಡಿದೆ. ಸಮೀಕ್ಷೆ ವಿಧಾನಗಳನ್ನು ಡಿಸೆಂಬರ್ 18 ರಂದು ನಿರ್ಧರಿಸಲಾಗುತ್ತದೆ” ಎಂದು ಹೇಳಿದ್ದಾರೆ.
ನ್ಯಾಯಾಲಯ ಮೂವರು ವಕೀಲರನ್ನು ಆಯುಕ್ತರನ್ನಾಗಿ ನೇಮಿಸಿ ವಿವಾದಿತ ನಿವೇಶನಗಳ ಸರ್ವೆ ನಡೆಸುವಂತೆ ಆದೇಶಿಸಿದೆ.
ಅಲಹಾಬಾದ್ ಹೈಕೋರ್ಟ್ ನ ಏಕ ಪೀಠದ ನ್ಯಾಯಮೂರ್ತಿ ಮಯಾಂಕಕುಮಾರ ಜೈನ್ ಈ ಆದೇಶ ನೀಡಿದ್ದಾರೆ. ಶ್ರೀಕೃಷ್ಣ ವಿರಾಜಮಾನನ ಪರವಾಗಿ ಹೈಕೋರ್ಟ್ನಲ್ಲಿ ಆದೇಶ 26 ನಿಯಮ 9 ರ ಅಡಿಯಲ್ಲಿ ಅರ್ಜಿ ಸಲ್ಲಿಸಲಾಯಿತು.
ಅರ್ಜಿಯಲ್ಲಿ ವಕೀಲ ಕಮಿಷನರ್ ಮೂಲಕ ಸರ್ವೆ ನಡೆಸುವಂತೆ ಆಗ್ರಹ ಮಾಡಲಾಗಿತ್ತು. ಈ ಅರ್ಜಿಯನ್ನು ಶ್ರೀ ಕೃಷ್ಣ ವಿರಾಜಮಾನನ ಪರವಾಗಿ ವಕೀಲ ವಿಷ್ಣುಶಂಕರ ಜೈನ್ ಅವರು ಹೈಕೋರ್ಟ್ನಲ್ಲಿ ವಾದಿಸಿದರು. ಮಥುರಾ ಜಿಲ್ಲಾ ನ್ಯಾಯಾಲಯದಿಂದ ವರ್ಗಾವಣೆಗೊಂಡಿರುವ ಮಥುರಾ ವಿವಾದಕ್ಕೆ ಸಂಬಂಧಿಸಿದ ಎಲ್ಲಾ 18 ಅರ್ಜಿಗಳ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ನಡೆಸುತ್ತಿದೆ.
ಅಯೋಧ್ಯೆ ವಿವಾದದ ಮಾದರಿಯಲ್ಲಿ ಅಲಹಾಬಾದ್ ಹೈಕೋರ್ಟ್ನಲ್ಲಿ ಮಥುರಾ ವಿವಾದದ ವಿಚಾರಣೆ ನಡೆಯುತ್ತಿದೆ. ಮಥುರಾ ಜಿಲ್ಲಾ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಎಲ್ಲಾ ಪ್ರಕರಣಗಳ ಫೈಲ್ಗಳನ್ನು ಸಹ ಹೈಕೋರ್ಟ್ಗೆ ತರಿಸಿಕೊಳ್ಳಲಾಯಿತು.
ಭಗವಾನ್ ಶ್ರೀಕೃಷ್ಣ ವಿರಾಜಮಾನ ಕತ್ರ ಕೇಶವ ದೇವ ಅವರ ಹೆಸರಿನಲ್ಲಿ ರಂಜನ್ ಅಗ್ನಿಹೋತ್ರಿ ಪರವಾಗಿ ಹೈಕೋರ್ಟಿನಲ್ಲಿ ಪ್ರಮುಖ ದಾವೆ ಹೂಡಲಾಗಿದೆ. ಅರ್ಜಿಗಳಲ್ಲಿ, ಅಕ್ಟೋಬರ್ 12, 1968 ರಂದು ಸಹಿ ಮಾಡಿದ ಒಪ್ಪಂದವನ್ನು ಕಾನೂನುಬಾಹಿರವೆಂದು ಘೋಷಿಸಲಾಗಿದೆ.
ಇದರೊಂದಿಗೆ ಒಪ್ಪಂದದಡಿ ಶಾಹಿ ಈದ್ಗಾ ಮಸೀದಿಗೆ ನೀಡಿರುವ 13.37 ಎಕರೆ ಜಾಗವನ್ನು ಶ್ರೀಕೃಷ್ಣ ದೇವಸ್ಥಾನಕ್ಕೆ ಹಸ್ತಾಂತರಿಸುವಂತೆ ಬೇಡಿಕೆ ಇಡಲಾಗಿದೆ. ಅನಧಿಕೃತವಾಗಿ ನಿರ್ಮಿಸಿರುವ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆಯೂ ಆಗ್ರಹ ಮಾಡಲಾಗಿದೆ.
ಶಾಹಿ ಈದ್ಗಾ ಮಸೀದಿ, ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್, ಶ್ರೀ ಕೃಷ್ಣ ಜನ್ಮಭೂಮಿ ಸೇವಾ ಸಂಘ ಮತ್ತು ಶ್ರೀ ಕೃಷ್ಣ ಜನ್ಮಭೂಮಿ ಸಂಘವನ್ನು ಈ ಪ್ರಕರಣದಲ್ಲಿ ಪಕ್ಷವನ್ನಾಗಿ ಮಾಡಲಾಗಿದೆ. ಹೈಕೋರ್ಟ್ನಲ್ಲಿ ಸಲ್ಲಿಕೆಯಾಗಿರುವ ಇತರ ಅರ್ಜಿಗಳ ವಿಚಾರಣೆಯನ್ನು ಡಿಸೆಂಬರ್ 18 ರಂದು ನ್ಯಾಯಾಲಯ ನಡೆಸಲಿದೆ.