ಬೆಳಗಾವಿ : ಬೆಳಗಾವಿ ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಹನಿಟ್ರ್ಯಾಪ್ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ10 ಲಕ್ಷ ರೂಪಾಯಿ ನಗದು, ಕೃತ್ಯಕ್ಕೆ ಬಳಸಿದ 3 ಬೈಕ್ ಮತ್ತು ಒಂದು ಮೊಬೈಲ್ ಫೋನ್ ಸೇರಿದಂತೆ ಒಟ್ಟು ₹ 13,40,000 ಬೆಲೆಯ ಹಣ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಪ್ರಕರಣದ ವಿವರ : ಶಹಾಪುರ ಬಸವನಗಲ್ಲಿಯ 23 ವರ್ಷದ ವಿದ್ಯಾರ್ಥಿನಿ ಇದರ ಮುಖ್ಯ ಸೂತ್ರಧಾರಿ. ತಾನು ಮಲಗಿದ್ದಾಗ ಭುಜಮುಟ್ಟಿ ಎಬ್ಬಿಸಿದ್ದರ ವಿಡಿಯೋ ಇಟ್ಟುಕೊಂಡು ತಮಗೆ ಅಪಹರಣ ಮಾಡಿ ನನ್ನಿಂದ 25 ಲಕ್ಷ ಬೇಡಿಕೆ ಇಟ್ಟು ಈಗಾಗಲೇ 15 ಲಕ್ಷ ರೂಪಾಯಿ ಹಣ ಪಡೆದು ಇನ್ನೂ 10 ಲಕ್ಷ ಕೊಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಟಿಳಕವಾಡಿ ಮಂಗಳವಾರಪೇಟೆಯ ದೂರುದಾರರು ಶಹಾಪುರ ಪೊಲೀಸರಿಗೆ ಪ್ರಕರಣದ ಬಗ್ಗೆ ದೂರು ನೀಡಿದ್ದರು. ಅದರಂತೆ ಶಹಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಕೊನೆಗೂ ಆರೋಪಿಗಳು ಪೊಲೀಸರ ವಶವಾಗಿದ್ದಾರೆ. ಇದರಲ್ಲಿ ವಿದ್ಯಾರ್ಥಿನಿ ಜೊತೆ ಶಹಾಪುರ ಗಾಡೆ ಮಾರ್ಗದ 25 ವರ್ಷದ ಪ್ರಶಾಂತ ಕಲ್ಲಪ್ಪ ಕೋಲ್ಕಾರ್, 29 ವರ್ಷದ ಕಣಬರ್ಗಿ ನಾಲ್ಕನೇ ಕ್ರಾಸ್ ಜ್ಯೋತಿರ್ಲಿಂಗ ಗಲ್ಲಿಯ ಕುಮಾರ ಗೋರಕ್ಕನವರ, 29 ವರ್ಷದ ಕಣಬರ್ಗಿಯ ರಾಜು ಜಡಗಿ ಅವರನ್ನು ಪೊಲೀಸರು ಬಂಧಿಸಿ ಈಗ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಅವರಿಂದ 10 ಲಕ್ಷ ರೂಪಾಯಿ ನಗದು, ಕೃತ್ಯಕ್ಕೆ ಬಳಸಿದ ಮೂರು ಬೈಕ್ ಮತ್ತು ಒಂದು ಮೊಬೈಲ್ ಸೇರಿ ಒಟ್ಟು 13,40,000 ₹ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.