ಬೆಳಗಾವಿ: ಬೆಳಗಾವಿ ಜಿಲ್ಲಾಸ್ಪತ್ರೆ ಬಾಣಂತಿಯರ ಪಾಲಿಗೆ ಮರಣ ಮೃದಂಗವಾಗಿದೆ. ಬಾಣಂತಿಯರ ಸಾವಿನಿಂದ ಇಲ್ಲಿನ ಪ್ರತಿಷ್ಠಿತ ಬಿಮ್ಸ್ ಆಸ್ಪತ್ರೆ ಮತ್ತೆ ರಾಜ್ಯಾದ್ಯಂತ ಕೆಟ್ಟ ಸುದ್ದಿಗೆ ಗ್ರಾಸವಾಗಿದೆ.
ರಾಜ್ಯದ ಬೆಳಗಾವಿ ಮತ್ತು ಬಳ್ಳಾರಿ ಜಿಲ್ಲಾ ಆಸ್ಪತ್ರೆಗಳು ಗರ್ಭಿಣಿಯರು ಹಾಗೂ ಬಾಣಂತಿಯರ ಪಾಲಿಗೆ ನರಕ ಕೂಪವಾಗಿ ಪರಿಣಮಿಸಿವೆ. ಜೊತೆಗೆ ಕೆಲ ಜಿಲ್ಲೆಗಳ ಜಿಲ್ಲಾ ಆಸ್ಪತ್ರೆಗಳು ವೈದ್ಯರ ನಿರ್ಲಕ್ಷ್ಯದಿಂದಾಗಿ ಅಮಾಯಕ ಬಾಣಂತಿಯರು ಮೃತಪಡುವಂತಾಗಿದೆ. ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲೆ ಪ್ರಮಾಣದಲ್ಲಿ ಗರ್ಭಿಣಿಯರು ಮೃತಪಡುತ್ತಿದ್ದಾರೆ. ಬಡವರು ಆರ್ಥಿಕವಾಗಿ ಸಬಲರಾಗದೇ ಇರುವುದರಿಂದ ಸುರಕ್ಷಿತ ಹಾಗೂ ಸರಳ ಹೆರಿಗೆ ಆಗುತ್ತದೆ ಎಂಬ ಭಾವನೆದಿಂದ ಬೆಳಗಾವಿ ಜಿಲ್ಲಾಸ್ಪತ್ರೆಗೆ ಆಗಮಿಸುತ್ತಾರೆ. ಆದರೆ, ಈಗ ಬೆಳಗಾವಿ ಜಿಲ್ಲಾ ಆಸ್ಪತ್ರೆ ಎನ್ನುವುದು ಗರ್ಭಿಣಿಯರು ಹಾಗೂ ಬಾಣಂತಿಯರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿರುವುದು ಅತ್ಯಂತ ಕಳವಳದ ಸಂಗತಿಯಾಗಿದೆ.
ಐದು ದಿನಗಳ ಹಿಂದಷ್ಟೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದ ವೈಶಾಲಿ ಎಂಬ ಮಹಿಳೆ ಮೃತಪಟ್ಟಿರುವುದು ಈಗ ಬಿಮ್ಸ್ ಆಸ್ಪತ್ರೆ ಗರ್ಭಿಣಿಯರಿಗೆ ಸುರಕ್ಷಿತವಲ್ಲ ಎಂಬ ಭಾವನೆ ಮೂಡಿಸುವಂತಾಗಿದೆ.
ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಈ ಬಾಣಂತಿ ಮೃತಪಟ್ಟಿರುವ ಆರೋಪ ಬಲವಾಗಿ ಕೇಳಿ ಬಂದಿದೆ. ಅವರಿಗೆ ನಾಲ್ಕು ದಿನಗಳ ಹಿಂದಷ್ಟೇ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಮೊದಲಿಗೆ ಹುಕ್ಕೇರಿ ತಾಲೂಕು ಆಸ್ಪತ್ರೆಗೆ ಕರೆ ತಂದಿದ್ದರು. ಅಲ್ಲಿ ವೈದ್ಯರಿಲ್ಲ ಎಂದು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಶನಿವಾರ ಬೆಳಗ್ಗೆ ಬಿಮ್ಸ್ ನಲ್ಲಿ ವೈಶಾಲಿ ಅವರಿಗೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿತ್ತು. ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅವರ ಆರೋಗ್ಯ ಉತ್ತಮವಾಗಿಯೇ ಇತ್ತು. ಆದರೆ, ಭಾನುವಾರ ಬೆಳಗ್ಗೆ ವೈಶಾಲಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಅವರ ಸಾವಿಗೆ ಕಾರಣ ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇವಲ ಐದು ದಿನಗಳ ಹಿಂದೆ ವೈಶಾಲಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಆದರೆ ಏಕಾಏಕಿ ವೈಶಾಲಿ ಮೃತಪಟ್ಟಿರುವುದರಿಂದ ರೊಚ್ಚಿಗೆದ್ದ ಕುಟುಂಬದವರು ಬಿಮ್ಸ್ ಆಸ್ಪತ್ರೆ ವಿರುದ್ಧ ಸಿಡಿದೆದ್ದಿದ್ದಾರೆ. ವೈದ್ಯರ ವಿರುದ್ಧ ಆರೋಪ ಮಾಡಿರುವ ಕುಟುಂಬದವರು ಪೋಸ್ಟ್ ಮಾರ್ಟಂ ರಿಪೋರ್ಟ್ ನಲ್ಲಿ ಸಾವಿನ ಸತ್ಯ ಬಯಲಾಗಲಿದೆ. ಯಾವುದೋ ಮಾತ್ರೆಗಳನ್ನು ನೀಡಿರುವುದರಿಂದ ಅಮಾಯಕೆ ಮೃತಪಟ್ಟಿದ್ದಾರೆ ಎಂದು ದೂರಿದ್ದಾರೆ.