ಮುಂಬೈ: ಕಾಂಗ್ರೆಸ್‌ನ ಓಲೈಕೆ ರಾಜಕಾರಣದ ಮಾಡುತ್ತಿದೆ ಎಂದು ಆರೋಪಿಸಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮತ ಓಲೈಕೆಗಾಗಿ ತಮ್ಮ ಕುಟುಂಬದ ತ್ಯಾಗವನ್ನು ಕಾಂಗ್ರೆಸ್ ಅಧ್ಯಕ್ಷರು ಮರೆತಿದ್ದಾರೆ ಎಂದು ಮಂಗಳವಾರ ಹೇಳಿದ್ದಾರೆ. ಖರ್ಗೆಯವರ ಬಾಲ್ಯದ ದುರಂತದ ಬಗ್ಗೆ ಪ್ರಸ್ತಾಪಿಸಿದ ಯೋಗಿ ಆದಿತ್ಯನಾಥ, 1948 ರಲ್ಲಿ ಹೈದರಾಬಾದ್ ನಿಜಾಮರ ರಜಾಕಾರರು ಅವರ ಗ್ರಾಮವನ್ನು ಸುಟ್ಟುಹಾಕಿದರು ಮತ್ತು ಅವರ ತಾಯಿ ಮತ್ತು ಸಹೋದರಿ ಸುಟ್ಟುಹೋಗಿದ್ದರು ಎಂದು ನೆನಪಿಸಿದ್ದಾರೆ.
ಮಹಾರಾಷ್ಟ್ರದ ಅಚಲಪುರದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಆದಿತ್ಯನಾಥ, ಖರ್ಗೆ ಅವರ “ಬಾಟೇಂಗೆ ತೋ ಕಟೇಂಗೆ (ವಿಭಜಿಸಿದರೆ ನಾವು ನಾಶವಾಗುತ್ತೇವೆ)” ಎಂಬ ಘೋಷಣೆ ಬಗ್ಗೆ ಖರ್ಗೆ ಟೀಕೆಗೆ ಪ್ರತಿಕ್ರಿಯಿಸಿ, “ನಾನು ಯೋಗಿ, ಮತ್ತು ನನಗೆ ರಾಷ್ಟ್ರವು ಮೊದಲು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ತುಷ್ಟೀಕರಣ ರಾಜಕೀಯವು ಮೊದಲು” ಎಂದು ಖರ್ಗೆ ಟೀಕೆಗೆ ತಿರುಗೇಟು ನೀಡಿದ್ದಾರೆ.
ಭಾರತದಲ್ಲಿ ಏಕೀಕರಣಗೊಳ್ಳುವ ಮೊದಲು ಹೈದರಾಬಾದಿನಲ್ಲಿ ರಾಜಕೀಯ ಅಶಾಂತಿಯ ಸಂದರ್ಭದಲ್ಲಿ ಖರ್ಗೆಯವರ ಬಾಲ್ಯದ ದುರಂತದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಖರ್ಗೆಯವರು ನಿಜಾಮರ ಆಳ್ವಿಕೆಯ ಹಿಂದಿನ ಹೈದರಾಬಾದ್ ರಾಜ್ಯಕ್ಕೆ ಸೇರಿದ ಬೀದರ್ ಪ್ರದೇಶದಲ್ಲಿ ಜನಿಸಿದರು.
“ಖರ್ಗೆ ಜೀ, ನನ್ನ ಮೇಲೆ ಸಿಟ್ಟು ಮಾಡಿಕೊಳ್ಳಬೇಡಿ… ನಿಮಗೆ ಸಿಟ್ಟು ಬರುವುದಾದರೆ ಹೈದರಾಬಾದ್ ನಿಜಾಮನ ಮೇಲೆ ಸಿಟ್ಟು ಮಾಡಿಕೊಳ್ಳಿ. ಹೈದರಾಬಾದ್ ನಿಜಾಮರ ರಜಾಕಾರರು ನಿಮ್ಮ ಗ್ರಾಮವನ್ನು ಸುಟ್ಟರು, ಹಿಂದೂಗಳನ್ನು ಬರ್ಬರವಾಗಿ ಕೊಂದರು ಮತ್ತು ನಿಮ್ಮ ಗೌರವಾನ್ವಿತ ತಾಯಿ, ಸಹೋದರಿ, ನಿಮ್ಮ ಕುಟುಂಬ ಸದಸ್ಯರನ್ನು ಸುಟ್ಟರು. ಈ ಸತ್ಯವನ್ನು ದೇಶದ ಮುಂದೆ ಪ್ರಸ್ತುತಪಡಿಸಿ. ಆದರೆ ಖರ್ಗೆಯವರು ಈ ಸತ್ಯವನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತಾರೆ, ಯಾಕೆಂದರೆ ಮುಸ್ಲಿಮರ ಮತಕ್ಕಾಗಿ ಖರ್ಗೆಯವರು ಹಾಗೆ ಮಾಡುತ್ತಿದ್ದಾರೆ ಎಂದು ಆದಿತ್ಯನಾಥ ಹೇಳಿದರು.1948 ರಲ್ಲಿ, ಹೈದರಾಬಾದ್‌ನ ನಿಜಾಮರು ಭಾರತದಲ್ಲಿ ಹೈದರಾಬಾದ್ ಏಕೀಕರಣ ಆಗುವುದನ್ನು ವಿರೋಧಿಸಿದರು. ರಜಾಕಾರರು ನಿಜಾಮ್ ಪರ ಸೇನಾಪಡೆಗಳಲ್ಲಿದ್ದರು ಮತ್ತು ಏಕೀಕರಣವನ್ನು ಬೆಂಬಲಿಸಿದ ಸ್ಥಳೀಯ ಹಿಂದೂಗಳ ವಿರುದ್ಧ ದೌರ್ಜನ್ಯ ನಡೆಸಿದರು. ಭಾರತದ ಸೈನ್ಯವು ಹೈದರಾಬಾದ್ ಅನ್ನು ಆಕ್ರಮಿಸಿತು ಮತ್ತು ನಿಜಾಮನ ಪಡೆಗಳನ್ನು ಸೋಲಿಸಿತು.
“ಎಂವಿಎ ಮಹಾರಾಷ್ಟ್ರವನ್ನು ‘ಲವ್ ಜಿಹಾದ್’ ಮತ್ತು ‘ಲ್ಯಾಂಡ್ ಜಿಹಾದ್’ ಕೇಂದ್ರವನ್ನಾಗಿ ಮಾಡಿದೆ. ಅವು ರಾಷ್ಟ್ರೀಯ ಸಮಗ್ರತೆಯನ್ನು ಹಾಳುಮಾಡುವ ಮೈತ್ರಿಯಾಗಿದೆ” ಎಂದು ಅವರು ವಾಗ್ದಾಳಿ ನಡೆಸಿದರು.
ಯೋಗಿ ವಿರುದ್ಧ ಖರ್ಗೆ ಟೀಕೆ…
“ನಿಜವಾದ ಯೋಗಿ” ಎಂದಿಗೂ “ಬಾಟೇಂಗೆ ತೋ ಕಟೆಂಗೆ” ಎಂಬ ಟೀಕೆಗಳನ್ನು ಮಾಡುವುದಿಲ್ಲ ಮತ್ತು ಅಂತಹ ಭಾಷೆಯನ್ನು “ಭಯೋತ್ಪಾದಕರು” ಬಳಸುತ್ತಾರೆ ಎಂಬ ಮಲ್ಲಿಕಾರ್ಜುನ ಖರ್ಗೆ ಟೀಕೆಗೆ ಯೋಗಿ ಆದಿತ್ಯನಾಥ ತಿರುಗೇಟು ನೀಡಿದ್ದಾರೆ. “ಹಲವು ನಾಯಕರು ಕಾವಿ ಬಟ್ಟೆ ಧರಿಸುತ್ತಾರೆ ಮತ್ತು ತಲೆ ಬೋಳಿಸಿಕೊಂಡಿದ್ದಾರೆ, ಕೆಲವರು ಮುಖ್ಯಮಂತ್ರಿಗಳೂ ಆಗುತ್ತಿದ್ದಾರೆ. ನೀವು ಸನ್ಯಾಸಿಯಾಗಿದ್ದರೆ ರಾಜಕೀಯದಿಂದ ದೂರವಿರಿ” ಎಂದು ಸೋಮವಾರ ನಡೆದ ರ್ಯಾಲಿಯಲ್ಲಿ ಖರ್ಗೆ ವಾಗ್ದಾಳಿ ನಡೆಸಿದ್ದರು.
ಆದಿತ್ಯನಾಥ್ ಅವರ “ಬಾಟೇಂಗೆ ತೋ ಕಟೇಂಗೆ” ಘೋಷಣೆಯು ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿಯ ಪ್ರಚಾರದ ಪ್ರಮುಖ ವಿಷಯವಾಗಿದೆ. ಇದು ಹಿಂದೂ ಮತ ಕ್ರೋಢೀಕರಣಕ್ಕಾಗಿ ಮತ್ತು ಜಾತಿ ಆಧಾರಿತ ಮತದಾನವನ್ನು ತಟಸ್ಥಗೊಳಿಸುವ ನಿಟ್ಟಿನಲ್ಲಿ ಒಂದು ಕೂಗು ಎಂದು ನೋಡಲಾಗುತ್ತಿದೆ.