ಬೆಳಗಾವಿ :
ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಮುಂದೆ ಬರಬೇಕು. ಅದಕ್ಕಾಗಿ ಪ್ರತಿಯೊಬ್ಬರು ಉನ್ನತ ಶಿಕ್ಷಣ ಪಡೆಯುವ ಗುರಿ ಇಟ್ಟುಕೊಳ್ಳಬೇಕು. ವಿದ್ಯಾರ್ಥಿ ಜೀವನದ ಸುವರ್ಣ ಅವಕಾಶವನ್ನು ಸದುಪಯೋಗ ಪಡೆದುಕೊಂಡು ಜೀವನದ ಗುರಿ ಸಾಧಿಸಲು ಸತತ ಪ್ರಯತ್ನ ಮಾಡಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸಲಹೆ ನೀಡಿದರು.
ಬೆಳಗಾವಿ ಶಿಕ್ಷಣ ಸಂಸ್ಥೆಯ ಶ್ರೀಮತಿ ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿನಿಯರು ಪಾಲಕರ ನಿರೀಕ್ಷೆಯನ್ನು ಹುಸಿಗೊಳಿಸದೆ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಸ್ವಂತ ಕಾಲ ಮೇಲೆ ನಿಲ್ಲಬೇಕು. ಸ್ವಾಭಿಮಾನಿ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ತಂದೆ-ತಾಯಿ ಬಹಳಷ್ಟು ಕಷ್ಟಪಟ್ಟು ಮಕ್ಕಳನ್ನು ಓದಿಸುತ್ತಾರೆ. ಮಕ್ಕಳ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಅದಕ್ಕೆ ತಕ್ಕಂತೆ ಓದಬೇಕು. ಅವಕಾಶಗಳು ಸಾಕಷ್ಟಿವೆ, ಶಿಕ್ಷಣಕ್ಕೆ ಬೇಕಾದಷ್ಟು ಪ್ರೋತ್ಸಾಹವೂ ಇದೆ. ಪ್ರತಿ ಮಗುವೂ ಓದಬೇಕು, ಸ್ವಂತ ಕಾಲ ಮೇಲೆ ನಿಲ್ಲುವಂತಾಗಬೇಕೆನ್ನುವುದೇ ಸರಕಾರದ ಉದ್ದೇಶ ಎಂದು ಹೇಳಿದರು.
ಚಂದ್ರಯಾನದಲ್ಲೂ ಹೆಣ್ಣುಮಕ್ಕಳು ಸಾಧನೆ ಮಾಡಿದ್ದಾರೆ. ಯಾವುದೇ ಕ್ಷೇತ್ರ ಆಯ್ದುಕೊಂಡರು ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಂಡು ನೀವೂ ಗುರಿಯೊಂದಿಗೆ ಮುನ್ನಡೆದು ದೇಶದ ಆಸ್ತಿಗಳಾಗಿ ಎಂದು ಹೇಳಿದರು.
ಕ್ರೀಡೆಗಳಲ್ಲಿ ಸಾಧನೆ ಮಾಡಿದ ದಿವ್ಯಾ ಶಹಾಪುರಕರ, ಸೃಷ್ಟಿ ಹುಕ್ಕೇರಿಕರ, ಸಂಜನಾ ಎಲ್ಲಮ್ಮನವರ, ಮಯೂರಿ ಹಳಿಯಾಳಕರ ಅವರನ್ನು ಪುರಸ್ಕಾರ ನೀಡಿ ಗೌರವಿಸಲಾಯಿತು.
ಬೆಳಗಾವಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಸುಧೀರ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಮಾಜಿ ವಿದ್ಯಾರ್ಥಿಗಳಾದ ಮಾವಿನಕಟ್ಟಿ ಮಠ, ಕಿರಣ ಮಾಲಿ ಪಾಟೀಲ, ಸಂಸ್ಥೆಯ ಕಾರ್ಯದರ್ಶಿ ಶ್ರೀನಿವಾಸ ಶಿವಣಗಿ, ಶಾಲಾ ಸುಧಾರಣೆ ಸಮಿತಿಯ ಅಧ್ಯಕ್ಷ ಚಿಂತಾಮಣಿ ಗ್ರಾಮೋಪಾಧ್ಯಾಯ ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಾಯ ಎಂ.ಕೆ. ಮಾದಾರ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕರಾದ ಎಸ್.ಎಂ.ಐಹೊಳೆ ಹಾಗೂ ವೈಷ್ಣವಿ ಸುಪೆ ನಿರೂಪಿಸಿದರು. ಸರಸ್ವತಿ ದೇಸಾಯಿ ವಂದಿಸಿದರು.