ಮರೆಯಲಾಗದ ಒಂದು ಸಮಯ ಇತ್ತು, ಯಕ್ಷಗಾನ ಮೇಳಗಳು ಇದ್ದವು, ತಿರುಗಾಟ ಪೂರ್ತಿ ಆಟ ಸಿಗುತ್ತಿರಲಿಲ್ಲ, ಕಲಾವಿದರು ಇದ್ದರೂ ಪ್ರೋತ್ಸಾಹ – ಬೆಂಬಲ – ಗುರುತಿಸುವಿಕೆ ಇರಲಿಲ್ಲ. ಮರದ ಅಡಿಯಲ್ಲಿ ಹಗಲಿನ ವಿಶ್ರಾಂತಿ. ಗದ್ದೆಯಲ್ಲೇ ರಂಗಸ್ಥಳ. ದಿನಕ್ಕೆ ಮೂರು ಹೊತ್ತಿನ ಊಟ ಕನಸಿನ ಗಂಟಾಗಿತ್ತು. ಆಟದ ಮೊದಲು ಆಢ್ಯರ ಮನೆ ಬಾಗಿಲಿನಲ್ಲಿ ಆಟಕ್ಕಾಗಿ, ಪಡಿಸಾಮಾನಿಗೆ ಕೈಮುಗಿದು ನಿಲ್ಲುವ ಸ್ಥಿತಿ. ಆಟದ ಬಳಿಕ ನಿದ್ದೆ ಬಿಟ್ಟು ವೀಳ್ಯಕ್ಕೆ ಕಾಯುತ್ತಾ ನಿಲ್ಲುವುದು. ಏನೂ ಇಲ್ಲದವ ಆಟದವ ಎಂಬ ಮನೋಭಾವ॒॒.

ಇವುಗಳನ್ನೆಲ್ಲ ಇಂದಿನ ಕಾಲಘಟ್ಟದಲ್ಲಿ ನಿಂತು ಯೋಚಿಸಿದರೆ ಹೀಗೂ ಇತ್ತೇ ಎಂದು ಅನಿಸಿದರೆ ತಪ್ಪಲ್ಲ. ಕಾರಣ ಯಕ್ಷಗಾನ ಇಂದು ಧರ್ಮಪ್ರಚಾರದ ಪ್ರಮುಖ ಮಾಧ್ಯಮವಾಗಿ, ಜನಾಕರ್ಷಣೆಯ ಕ್ಷೇತ್ರವಾಗಿ, ಜನಬೆಂಬಲದ ಕಲೆಯಾಗಿ ಬೆಳೆದು ನಿಂತಿದೆ. ಜನರ ಮನೋಭಾವದಲ್ಲಿ ಅಮೂಲಾಗ್ರ ಬದಲಾವಣೆಯಾಗಿದೆ. ಈ ಸ್ಥಿತ್ಯಂತರಕ್ಕೆ ಮೂಲ ಕಾರಣ ಕಲ್ಲಾಡಿ ಮನೆತನ ಎಂದು ಎದೆ ತಟ್ಟಿ ಹೇಳಬಹುದು.
1937ರಲ್ಲಿ ಕಟೀಲು ಮೇಳದ ಯಾಜಮಾನ್ಯವನ್ನು ವಹಿಸಿಕೊಳ್ಳುವ ಮೂಲಕ ಯಜಮಾನತ್ವಕ್ಕೆ ಭಾಷ್ಯ ಬರೆದವರು ಕಲ್ಲಾಡಿ ಕೊರಗ ಶೆಟ್ರು. ಅವರನ್ನು ಡಾ. ಶೇಣಿಯವರು ‘ದಾರ್ಶನಿಕ ಯಜಮಾನ’ ಎಂದೇ ಕರೆದಿದ್ದಾರೆ. ಅದನ್ನು ಹಿಮಾಲಯದೆತ್ತರಕ್ಕೆ ಬೆಳೆಸಿದವರು ಕಲ್ಲಾಡಿ ವಿಠಲ ಶೆಟ್ರು. ತಂದೆ ಹಾಕಿ ಕೊಟ್ಟ ಪರಂಪರೆಗೆ ಎಳ್ಳಿನಷ್ಟೂ ದೋಷ ಬಗೆಯದೆ ತಂದೆಯ ಹೆಸರನ್ನು ಯಕ್ಷಗಾನವೆಂಬ ಆಗಸದಲ್ಲಿ ನಕ್ಷತ್ರವನ್ನಾಗಿಸಿದರು. ನಿಜವಾದ ಕರ್ಮಪುತ್ರ ಎನ್ನಿಸಿಕೊಂಡರು.
ಭಾರತದಲ್ಲಿ ಶ್ರೀ ಎಮ್.ಎಸ್.ಸ್ವಾಮಿನಾಥನ್ ಅವರು ಹಸಿರು ಕ್ರಾಂತಿಯ ಹರಿಕಾರರಾದರೆ, ಡಾ.ವರ್ಗಿಸ್ ಕುರಿಯನ್ ಶ್ವೇತಕ್ರಾಂತಿ ಮತ್ತು ಡಾ.ಅರುಣ್ ಕೃಷ್ಣನ್ – ಡಾ.ಹರಿಲಾಲ್ ಚೌಧರಿ ನೀಲಿಕ್ರಾಂತಿಯ ಹರಿಕಾರೆನಿಸಿಕೊಂಡರು. ಆ ಮೂಲಕ ಭಾರತ ಆಹಾರ ಸ್ವಾವಲಂಬನ ಹೊಂದುವುದಕ್ಕೆ ಸಾಧ್ಯವಾಯಿತು. ಆದರೆ ಇವುಗಳೆಲ್ಲಕ್ಕಿಂತಲೂ ಮೊದಲು ಅಷ್ಟೇ ಮಹತ್ವಪೂರ್ಣವಾದ ಕ್ರಾಂತಿಯನ್ನು ಸುಮಾರು 80 ವರ್ಷಗಳಷ್ಟು ಹಿಂದೆಯೇ ಯಕ್ಷಗಾನ ಕ್ಷೇತ್ರದಲ್ಲಿ ಸಾಧಿಸಿದವರು ಕಲ್ಲಾಡಿ ಮನೆತನದ ಈ ತಂದೆ – ಮಗ. ಇವರೀರ್ವರು ಯಕ್ಷ ಕಲಾವಿದರಿಗೆ ಆಹಾರ ಸ್ವಾವಲಂಬನ ಹೊಂದಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಕಟೀಲು ಮೇಳದ ಜೊತೆಗೆ ಇರಾ ಮೇಳ ಆರಂಭಿಸಿ, ತುಳು ಪ್ರಸಂಗಗಳನ್ನು ರಂಗಕ್ಕೆ ತಂದು, ಪೂರ್ವರಂಗ ಪ್ರಸ್ತುತಿಗಳಲ್ಲೂ ಕ್ರಾಂತಿ ಮಾಡಿದವರು ಕೊರಗ ಶೆಟ್ರು. ಅಂತಹ ಅಪ್ಪನ ಮಗನಾಗಿ ಇನ್ನೂ ಅನೇಕ ಮೊದಲುಗಳನ್ನು ಸಾಧಿಸಿದವರು ವಿಠಲ ಶೆಟ್ರು. ಇದನ್ನು ನೋಡುವಾಗ ಪತ್ನಿ ಶ್ರೀಮತಿ ದಾರಮ್ಮರಲ್ಲಿ ಗಂಡ ಕೊರಗ ಶೆಟ್ರೇ ಮಗನಾಗಿ ಹುಟ್ಟಿ ಬಂದರೋ ಹೇಗೆ ಎಂದು ಅನ್ನಿಸಿದರೂ ತಪ್ಪಲ್ಲ.

ಅನೇಕ ಮೊದಲುಗಳ ಸರದಾರ ವಿಠಲ ಶೆಟ್ರು —- :

1. ತೆಂಕು – ಬಡಗುಗಳ ಪೊಳಲಿ ಶ್ರೀ ರಾಜರಾಜೇಶ್ವರಿ ಯಕ್ಷಗಾನ ಮೇಳ :
ಇದನ್ನು ವಿಠಲ ಶೆಟ್ರು ಆರಂಭಿಸಿದ್ದು 1962ರಲ್ಲಿ, ಒಂದೇ ರಾತ್ರಿ ಎರಡೂ ತಿಟ್ಟಿನ ಪ್ರದರ್ಶನ. ಇದೊಂದು ದಾಖಲೆ. ಬಡಗಿನಿಂದ ಭಾಗವತರಾಗಿ ಮರವಂತೆ ನರಸಿಂಹದಾಸರು, ವೇಷಧಾರಿಗಳಾಗಿ ವೀರಭದ್ರ ನಾಯ್ಕ, ಕುಷ್ಟ ಗಾಣಿಗ, ಮೊಳಹಳ್ಳಿ ಹಿರಿಯ, ಆರಾಟೆ ಮಂಜುನಾಥರೇ ಮೊದಲಾದವರು. ತೆಂಕಿನಿಂದ ಅಳಿಕೆ ರಾಮಯ್ಯ, ಮಾಧವ ಶೆಟ್ಟಿ, ಕ್ರಿಶ್ಚಿಯನ್ ಬಾಬು, ಸಣ್ಣ ತಿಮ್ಮಪ್ಪ ಮೊದಲಾದವರು. ಆದರೆ ಇದು ಒಂದೇ ವರ್ಷಕ್ಕೆ ಸೀಮಿತವಾಯಿತು.

2. ಮಂಗಳೂರು ನೆಹರೂ ಮೈದಾನದಲ್ಲಿ ಯಕ್ಷಗಾನ ಥಿಯೇಟರ್ :
ಇದು ಸೀನುಸೀನರಿಗಳ ಯಕ್ಷಗಾನ, ಆರಂಭಿಸಿದುದು 1965ರಲ್ಲಿ. ಇದು ಸಿನೆಮಾ ಯಾ ನಾಟಕದ ಥಿಯೇಟರ್ನ ಹಾಗೆ, ಬಾಲ್ಕನಿ ಸಮೇತ. ಆರಾಮ ಕುರ್ಚಿ, ಸಾದಾ ಕುರ್ಚಿ, ಎತ್ತರಿಸಿದ ನೆಲ ಎಂಬ ಮೂರು ವಿಭಾಗಗಳಲ್ಲಿ ಪ್ರೇಕ್ಷಕರು. ಹಿಮ್ಮೇಳದವರು ಸಭೆಗೆ ಕಾಣಿಸುವುದಿಲ್ಲ. ರಂಗಸ್ಥಳದ ಹಿಂದೆ ದೃಶ್ಯಾವಳಿಗಳ ಪರದೆಗಳು ತಾಂತ್ರಿಕವಾಗಿ ಚಲಿಸಲ್ಪಡುತ್ತವೆ. ವಿಟ್ಲದ ಬಾಬುರಾಯರ ಮೂಲಕ ವಿವಿಧ ದೃಶ್ಯಗಳಿಗೆ ವೈವಿಧ್ಯಮಯ ಪರದೆಗಳು, ದೃಶ್ಯಕ್ಕೆ ಸರಿಹೊಂದುವ ಬಣ್ಣ ಬಣ್ಣದ ಬೆಳಕು ಒಂದು ಅದ್ಭುತ ಲೋಕವನ್ನೇ ಸೃಷ್ಟಿಸಿದ್ದವು. ಈ ಕಲ್ಪನೆಯ ಬಗ್ಗೆ ತಮಾಷೆ ಮಾಡುತ್ತಿದ್ದ ಮಂದಿಗಳೆಲ್ಲ ಈಗ ಮೂಗಿನ ಮೇಲೆ ಬೆರಳಿಟ್ಟುಕೊಂಡರು. ಯಾವಾತನ ಹೊಸ ಕಲ್ಪನೆಗಳು ಉಳಿದ ಸಾಮಾನ್ಯರಿಂದ ನಗೆಗೀಡಾಗುತ್ತವೋ ಅವು ಯಶಸ್ಸನ್ನು ಹೊಂದುತ್ತವೆ ಎನ್ನುವುದಕ್ಕೆ ಇದು ಪುರಾವೆ ಆಯಿತು. ನಳದಮಯಂತಿ, ಸತ್ಯ ಹರಿಶ್ಚಂದ್ರ, ಪ್ರಹ್ಲಾದ ಚರಿತ್ರೆ, ಚೂಡಾಮಣಿ, ಶ್ವೇತಕುಮಾರ ಚರಿತ್ರೆ ಮೊದಲಾದ ಪುರಾಣ ಪ್ರಸಂಗಗಳು, ಕೋರ್ದಬ್ಬು ಬಾರಗ, ದೇವುಪೂಂಜ ಪ್ರತಾಪವೇ ಮುಂತಾದ ತುಳು ಪ್ರಸಂಗಗಳು ತಿಂಗಳುಗಟ್ಟಲೆ ಪ್ರದರ್ಶನಗೊಂಡವು. ನಿತ್ಯವೂ ಜನಜಾತ್ರೆ. ದಮಯಂತಿಯನ್ನು ಹೆಬ್ಬಾವು ನುಂಗುವುದು, ನಳನ ಬಟ್ಟೆಯನ್ನು ಹಕ್ಕಿ ಒಂದು ಮೇಲಿಂದ ಹೊತ್ತೊಯ್ಯುವುದು, ಋತುಪರ್ಣನ ರಥ ಓಡುವುದು, ಸನಕ-ಸನಂದರು ವೈಕುಂಠಕ್ಕೆ ಬರುವಾಗ ಒಂದೊಂದು ಗಂಟೆ ಬಾರಿಸುವಾಗ ಒಂದೊಂದು ಬಾಗಿಲು ತೆರೆಯುವುದು, ಶೇಷ ಶಯನನಾದ ನಾರಾಯಣ, ಪ್ರಹ್ಲಾದನನ್ನು ಸಮುದ್ರಕ್ಕೆ ಎಸೆಯುವುದು ಎಲ್ಲವೂ ನೈಜವೇ. ನಳ-ದಮಯಂತಿಯ 60ನೇ ಪ್ರದರ್ಶನದ ಆಶೀರ್ವಚನದಲ್ಲಿ ಪೇಜಾವರ ಶ್ರೀಗಳ ಮಾತು – ‘ಇಂತಹ ದೃಶ್ಯಾವಳಿಗಳಿಂದ ಕೂಡಿದ ಆಟ ಎಂದರೆ ಯಕ್ಷಗಾನ ಕಲೆಯ ಕೊಲೆ ಎಂದೇ ಭಾವಿಸಿದ್ದೆ. ಆದರೆ ಈಗ ಇದನ್ನೆಲ್ಲ ಕಂಡಾಗ ನನ್ನ ಭಾವ ತಪ್ಪು ಎಂದು ತಿಳಿಯಿತು. ಈ ಪ್ರಯೋಗಗಳಿಂದ ಪ್ರೇಕ್ಷಕರನ್ನು ಯಕ್ಷಗಾನದ ಹತ್ತಿರಕ್ಕೆ ತರುವ ವಿಠಲ ಶೆಟ್ರ ಪ್ರಯತ್ನ ಸ್ತುತ್ಯರ್ಹ’. ಆಟ ಆರು ತಿಂಗಳೂ ಒಂದೇ ಕಡೆ ಇದ್ದುದರಿಂದ ಕಲಾವಿದರಿಗೆ ಬಹು ಅನುಕೂಲವೇ ಆಯಿತು. ಈ ಥಿಯೇಟರ್ನ ಪ್ರಸಿದ್ದಿಯಿಂದಾಗಿ ಮಂಗಳೂರಿನ ವಸತಿಗೃಹಗಳೆಲ್ಲ ನಷ್ಟ ಅನುಭವಿಸಿದವು.

3. ಇದೇ ಥಿಯೇಟರ್ನಲ್ಲಿ ಮಂಗಳೂರು ಮಹಾನಗರಪಾಲಿಕೆಯ ಅನುಮತಿ ಪಡೆದು ಮಳೆಗಾಲದಲ್ಲೂ ಪ್ರದರ್ಶನ. ಮಳೆಗಾಲದಲ್ಲೂ ಅದ್ಭುತ ಕಲೆಕ್ಷನ್.

4. ಇದೇ ಸೀನು ಸೀನರಿಗಳೊಂದಿಗೆ ಮುಂದಿನ ವರ್ಷಗಳಲ್ಲಿ ಬೆಂಗಳೂರು – ಮುಂಬೈಗಳಲ್ಲೂ ಯಶಸ್ವೀ ಪ್ರದರ್ಶನ. ಬೆಂಗಳೂರಿನಲ್ಲಿ ಮಾಸ್ಟರ್ ಹಿರಣ್ಣಯ್ಯನವರು ಧರ್ಮಾರ್ಥವಾಗಿ ತಮ್ಮ ಥಿಯೇಟರನ್ನು ನೀಡಿದರಂತೆ. ಬಾಡಿಗೆ ತೆಗೊಳ್ಳಲೇಬೇಕೆಂದು ವಿಠಲ ಶೆಟ್ರು ಒತ್ತಾಯಿಸಿದಾಗ ದಿನಕ್ಕೆ ಒಂದು ರೂಪಾಯಿಯಂತೆ ಬಾಡಿಗೆ ಪಡಕೊಂಡರಂತೆ. ಹೆಸರಿಗನುಗುಣವಾಗಿ ಆ ಮಹಾನ್ ಕಲಾವಿದ ಪರಿಪೂರ್ಣತೆಯನ್ನು ಸಾಧಿಸಿದರು. ಅದರೊಂದಿಗೆ ನಾಟಕ ಲೋಕದ ಮೇರು ನಾಯಕ ಯಕ್ಷಲೋಕದ ಮೇರು ನಾಯಕನಿಗೆ ನಿಸ್ಪೃಹ ಗೌರವ – ಪ್ರೀತಿ ತೋರಿದರು. ಎಂತಹ ಔದಾರ್ಯ. ಬಹುಶಃ ಇಂತಹ ಗೌರವವನ್ನು ಪಡೆದ ಯಕ್ಷಲೋಕದ ಯಜಮಾನ ಇದ್ರೆ ಅದು ವಿಠಲ ಶೆಟ್ರು ಮಾತ್ರ.

ಈ ನೂತನ ಪ್ರಯೋಗ ಯಶಸ್ಸಿನ ಶಿಖರದಲ್ಲಿದ್ದಾಗಲೇ ಅದನ್ನು ಅಲ್ಲಿಗೇ ನಿಲ್ಲಿಸಿದರು. ಆದರೆ ಈ ಹೊತ್ತಿಗಾಗಲೇ ಯಕ್ಷಗಾನ ತನ್ನ ಕಬಂಧ ಬಾಹುವಿನೊಳಗೆ ಬಹುಜನರನ್ನು, ಅದರಲ್ಲೂ ಆಢ್ಯರನ್ನು ಮತ್ತು ವಿದ್ಯಾವಂತರನ್ನು ಸೆಳೆದಾಗಿತ್ತು. ಇದರ ಅಧ್ವರ್ಯು ವಿಠಲ ಶೆಟ್ರು ಎನ್ನುವುದು ಈಗಾಗಲೇ ಮನೆಮಾತಾಗಿತ್ತು. ಹೊಸ ತಿರುಗಾಟಕ್ಕೆ ಆಯ್ಕೆಯಾದ ಪ್ರಸಂಗವನ್ನು ಸೇವೆಯ ಪೂರ್ವಭಾವಿಯಗಿ ಅಭ್ಯಾಸ ಮಾಡಿ ಸೆಟ್ ಮಾಡುವ ಪರಿಕಲ್ಪನೆ ಕೂಡ ವಿಠಲ ಶೆಟ್ರದ್ದೇ ಎಂದು ಅನೇಕ ಅವರ ಜೊತೆಗಿದ್ದ ಹಿರಿಯ ಕಲಾವಿದರು ನೆನೆಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ವಿಠಲ ಶೆಟ್ರೇ ನೇರ ನಿರ್ದೇಶನ ನೀಡುತ್ತಿದ್ದರಂತೆ. ಆ ಅಭ್ಯಾಸದಿಂದ ಯಾವ ಹಿರಿಯ ಕಲಾವಿದನಿಗೂ ರಿಯಾಯಿತಿ ಇರುತ್ತಿರಲಿಲ್ಲವಂತೆ. ಅವರೆಷ್ಟು ಸೂಕ್ಷ್ಮ ಎಂದರೆ ಮಾನಿಷಾದದ ರಾಮನಿಗೆ ಯಾವ ರೀತಿಯ ಮೀಸೆ ಎನ್ನುವುದನ್ನೂ ಅವರೇ ಸೂಚಿಸುತ್ತಿದ್ದರಂತೆ.
ಕಲ್ಲಾಡಿ ಮನೆತನದಿಂದ ಆರಂಭವಾದ ಟೆಂಟ್ ಕಲ್ಪನೆ ಹೆಮ್ಮರವಾಗಿ ಬೆಳೆದು 1965ರಿಂದ 1985ರ ತನಕ ಟೆಂಟ್ ಮೇಳಗಳ ಪರ್ವಕಾಲವಾಗಿ ಪರಿಣಮಿಸಿತು. ಕರ್ನಾಟಕ ಮೇಳದ ಯಶಸ್ಸಿನಿಂದ ಪ್ರೇರಿತವಾಗಿ ಸುರತ್ಕಲ್, ಕದ್ರಿ, ಬಪ್ಪನಾಡು, ಅರುವ, ನಂದಾವರ, ಕುಂಬಳೆ ಮೇಳಗಳೂ ಹುಟ್ಟಿಕೊಂಡು ಮೆರೆದವು. ಧರ್ಮಸ್ಥಳವೂ ಟೆಂಟ್ ಮೇಳವಾಯಿತು.

ಕರ್ನಾಟಕ ಮೇಳದ ಯಶಸ್ಸು ಮುಖ್ಯವಾಗಿ ನೆಲೆಗೊಂಡದ್ದು ವಿಠಲ ಶೆಟ್ರು ತಮ್ಮ ಕಲಾವಿದರ ಮೇಲೆ ತೋರಿದ ಪ್ರೀತಿ ಮತ್ತು ಶಿಸ್ತಿನಿಂದ. ಮಂಡೆಚ್ಚರು, ಕೇದಿಗೆ ರತ್ನಾಕರರಾಯರು, ಕಾಂಚನ ನಾರಾಯಣ ಭಟ್, ಅಮ್ಮಣ್ಣಾಯ, ಪದ್ಯಾಣ, ರಾಮದಾಸ ಸಾಮಗರು, ಕೋಳ್ಯೂರು, ಬೋಳಾರ, ನಾರಂಬಾಡಿ, ಅಳಕೆ, ಅರುವ, ಮೂಡಬಿದ್ರೆ ಮಾಧವ ಶೆಟ್ಟಿ, ಮದ್ದಡ್ಕ ಗೋಪಾಲ ಶೆಟ್ಟಿ, ಜಪ್ಪು, ಮಿಜಾರು, ಪುಳಿಂಚ, ಮಂಕುಡೆ, ಅಳಿಕೆ ಲಕ್ಷ್ಮಣ ಶೆಟ್ಟಿ, ಮುಂಡಾಜೆ, ಗುಂಪೆ, ತೊಡಿಕಾನ, ಬೆಳ್ಳಾರೆ, ಪುಂಡರೀಕಾಕ್ಷ ಉಪಾಧ್ಯಾಯ ಮೊದಲಾದ ಘಟಾನುಘಟಿಗಳೆಲ್ಲ ಕರ್ನಾಟಕ ಮೇಳ ನಿಲ್ಲುವವರೆಗೂ ಒಂದೇ ಮೇಳದಲ್ಲಿ ಅತ್ಯಂತ ನಿಷ್ಟೆಯಿಂದ ಕಲಾವ್ಯವಸಾಯ ಮಾಡಿದ್ದಾರೆ ಅಂತಾದ್ರೆ ಯಜಮಾನಿಕೆಯ ಎತ್ತರ ಎಷ್ಟಿರಬಹುದು ಎಂಬುವುದನ್ನು ನಾವು ಊಹಿಸಲು ಬರುತ್ತದೆ. ಆ ಮೇಳದಲ್ಲಿ ದುಡಿದ, ಈಗ ಕಟೀಲು ಮೇಳದಲ್ಲಿ ವ್ಯವಸಾಯ ಮಾಢುತ್ತಿರುವ ಎಲ್ಲಾ ಹಿರಿಯರೂ ಹೇಳುವುದು ಒಂದೇ ಮಾತು, ‘ಯಜಮಾನ್ರು ಪಂಡ ಆರೆ, ಎಂಕುಲೆನ ಯಜಮಾನ್ರು, ವಿಠಲ ಶೆಟ್ರು’. ಕಲ್ಲಾಡಿ ಮನೆತನದ ಹಿರಿಮೆ – ಗರಿಮೆಯನ್ನು ಸಾರುವುದಕ್ಕೆ ಈ ಒಂದು ಮಾತು ಸಾಲದೇ?

ತಂಡವೇ ಮುಖ್ಯ, ವ್ಯಕ್ತಿ ಅಲ್ಲ ಎನ್ನುವುದು ಅವರ ನಿಖರ ನಿಲುವಾಗಿತ್ತು, ತನ್ನನ್ನೂ ಸೇರಿಸಿ. ಕರ್ನಾಟಕ ಮೇಳದ ಜಾಹೀರಾತಿನಲ್ಲಿ ಯಜಮಾನನ – ಕಲಾವಿದನ ಹೆಸರಿಗೆ, ವರ್ಣರಂಜಿತ ಶಬ್ದಗಳಿಗೆ ಯಾವುದೇ ಅವಕಾಶಗಳೇ ಇರಲಿಲ್ಲ. 1985ರಲ್ಲಿ ತಾನು ಬಹಳ ಗೌರವ ನೀಡುತ್ತಿದ್ದ ಮಂಡೆಚ್ಚರು ಕಾಲವಾದ ಬಳಿಕ ಮಾನ್ಯ ದಿನೇಶ ಅಮ್ಮಣ್ಣಾಯರನ್ನು ಕರ್ನಾಟಕ ಮೇಳದ ಮುಖ್ಯ ಭಾಗವತರನ್ನಾಗಿಸಿದರು. ಆದರೆ ಸುದೀರ್ಘ ತಿರುಗಾಟ ಮಾಡಿದ, ತನ್ನ ತಂದೆಯ ಕೂಸಾದ, ಅದ್ಭುತ ಕ್ರಾಂತಿಯನ್ನು ಮಾಡಿದ ಈ ಮೇಳಕ್ಕೆ 2002ರಲ್ಲಿ ತಾನೇ ಅಂಕದ ಪರದೆ ಎಳೆದರು. ಈ ಹಂತದಲ್ಲೂ ವಿಠಲ ಶೆಟ್ರು ಸ್ಥಿತಪ್ರಜ್ನರಾಗೇ ಇದ್ರು ಅಂತಾದ್ರೆ ಅವರ ಮಾನಸಿಕ ದೃಢತೆ ಏನು ಅನ್ನುವುದು ಅರ್ಥವಾಗುತ್ತದೆ.

#ಕಟೀಲು_ಮೇಳ ವಿಠಲ ಶೆಟ್ರಿಗೆ ದಕ್ಕಿದ್ದು 1967ರಲ್ಲಿ. ಕರ್ನಾಟಕ ಮೇಳವನ್ನು ವ್ಯಾವಹಾರಿಕವಾಗೇ ನಡೆಸಿದರೂ, ಕಟೀಲು ಮೇಳವನ್ನು ಮಾತ್ರ ಶುದ್ದ ಧಾರ್ಮಿಕ ನೆಲೆಗಟ್ಟಿನಲ್ಲೇ ಮುನ್ನಡೆಸಿದರು.

5. ಕಟೀಲು ಮೇಳಕ್ಕೆ ಪೂರ್ಣ 6 ತಿಂಗಳು ಆಟ ದೊರಕಿಸಿದ ಧೀಮಂತರು :
ಹರಕೆ ಆಟಗಳ ದಿನಗಳನ್ನು ಹೊರತು ಪಡಿಸಿ ಉಳಿದ ದಿನಗಳಲ್ಲಿ ತನ್ನ ಆತ್ಮೀಯರನ್ನು ಸಂಪರ್ಕಿಸಿ ಕಡಿಮೆ ವೀಳ್ಯಕ್ಕೆ ಹತ್ತು ಸಮಸ್ತರ ಆಟಗಳನ್ನು ನಿಗದಿಪಡಿಸಿದರು. ಈ ಮೂಲಕ ಕಟೀಲು ಮೇಳಕ್ಕೆ ಆರೂ ತಿಂಗಳು ಆಟ, ಕಲಾವಿದರಿಗೆ ಪೂರ್ಣಕಾಲದ ದುಡಿಮೆ ಮತ್ತು ವೇತನ ದೊರಕಿಸಿದ ಕೀರ್ತಿಗೆ ಅವರು ಭಾಜನನಾದರು. ಹಾಗೆ ಅಂದು ಅವರು ಆರಂಭಿಸಿದ ಹತ್ತು ಸಮಸ್ತರ ಈ ಸೇವಾ ಆಟಗಳು ಇಂದಿಗೂ ಮುಂದುವರಿದಿವೆ. ಈಗಲೂ ಸುಮಾರು 400 ಆಟಗಳು ಇವುಗಳೇ.

6. ಕಟೀಲು ಮೇಳದಲ್ಲಿ ಲಾರಿ :
ಸಾಮಾನ್ಯ 1970ರ ತನಕ ಕಟೀಲು ಮೇಳದ ಕಲಾವಿದರೆಲ್ಲರೂ ಒಂದು ಆಟದಿಂದ ಇನ್ನೊಂದು ಆಟಕ್ಕೆ ನಡೆದುಕೊಂಡೇ ಸಾಮಾನು ಸರಂಜಾಮು ಸಹಿತ ಹೋಗಬೇಕಾಗಿತ್ತು. ಇದನ್ನು ನಿಲ್ಲಿಸಿ ಆಟ ಆಡಿಸುವವರೇ ವಾಹನದ ವ್ಯವಸ್ಥೆ ಮಾಡಿಸಬೇಕೆಂಬ ಹೊಸ ನಿಯಮವನ್ನು ವಿಠಲ ಶೆಟ್ರು ಜಾರಿಗೆ ತಂದರು.

7. ಕಟೀಲು ಮೇಳಗಳ ಸಂಖ್ಯೆಯಲ್ಲಿ ಹೆಚ್ಚಳ :
ವಿಠಲ ಶೆಟ್ರು ಕಟೀಲು ಮೇಳ ವಹಿಸಿಕೊಳ್ಳುವಾಗ ಇದ್ದದ್ದು ಒಂದೇ ಮೇಳ. ಮೇಳದ ದೇವರ ಕಾರ್ಣಿಕ ಭಕ್ತರಿಗೆಲ್ಲ ಮನವರಿಕೆಯಾದ ಬಳಿಕ ಹರಕೆ ಆಟಗಳ ಸಂಖ್ಯೆಯಲ್ಲೂ ಹೆಚ್ಚಳವಾಯಿತು. ಹೀಗಾಗಿ ಒಂದಿದ್ದ ಮೇಳ 1975ರಲ್ಲಿ 2ನೇ ಮೇಳ, 1982ರಲ್ಲಿ 3ನೇ ಮೇಳ, 1993ರಲ್ಲಿ 4ನೇ ಮೇಳವಾಗಿ ಅಭಿವೃದ್ದಿಯನ್ನು ಹೊಂದಿತು. ಆಟಕ್ಕಾಗಿ ಹೆಣಗಾಡುತ್ತಿದ್ದ ಕಟೀಲು ಮೇಳವನ್ನು ಕೇವಲ 30 ವರ್ಷಗಳ ಅವಧಿಯಲ್ಲಿ 4 ಮೇಳಗಳನ್ನಾಗಿಸಿದರು. ಇವಿಷ್ಟು ಮೇಳಗಳು ಹರಕೆ ಪೂರೈಸಿದರೂ ಮತ್ತೂ 10,000ಕ್ಕೂ ಹೆಚ್ಚು ಹರಕೆ ಆಟಗಳು ಬಾಕಿ ಉಳಿಯುವ ಸ್ಥಿತಿ ನಿರ್ಮಾಣವಾಯಿತು. ಅಂದರೆ ಮುಂದಿನ 10 ವರ್ಷಗಳಿಗೆ ಕಲಾವಿದರು ಯೋಚಿಸುವ ಅವಶ್ಯಕತೆಯೇ ಇಲ್ಲವೆಂದಾಯಿತು. ಇದು ನಿಜವಾಗಲೂ ಊಹನಾತೀತ ವಿಚಾರ.

ವಿಠಲ ಶೆಟ್ರಲ್ಲಿ ಒಂದು ರಾಜ ಗಾಂಭೀರ್ಯ ಇತ್ತು. ಅವರ ಎದುರು ಯಾರು ಬಂದರೂ ಗರುಡನೆದುರಿನ ಹಾವಿನ ಸ್ಥಿತಿಯಾಗುತ್ತಿತ್ತು. ಅಂತಹಾ ವರ್ಚಸ್ಸು ಅವರದಾಗಿತ್ತು.
ವಿಠಲ ಶೆಟ್ರು, ಕೊರಗ ಶೆಟ್ಟಿ – ದಾರಮ್ಮ ದಂಪತಿಗಳ ಏಕಮಾತ್ರ ಪುತ್ರ. 1927 ಮೇ 31ರಲ್ಲಿ ಜನನ. ಮಗುವಾಗಿದ್ದಾಗಲೇ ತಾಯಿಯನ್ನು ಕಳಕೊಂಡರು. ಮಂಗಳೂರಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿ.ಎ ಪದವೀಧರರಾದರು. ತಂದೆಯವರ ನೆರಳಲ್ಲಿ ಬೆಳೆದುದರಿಂದ ಮೇಳ, ತಿರುಗಾಟ, ಕಲಾವಿದರು, ಆಟ, ಅದರ ಕಷ್ಟ – ನಷ್ಟಗಳ ಪ್ರತ್ಯಕ್ಷ ಅನುಭವ ಎಳವೆಯಿಂದಲೇ ಆಗಿತ್ತು. ಮನಸ್ಸು ಮಾಡಿದ್ದರೆ ಉತ್ತಮ ಸರ್ಕಾರಿ ನೌಕರಿ ದೊರೆಯುತ್ತಿತ್ತು. ಹಾಗಾಗುತ್ತಿದ್ದರೆ ಯಕ್ಷಗಾನಕ್ಕೆ ಬಹು ದೊಡ್ಡ ನಷ್ಟವಾಗುತ್ತಿತ್ತು. ತಮ್ಮ 29ನೇ ವಯಸ್ಸಿನಲ್ಲೇ ತಂದೆಯಿಂದ ನೂತನವಾಗಿ ಮಗನಿಗಾಗಿಯೇ ರಚಿತವಾದ ‘#ಕರ್ನಾಟಕ #ಯಕ್ಷಗಾನ #ನಾಟಕ #ಸಭಾ’ದ ಚುಕ್ಕಾಣಿಯನ್ನು ಹಿಡಿದರು. ಈ ಮೇಳ 46 ವರ್ಷಗಳ ಕಾಲ ದಿಗ್ವಿಜಯ ಮಾಡಿತು. ಸುಮಾರು 50 ವರ್ಷಗಳ ಕಟೀಲು-ಕರ್ನಾಟಕ ಮೇಳಗಳ ಯಜಮಾನನಾಗಿ ಮಾದರಿಯನ್ನು ಹಾಕಿಕೊಟ್ಟರು.

ವಿಠಲ ಶೆಟ್ರ ಯಾಜಮಾನ್ಯದ ಕುರಿತಾಗಿ ಅನೇಕ ಸ್ವಾರಸ್ಯ ಕಥೆಗಳಿವೆ. ಅವರೊಂದಿಗಿದ್ದ ಹಿರಿಯ ಕಲಾವಿದರು ಅವುಗಳನ್ನು ಈಗಲೂ ನೆನೆಸಿಕೊಳ್ಳುತ್ತಾರೆ. ‘ಆಗ ನಮಗೆ ಯಜಮಾನರ – ರಂಗ ದುಡಿಮೆಯ ಬಗ್ಗೆ ಅಪಾರ ಭಯ ಇತ್ತು’ ಎಂದು ಯಾವಾಗಲೂ ಹೇಳುತ್ತಿರುತ್ತಾರೆ. ಯಾವುದೇ ಸಂಸ್ಥೆ ಇರಬಹುದು, ಅಲ್ಲಿ ಕರ್ತವ್ಯ ಮಾಡುವವನಿಗೆ ತಾನು ಸೇವೆ ಸಲ್ಲಿಸುತ್ತಿರುವ ಸಂಸ್ಥೆಯ ಬಗ್ಗೆ, ಆಶ್ರಯ ನೀಡಿದವನ ಕುರಿತು ಗೌರವ ಇರಲೇಬೇಕು. ಕಲಾಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಂತೂ ಬಹಳ ಜಾಕರೂಕರಾಗಿರಬೇಕು. ಅದನ್ನು ಕಾಪಿಟ್ಟುಕೊಳ್ಳಲು ಯಜಮಾನ ಕಠಿಣನಾಗಿರಲೇಬೇಕಾಗುತ್ತದೆ. ಅವರ ಯಜಮಾನಿಕೆಯ ಪ್ರಮುಖ ಕೌಶಲವೆಂದರೆ ಯಾರಿಗೂ ಸ್ವರ ಏರಿಸದೆ ತಪ್ಪು ಮಾಡಿದವರೇ ತನ್ನ ತಪ್ಪನ್ನು ಪಶ್ಚಾತ್ತಾಪದಿಂದ ತಿದ್ದಿಕೊಳ್ಳುವಂತೆ ಮಾಡುವುದು. ಡಾ. ಪ್ರಭಾಕರ ಜೋಷಿಯವರ ಮಾತಿನಲ್ಲಿ ಹೇಳುವುದಾದರೆ ವಿಠಲ ಶೆಟ್ರು – ಅರ್ಥ ಹೇಳದ ಅರ್ಥದಾರಿ.

ಇರಾ ಸೋಮನಾಥೇಶ್ವರ ದೇವಳದ ಆಡಳಿತ ಮೊಕ್ತೇಸರರಾಗಿ ವಿಠಲ ಶೆಟ್ರು ದೇವಸ್ಥಾನವನ್ನು ಸರ್ವಾಂಗೀಣವಾಗಿ ಅಭಿವೃದ್ದಿಗೊಳಿಸಿದರು. ತಂದೆಯ ಹೆಸರನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲಿ ‘ಕಲ್ಲಾಡಿ ಕೊರಗ ಶೆಟ್ಟಿ ಯಕ್ಷಗಾನ ಪ್ರತಿಷ್ಠಾನ’ ಸ್ಥಾಪಿಸಿ ಸಾಧಕ ಕಲಾವಿದರನ್ನು ಗೌರವಿಸುವ ಪರಂಪರೆಯನ್ನು ಹುಟ್ಟು ಹಾಕಿದರು. ಕಟೀಲು ಮೇಳದ ಕಲಾವಿದರಿಗೆ ಬೇಕಾಗಿ ‘ಕಟೀಲು ಮೇಳದ ಕಲಾವಿದರ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ’ವನ್ನು ಸ್ಥಾಪಿಸಿ ದಾನಿಗಳ ಸಹಾಯದಿಂದ ನಿಧಿ ಸಂಗ್ರಹಿಸಿ ನೆರವು ನೀಡುವ ಕಾರ್ಯವನ್ನು ಆರಂಭಿಸಿದರು. ಈ ಎಲ್ಲ ಸಾಧನೆಗಳಿಗೆ ವಿಠಲ ಶೆಟ್ರನ್ನು ಅನ್ಯಾನ್ಯ ಸಂಘಸಂಸ್ಥೆಗಳು ಸನ್ಮಾನಿಸಿವೆ. ಇಷ್ಟೆಲ್ಲ ಸಾಧನೆಗಳ ಸರಮಾಲೆಯೊಂದಿಗೆ ಕಲ್ಲಾಡಿ ವಿಠಲ ಶೆಟ್ಟಿ ಎಂಬ ಒಂದು ಮಹಾಶಕೆ ಅಕ್ಟೋಬರ್ 10, 2005ರಂದು ಇತಿಹಾಸದ ಹೊತ್ತಗೆಯಲ್ಲಿ ಅಮೂಲ್ಯ ಪುಟವಾಯಿತು.

ಆ ವ್ಯಕ್ತಿತ್ವ ಆಗಸದಲ್ಲಿ ನಕ್ಷತ್ರವಾಗಿ ಇಂದೂ ಮಿನುಗುತ್ತಿದೆ. ಅವರ ನೆನಪಿಗೆ ಇರಾದಲ್ಲಿ ‘ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್’ ಸ್ಥಾಪಿತವಾಗಿದ್ದು ಜನಪರ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ. ಅಜ್ಜ, ತಂದೆಯವರ ಹೆಜ್ಜೆಗಳನ್ನೇ ಅನುಸರಿಸಿ ಇಂದು ಕಲ್ಲಾಡಿ ದೇವಿಪ್ರಸಾದ ಶೆಟ್ಟಿಯವರು ಕಟೀಲು ಮೇಳವನ್ನು ಬಹು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಕಲ್ಲಾಡಿ ಮನೆತನದ ಎರಡನೇ ತಲೆಮಾರಿನಲ್ಲಿ ಕಟೀಲು ಮೇಳದ ಸಂಖ್ಯೆ 4 ಆಗಿತ್ತು, ಈಗ ಮೂರನೇ ತಲೆಮಾರಿನಲ್ಲಿ 6 ಆಗಿದೆ. ಒಂದು ಕಾಲದಲ್ಲಿ ಬಹು ಕಷ್ಟ ಪಡುತ್ತಿದ್ದ ಕಟೀಲು ಮೇಳದ ಕಲಾವಿದರು ಮೂರು ತಲೆಮಾರುಗಳ ಪರಿಶ್ರಮದಿಂದಾಗಿ ಇಂದು ಬಹು ಸುಖದ ದಿನಗಳನ್ನು ಅನುಭವಿಸುತ್ತಿದ್ದಾರೆ. ಕಲೆಯ ಘನತೆ ಮೇಲೇರಲಿ.

🖊️: ಡಾ.ಶ್ರುತಕೀರ್ತಿರಾಜ
ಸಸ್ಯಶಾಸ್ತ್ರ ಉಪನ್ಯಾಸಕರು, ಕಲಾವಿದರು (ಕಟೀಲು ಮೇಳ)