ಬೆಳಗಾವಿ : 100 ವರ್ಷದ ಇತಿಹಾಸವನ್ನ ಮರುಕಳಿಸುವ ಗಾಂಧಿ ಭಾರತ ಕಾರ್ಯಕ್ರಮಕ್ಕೆ ಇಡೀ ಬೆಳಗಾವಿ ನಗರ ಸಜ್ಜಾಗಿದೆ. ವಿಶ್ವಪ್ರಸಿದ್ಧ ನಾಡಹಬ್ಬ ಮೈಸೂರು ದಸರಾ ಹಬ್ಬದ ಮಾದರಿಯಲ್ಲಿ ಬೆಳಗಾವಿ ನಗರವನ್ನು ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಇಡೀ ಬೆಳಗಾವಿ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಹಬ್ಬದ ವಾತಾವರಣ ನಿರ್ಮಾಣಗೊಳ್ಳಲಿದೆ ಎಂದರು.

1924ರಲ್ಲಿ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ಎಐಸಿಸಿ ಅಧಿವೇಶನ ನಡೆದಿತ್ತು. ಆ ವೇಳೆ ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯದ ಕಿಚ್ಚನ್ನು ಈ ಭಾಗದಲ್ಲಿ ಹಚ್ಚಿದ್ದರು. ಆ ಒಂದು ಸವಿನೆನಪಿಗಾಗಿ ಗಾಂಧಿ ಭಾರತ ಹೆಸರಿನಲ್ಲಿ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಡೀ ಬೆಳಗಾವಿ ನಗರವನ್ನು ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಲಾಗಿದೆ. ವಿದ್ಯುತ್ ದೀಪಾಲಂಕಾರವನ್ನು ನೋಡುವ ಸಲುವಾಗಿ ಬೆಳಗಾವಿಯ ಗ್ರಾಮೀಣ ಪ್ರದೇಶದ ಜನರು ಬರುತ್ತಿದ್ದಾರೆ. ಜಿಲ್ಲೆಯ ಪಾಲಿಗೆ ಇದು ಹಬ್ಬವಾಗಲಿದೆ ಎಂದು ಹೇಳಿದರು.

ಸಿ.ಟಿ.ರವಿ ಅವರದ್ದು ಕೊಳಕು ಮನಸ್ಸಿನ ವ್ಯಕ್ತಿತ್ವ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ : ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಮನಸ್ಸಿನಲ್ಲೆ ಕೊಳೆ ಇಟ್ಟುಕೊಂಡಿದ್ದಾರೆ. ಅದನ್ನು ಎಷ್ಟು ಬಾರಿ ತೊಳೆದರೂ ಹೋಗೋದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಸಿ.ಟಿ.ರವಿ ಅವರೇ ನಿಮ್ಮ ನಾಲಿಗೆಯನ್ನು ಫಿನಾಯಿಲ್ ಹಾಕಿ ತೊಳೆಯಿರಿ. ಮೈಗೆ ಹಚ್ಚಿರೊ ಕೊಳಕನ್ನು ತೊಳೆಯಬಹುದು. ಮನಸ್ಸಿಗೆ ಹಚ್ಚಿರೋ ಕೊಳಕನ್ನು ತೊಳೆಯಲು ಸಾಧ್ಯವಿಲ್ಲ ಎಂದು ನನಗೂ ಹಿರಿಯರೊಬ್ಬರು ಹೇಳಿದ್ದಾರೆ ಎಂದು ಸಚಿವರು ತಿರುಗೇಟು ನೀಡಿದರು.

ಸಿ.ಟಿ.ರವಿ ಅವರ ಮನಸ್ಸಿನಲ್ಲೇ ಕೊಳಕಿದೆ. ಅಂತಹ ಕೊಳಕನ್ನು ತೊಳೆಯಲು ಸಾಧ್ಯವಿಲ್ಲ. ನಾನು ಎರಡು ದಿನಗಳ ಕಾಲ ಸರಿಯಾಗಿ ನಿದ್ದೆ ಮಾಡಲಿಲ್ಲ ಎಂದು ಸಚಿವರು ಹೇಳಿದರು.

ಅಂದು ಪರಿಷತ್ ಕಲಾಪದಲ್ಲಿ ಘಟನೆ ಆದ ಬಳಿಕ ನಾನು ಅಲ್ಲೆ ಕುಳಿತಿದ್ದೆ. ಅವರು ಊಸರವಳ್ಳಿ ಥರ ಓಡಿ ಹೋದರು. ತಕ್ಷಣವೇ ನಾನು ಹರಿಪ್ರಸಾದ್, ಬೋಸರಾಜು ಅವರಿಗೆ ಸಿ.ಟಿ.ರವಿ ಅವರು ಬಳಸಿದ ಭಾಷೆ ಬಗ್ಗೆ ವಿವರಿಸಿದೆ. ಡಾಕ್ಟರ್ ಯತೀಂದ್ರ, ಉಮಾಶ್ರೀ, ನಾಗರಾಜ್ ಯಾದವ್, ಬಿಲ್ಕಿಸ್ ಬಾನೋ, ಎಲ್ಲರೂ ನನ್ನ ಹತ್ತಿರ ಬಂದು, ಸಿ.ಟಿ.ರವಿ ಬಳಸಿದ ಅಶ್ಲೀಲ ಪದದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಎಲ್ಲಾ ನಾಯಕರು ಜೊತೆಗೂಡಿ ಸಭಾಪತಿಗಳ ಬಳಿ ಹೋದೆವು ಎಂದು ಸಚಿವರು ವಿವರಿಸಿದರು.

ನಮ್ಮ ಮಾತನ್ನು ಆಲಿಸಿದ ಸಭಾಪತಿಗಳು ಕೂಡ ಕಣ್ಣೀರು ಹಾಕಿದರು. ಬಳಿಕ ಅಲ್ಲಿದ್ದ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಫೋನ್ ಮಾಡಿ ಘಟನೆಯನ್ನು ವಿವರಿಸಿದರು. ಯಾವುದೇ ಕಾರಣಕ್ಕೂ ಧೈರ್ಯಗೆಡಬೇಡಿ, ನಾವೆಲ್ಲಾ ನಿಮ್ಮೊಂದಿಗಿದ್ದೇವೆ ಎಂದು ಆ ಸಮಯದಲ್ಲಿ ಎಲ್ಲರೂ ನನಗೆ ಧೈರ್ಯ ತುಂಬಿದರು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.