ಚಿಕ್ಕಮಗಳೂರು: ಭದ್ರಾ ಅಭಯಾರಣ್ಯ ವ್ಯಾಪ್ತಿಯ ಮುತ್ತೋಡಿ ಹೆಬ್ಬೆ ವಲಯದಲ್ಲಿ ಕಾಡಾನೆಯೊಂದು ಮೃತಪಟ್ಟಿತ್ತು. ಆ ಮೃತ ಆನೆಯ ಕಳೇಬರ ನೋಡಲು ಬಹು ದೂರದಿಂದ ಆನೆಗಳ ಹಿಂಡೇ ಆಗಮಿಸಿರುವುದು ಅಚ್ಚರಿ ಸಂಗತಿ. ಈ ಕಾಡಾನೆಗಳು ಮೃತ ಆನೆಯ ಕಳೇಬರದ ಸಮೀಪ ಕೆಳಹೊತ್ತು ಇದ್ದು ತೆರಳುತ್ತಿರುವ ದೃಶ್ಯ ಈಗ ಅರಣ್ಯ ಇಲಾಖೆ ಅಳವಡಿಸಿದ ಟ್ರ್ಯಾಪ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ತಮ್ಮೊಂದಿಗೆ ಇದ್ದ ಕಾಡಾನೆ ಮೃತಪಟ್ಟಿದ್ದು ದೂರದಲ್ಲಿ ಇದ್ದ ಕಾಡಾನೆಗಳ ಹಿಂಡು ಆಗಮಿಸಿ ಆ ಕಳೇಬರದ ಸುತ್ತ ತಿರುಗುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಒಂದು ವಂಶದ ಆನೆಗಳು ವರ್ಷಕ್ಕೊಮ್ಮೆ ಒಂದು ಕಡೆ ಸೇರುತ್ತವಂತೆ. ಆನೆಗಳು ಮೃತಪಟ್ಟರೆ ಉಳಿದ ಆನೆಗಳು ಹುಡುಕಿಕೊಂಡು ಬರುತ್ತವಂತೆ. ಇಲ್ಲಿಯೂ ಅಂಥ ಘಟನೆ ಈಗ ಪುನರಾವರ್ತನೆಗೊಂಡಿದೆ. ಭದ್ರಾ ಅಭಯಾರಣ್ಯದ ಮುತ್ತೋಡಿ ಹೆಬ್ಬೆ ವಲಯದಲ್ಲಿ ಫೆಬ್ರವರಿಯಲ್ಲಿ ಕಾಡಾನೆ ಮೃತಪಟ್ಟಿತ್ತು.

ಅರಣ್ಯ ಇಲಾಖೆ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದೆ. ಅರಣ್ಯ ಕಾಯ್ದೆಯಂತೆ ಮೃತಪಟ್ಟ ಆನೆಯನ್ನು ಸುಡುವಂತಿಲ್ಲ. ಜೊತೆಗೆ ಆನೆಯ ಮೃತ ಶರೀರವನ್ನು ಮಣ್ಣಲ್ಲಿ ಹೂಳುವಂತಿಲ್ಲ. ಹಾಗಾಗಿ ಕಳೇಬರವನ್ನು ಅರಣ್ಯದಲ್ಲಿ ಬಿಟ್ಟು ಬರಲಾಗಿತ್ತು. ಆನೆಯ ಕಳೇಬರ ಯಾವ ರೀತಿ ಮತ್ತೆ ಮಣ್ಣು ಸೇರಲಿದೆ ? ಯಾವ ಪ್ರಾಣಿಗಳು ಕಳೇಬರವನ್ನು ಭಕ್ಷಿಸಲಿವೆ ಎಂಬ ಉದ್ದೇಶದಿಂದ ಇಲಾಖೆ ಟ್ರ್ಯಾಕ್‌ ಕ್ಯಾಮೆರಾ ಅಳವಡಿಸಿತ್ತು. ಇದೀಗ ಕ್ಯಾಮೆರಾ ಪರಿಶೀಲಿಸಿದಾಗ ಆನೆಯ ಕಳೇಬರ ಬಳಿ ಸುಮಾರು 17 ಕಾಡಾನೆ ಬಂದಿರುವುದು ಸೆರೆಯಾಗಿದೆ.

ಆನೆಗಳು ಮಾನವರಂತೆ ಮಾತನಾಡುವುದಿಲ್ಲ ನಿಜ. ಆದರೆ ಅವುಗಳಿಗೆ ಸಹ ಭಾವನೆ ಎಂಬುದು ಇದೆ. ಅವು ತಮ್ಮೊಂದಿಗಿದ್ದ ಒಟ್ಟು 17 ಆನೆಗಳೊಂದಿಗೆ ಮರಣ ಹೊಂದಿದ ಆನೆಯ ಬಳಿ ಬಂದು ಹೋಗಿರುವುದು ನಿಜಕ್ಕೂ ಪ್ರಾಣಿಗಳಿಗೂ ಸಹ ಭಾವನೆ ಹಾಗೂ ಅಪಾರ ಬುದ್ಧಿಶಕ್ತಿ ಇದೆ ಎನ್ನುವುದನ್ನು ಸಾಬೀತುಪಡಿಸಿದೆ.