ರಾಣೆ ಬೆನ್ನೂರು:
ದೇಶದಲ್ಲಿ ಎಲ್ಲದರಲ್ಲಿಯೂ ರಾಜಕೀಯ ಇದ್ದೆ ಇರುತ್ತದೆ. ಹೀಗಾಗಿ ಧಾರ್ಮಿಕತೆಯಲ್ಲಿಯೂ ರಾಜಕೀಯ ಸೇರಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ಆರ್.ಟಿ.ಇ.ಎಸ್ ಕಾಲೇಜಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಹಳ ಜನರ ನಿರೀಕ್ಷೆಯಂತೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿದೆ. ಅಯೋಧ್ಯೆಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡುತ್ತಿದ್ದಾರೆ. ಚುನಾವಣಾ ವೇಳೆ ಅಭಿವೃದ್ಧಿಗಿಂತ ಧಾರ್ಮಿಕ ವಿಚಾರಗಳು ಹೈಲೆಟ್ ಆಗುತ್ತವೆ. ಆದರೆ ಚುನಾವಣೆ ಮುಗಿದ ಬಳಿಕ ಅದರ ಲಾಭ, ನಷ್ಟ ತಿಳಿಯಲಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಸುಮಾರು ಪ್ರತಿಷ್ಠಿತ ಮಂದಿರಗಳು ಇವೆ, ಬಹಳಷ್ಟು ಮಂದಿರದಲ್ಲಿ ರಾಮ ಮಂದಿರವು ಒಂದಾಗಿದೆ. ಈ ಮಂದಿರ ಮಾರ್ಡನ್ ಅರ್ಕಿಟೆಕ್ ನಿಂದ ಕೂಡಿದೆ ಎಂದರು. ಇನ್ನು ಅಯೋಧ್ಯೆ ಏರ್ ಪೋರ್ಟ್ ಗೆ ವಾಲ್ಮೀಕಿ ಶ್ರೀಗಳ ಹೆಸರಿಟ್ಟ ವಿಚಾರ ಬಗ್ಗೆ ಮಾತನಾಡಿ, ಅಯೋಧ್ಯೆ ಏರ್ ಪೋರ್ಟ್ ಗೆ ವಾಲ್ಮೀಕಿಯವರ ಹೆಸರಿಟ್ಟಿದ್ದು ಸಂತಸದ ವಿಚಾರ. ನಾವು ಸ್ವಾಗತ ಮಾಡುತ್ತೇವೆ, ಇದನ್ನೆ ಈ ಹಿಂದೆ ನಾವು ಒತ್ತಾಯ ಮಾಡಿದ್ದೇವು. ರಾಮ ಮಂದಿರ ಪಕ್ಕದಲ್ಲೇ ವಾಲ್ಮೀಕಿ ಮಂದಿರ ನಿರ್ಮಾಣ ಮಾಡಬೇಕು. ಏಕೆಂದರೆ ರಾಮನನ್ನು ಪರಿಚಯಿಸಿದ್ದು ವಾಲ್ಮೀಕಿ ಎಂದು ತಿಳಿಸಿದರು.
ಡಿಸಿಎಂ ಆಯ್ಕೆ ವಿಚಾರ ಬಗ್ಗೆ ಮಾತನಾಡಿ, ಡಿಸಿಎಂ ಸ್ಥಾನದ ಬಗ್ಗೆ ಸದ್ಯ ಯಾವುದೇ ಪ್ರಸ್ತಾಪ ಮಾಡಿಲ್ಲ. ಡಿಸಿಎಂ ಮಾಡೋದು, ಬಿಡೋದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಈ ಬಗ್ಗೆ ಹೈಕಮಾಂಡ್ ತಿರ್ಮಾನವೇ ಅಂತಿಮ ಎಂದು ತಿಳಿಸಿದರು.
ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ, ಕಲ್ಲಡ್ಕರ್ ಪ್ರಭಾಕರ್ ಭಟ್ ಮೇಲೆ ಈಗಾಗಲೇ ಕೇಸ್ ದಾಖಲಾಗಿದೆ. ಈ ಬಗ್ಗೆ ಕೋರ್ಟ್ ನಿರ್ಣಯ ಮಾಡುತ್ತದೆ. ಯಾವ ಸಮಯದಲ್ಲಿ ಏನ್ ಹೇಳಿದಾರೆ ಎನ್ನೋದು ಕೋರ್ಟ್ ಗಮನಿಸಿ ನಿರ್ಣಯಿಸುತ್ತದೆ. ಬಗ್ಗೆ ಕಾಯ್ದು ನೋಡೋಣ ಎಂದರು.
ಸಚಿವ ಮಧು ಬಂಗಾರಪ್ಪ ಚೆಕ್ ಬೌನ್ಸ್ ವಿಚಾರ ಬಗ್ಗೆ ಮಾತನಾಡಿ, ಸಚಿವ ಮಧು ಬಂಗಾರಪ್ಪ ಅವರು ಯಾಕೆ ರಾಜೀನಾಮೆ ಕೊಡಬೇಕು.? ಅದು ಖಾಸಗಿ ವಿಚಾರ. ವ್ಯವಹಾರದಲ್ಲಿ ಇದೆಲ್ಲಾ ಇರುತ್ತದೆ. ಇಂತಹ ಕೇಸ್ ಗಳು ಸಾಕಷ್ಟು ಆಗಿವೆ. ರಾಜಕೀಯವಾಗಿ ತಪ್ಪು ಮಾಡಿದರೆ ಬೇರೆ. ಬಿಜಿನೆಸ್ ಮಾಡೋರಿಗೆ ಇದೆಲ್ಲಾ ಇದ್ದೆ ಇರುತ್ತದೆ ಎಂದಿದ್ದಾರೆ.