ಉಡುಪಿ : ಮೊಗವೀರ ಮಹಾಜನ ಸಂಘದ ಸಂಚಾಲಿದ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಅಕ್ಟೋಬರ್ 3 ರಿಂದ 12ರ ವರೆಗೆ ನಡೆಯಲಿರುವ ಉಚ್ಚಿಲ ದಸರಾವನ್ನು ಉಡುಪಿ ಉಚ್ಚಿಲ ದಸರಾ ಘೋಷಣೆಯೊಂದಿಗೆ ಕ್ಷೇತ್ರದ ಶಾಲಿನಿ ಜಿ. ಶಂಕರ್ ಸಭಾಂಗಣದಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಜಿ. ಶಂಕರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಡುಬಿದ್ರಿಯಿಂದ ಕಾಪು ಸಮುದ್ರ ತೀರದ ದೀಪ ಸ್ತಂಭದವರೆಗೆ ಎಂ ಜಿ ಆರ್ ಗ್ರೂಪ್ ಅಧ್ಯಕ್ಷ ಕೆ. ಪ್ರಕಾಶ ಶೆಟ್ಟಿ ಪ್ರಾಯೋಜಕತ್ವದ ವಿದ್ಯುತ್ ದೀಪ ಅಲಂಕಾರದ ಉದ್ಘಾಟನಾ ಸಮಾರಂಭ ಅಕ್ಟೋಬರ್ 2ರಂದು ಸಂಜೆ 6:30 ಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ವಿವರಿಸಿದರು.

ನವ ದುರ್ಗೆಯರ, ಶಾರದಾ ಮಾತೆ ವಿಗ್ರಹಗಳನ್ನು ಕ್ಷೇತ್ರದ ತಂತ್ರಿ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ, ಪ್ರಧಾನ ಪುರೋಹಿತ ರಾಘವೇಂದ್ರ ಉಪಾಧ್ಯಾಯ ನೇತೃತ್ವದಲ್ಲಿ 3 ರಂದು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಬೆಳಗ್ಗೆ 10 ಗಂಟೆಗೆ ಉಡುಪಿ ಉಚ್ಚಿಲ ದಸರಾ-2024 ಉದ್ಘಾಟನೆಯಾಗಲಿದೆ. 10:30 ಕ್ಕೆ ದಸರಾ ಮಹೋತ್ಸವ ಪ್ರಯುಕ್ತ ಫಲಪುಷ್ಪ ಪ್ರದರ್ಶನ, ಗುಡಿ ಕೈಗಾರಿಕೆ ಪ್ರಾತ್ಯಕ್ಷಿಕೆ, ಸಮುದ್ರದ ಜೀವಂತ ಮೀನುಗಳ ಪ್ರದರ್ಶನ, ಕೇಂದ್ರ ಮತ್ತು ರಾಜ್ಯ ಸರಕಾರಗಳಲ್ಲಿ ಲಭ್ಯವಿರುವ ಮೀನುಗಾರಿಕೆ ಯೋಜನೆಗಳ ಮಾಹಿತಿ, ಮೀನುಗಾರಿಕಾ ಪರಿಕರಗಳ ಪ್ರದರ್ಶನ ಸೇರಿದಂತೆ ವಿವಿಧ ಪ್ರದರ್ಶನಗಳಿಗೆ ಚಾಲನೆ ನೀಡಲಾಗುತ್ತದೆ. ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ನೂರನೇ ವರ್ಷಾಚರಣೆ ಅಂಗವಾಗಿ ನವೀಕೃತ ಆಡಳಿತ ಕಚೇರಿಯನ್ನು ಉದ್ಘಾಟಿಸಲಾಗುತ್ತದೆ‌ ಸಂಜೆ 5 ಕ್ಕೆ ದಸರಾ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.