ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಯುಕ್ತ ಗುರುವಾರ ಪಂಚಮಿ ರಥ ಮತ್ತು ಬ್ರಹ್ಮರಥಕ್ಕೆ ಶಿಖರ ಮುಹೂರ್ತ ನಡೆಯಿತು.
ಕ್ಷೇತ್ರ ಪುರೋಹಿತ ಮಧುಸೂದನ ಕಲ್ಲೂರಾಯ ಅವರು ಶಿಖರ ಮುಹೂರ್ತ ನೆರವೇರಿಸಿದರು. ಶಿಖರಗಳಿಗೆ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಿದರು. ಮೂಲನಿವಾಸಿ ಮಲೆಕುಡಿಯ ಜನಾಂಗದವರು ನೂತನ ಶಿಖರವನ್ನು ಬ್ರಹ್ಮರಥಕ್ಕೆ ಅಳವಡಿಸಿದರು. ಪಂಚಮಿ ರಥಕ್ಕೆ ಶಿಖರ ಅಳವಡಿಸಲಾಯಿತು.
ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ದೇವಳದ ಹೆಬ್ಬಾರ್ ಪ್ರಸನ್ನ ಭಟ್, ಪಾಟಾಳಿ ಲೋಕೇಶ್ ಎ.ಆರ್., ಮೂಲನಿವಾಸಿ ಮಲೆಕುಡಿಯ ಜನಾಂಗದ ಗುರಿಕಾರ ಚಂದ್ರಶೇಖರ ಕೋಡಿಕಜೆ ಉಪಸ್ಥಿತರಿದ್ದರು.
ಪಲ್ಲಪೂಜೆ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾ ಷಷ್ಠಿ ಜಾತ್ರಾ ಮಹೋತ್ಸವದ ಕಾರ್ತಿಕ ಶುದ್ಧ ಚೌತಿಯ ದಿನವಾದ ಗುರುವಾರ ದೇವಳದಲ್ಲಿ ಪಲ್ಲಪೂಜೆ ಸಂಭ್ರಮದಿಂದ ನೆರವೇರಿತು. ದೇವಳದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ ಅವರು ದೇವಳದ ಒಳಾಂಗಣದಲ್ಲಿ ಪಲ್ಲಪೂಜೆ ನೆರವೇರಿಸಿದರು. ಅಕ್ಷಯ ಪಾತ್ರೆಗೆ ಪೂಜೆ ಸಲ್ಲಿಸಿದರು. ಕುಕ್ಕೆಯಲ್ಲಿ ನಿರಂತರ ಅನ್ನದಾನ ನಡೆಯುವುದು ಪ್ರಧಾನವಾಗಿದ್ದು ಜಾತ್ರಾ ಸಮಯ ವಿಶೇಷ ಭೋಜನ ಪ್ರಸಾದ ವಿತರಣೆಯ ಸಂಕೇತವಾಗಿ ದೇವಳದಲ್ಲಿ ಪಲ್ಲಪೂಜೆ ನೆರವೇರಿದೆ. ಜಾತ್ರೋತ್ಸವದ ಪ್ರಧಾನ ನಾಲ್ಕು ದಿನಗಳಾದ ಚೌತಿ, ಪಂಚಮಿ, ಷಷ್ಠಿ ಮತ್ತು ಅವಭೃತೋತ್ಸವದಂದು ವಿಶೇಷ ಅನ್ನದಾನ ನಡೆಯುತ್ತದೆ.