ಭಾರತೀಯ ತಮಿಳರ ಪೊಂಗಲ್ ಹಬ್ಬ(ಶುಕ್ರವಾರ.5). ಸೌದಿ ಅರೇಬಿಯಾದ ಜುಬೇಲ್ ನ ನೆಸ್ಮಾ ವಸತಿ ಕಾಲನಿಯವರೆಲ್ಲ ಸೇರಿ ಬಹಳ ಜೋರಾಗಿ ಪೊಂಗಲ್ ಹಬ್ಬವನ್ನು ಆಚರಿಸುತ್ತಾರೆ.. ಇದರಲ್ಲಿ ತಮಿಳರಷ್ಟೇ ಅಲ್ಲ ಎಲ್ಲ ಭಾಷಿಕರೂ ಕುಟುಂಬ ಸಹಿತ ಭಾಗವಹಿಸಿ ಇದನ್ನು ಭಾರತೀಯ ಹಬ್ಬವನ್ನಾಗಿ ಮಾಡುತ್ತಾರೆ.
ಹಬ್ಬದಲ್ಲಿ 15೦ ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಹಗ್ಗ ಎಳೆಯುವಿಕೆ, ಸ್ಲೋ ಸೈಕ್ಲಿಂಗ್, ಚೆಂಡು ಸಂಗ್ರಹಿಸುವಿಕೆ ಸೇರಿ ಹಲವು ಸ್ಪರ್ಧೆಗಳು ನಡೆಯುತ್ತವೆ. ಮಕ್ಕಳು ಮಹಿಳೆಯರು ಪುರುಷರು ಎಲ್ಲ ಉತ್ಸಾಹದಿಂದ ಭಾಗವಹಿಸುವುದನ್ನು ನೋಡುವುದೇ ಚೆಂದ. ಭಾರತದಲ್ಲೇ ಇದ್ದಂತೆನಿಸಿತು. ಇಲ್ಲಿ ತಮಿಳರು, ತೆಲುಗರು, ಕನ್ನಡಿಗರು, ಮರಾಠಿಗರು, ಮಲೆಯಾಳಿಗರು , ಹಿಂದಿ ಭಾಷಿಕರು ಎಲ್ಲರ ಕುಟುಂಬಗಳಿದ್ದು ಇದೊಂದು ಮಿನಿ ಭಾರತವೇ ಆಗಿದೆ.
( ಇಂತಹ ಆಚರಣೆಗಳನ್ನು ಇಲ್ಲಿ ಕಂಪೌಂಡ್ ಅಥವಾ ಮನೆ ಒಳಗೆ ಆಚರಿಸಬಹುದು. )

ಸೌದಿ ಪ್ರವಾಸಾನುಭವ. -5
************************
ನಾಲ್ಕು ತಾಸಿನಲ್ಲಿ ಜಗತ್ತು ಸುತ್ತಿದೆವು !

ಹೌದು, ನಾಲ್ಕು ತಾಸಿನಲ್ಲೇ ಜಗತ್ತನ್ನು ಸುತ್ತಿಬಂದೆವು. ಚೀನಾ, ಜಪಾನ್, ಸ್ಪೇನ್, ಲಂಡನ್, ಭಾರತ, ಗ್ರೀಸ್, ಯುಎಸ್ ಎ, ಮೊರಾಕ್ಕೊ, ಥೈಲ್ಯಾಂಡ್ …ಎಲ್ಲವನ್ನೂ ನೋಡಿದೆವು…

ಹಿಂದೆ ನಮಗೆ ಹೈಸ್ಕೂಲಿನಲ್ಲಿ ” ಅಸ್ಸೀ ದಿನಮೆ ದುನಿಯಾಕಿ ಸೈರ್” ಎಂಬ ಕಿರು ಹಿಂದಿ ಪುಸ್ತಕವೊಂದು ಪಠ್ಯವಾಗಿತ್ತು. ಎಂಬತ್ತು ದಿವಸಗಳಲ್ಲಿ ಜಗತ್ತು ಸುತ್ತಿದ ಸಾಹಸ ಕತೆ ಅದು. ಹಾಗೆ ಸೌದಿ ಅರೇಬಿಯಾದ ರಿಯಾಧ್ ನಲ್ಲಿ Bldv WORLD ಎಂಬ ಒಂದು ಮನೋರಂಜನಾ ತಾಣಕ್ಕೆ ಹೋಗಿದ್ದೆವು. ಇಲ್ಲಿ ಎಲ್ಲ ಹತ್ತು ಹದಿನೈದು ದೇಶಗಳ ಪ್ರತಿಕೃತಿಗಳನ್ನು ಪ್ರತ್ಯೇಕವಾಗಿ ನಿರ್ಮಾಣ ಮಾಡಲಾಗಿದೆ.

ನಾನು ಹಿಂದೆ ಥೈಲ್ಯಾಂಡ್ ಗೆ ಹೋದಾಗ ಅಲ್ಲಿ “Old Siam” ( ಪ್ರಾಚೀನ ಥೈಲ್ಯಾಂಡ್) ಎಂಬ ವಿಶಿಷ್ಟ ಸ್ಥಳವನ್ನು ನೋಡಿದ್ದೆ. 2೦೦ ಕಿ..ಮೀ. ವ್ಯಾಪ್ತಿಯಲ್ಲಿ ನಾವು ಅಲ್ಲಿ ಇಡೀ ಥೈ ದೇಶವನ್ನೇ ನೋಡಬಹುದಿತ್ತು. ಹಾಗೆ ಇಲ್ಲಿಯೂ ಭಾರತ ಸಹಿತ ಹಲವು ದೇಶಗಳ ಜನಜೀವನ, ಸಂಸ್ಕೃತಿ, ಪ್ರೇಕ್ಷಣೀಯ ಸ್ಥಳಗಳು ಎಲ್ಲವನ್ನೂ ಒಂದೆಡೆ ನೋಡುವಂತೆ ಮಾಡಲಾಗಿದೆ. ನಿಜಕ್ಕೂ ಅಪೂರ್ವ ಅನುಭವ! ಜಗತ್ತಿನ ಬೇರೆ ಬೇರೆ ದೇಶಗಳ ಬಗ್ಗೆ ಸಂಕ್ಷಿಪ್ತವಾಗಿ ಅರಿಯಲು ಬಹಳ ಅನುಕೂಲ. ( ಅರಿಯಬೇಕೆನ್ನುವವರಿಗೆ). ಇತಿಹಾಸದಲ್ಲಿ ಓದಿದ್ದ ಹಲವು ಸಂಗತಿಗಳು ಇಲ್ಲಿ ಮತ್ತೆ ನೆನಪಿಗೆ ಬಂದವು. ಪಿರಾಮಿಡ್ ಗಳ ಒಳನೋಟ, ಲಂಡನ್ ಬ್ರಿಜ್, ಥೈಲ್ಯಾಂಡ್ ತೇಲುವ ಮಾರುಕಟ್ಟೆ, ರಾಜಸ್ಥಾನದ ಹಾಡುಗಾರರ ಹಾಡು, ಚೀನಾ ಪೇಟೆ, ಥೈಲ್ಯಾಂಡ್ ಪಾರಂಪರಿಕ ನೃತ್ಯ, ಬಾಲಿವುಡ್ ಡ್ಯಾನ್ಸ್ ಏನೆಲ್ಲವನ್ನೂ ಇಲ್ಲಿ ಕಾಣಬಹುದಾಗಿದೆ. ಮಕ್ಕಳಿಗೂ ಭರಪೂರ ಮನೋರಂಜನೆ ಇದ್ದೇಇದೆ. ಸಮಯ ಸಾಲದೆ ಕೆಲ ದೇಶಗಳು ಉಳಿದು ಹೋದವು.

ಮೂರು ದಿವಸಗಳಲ್ಲಿ ರಿಯಾಧ್ ನ ಮೂರು ಸ್ಥಳಗಳು ನಮಗೆ ಒದಗಿಸಿದ ಅದ್ಭುತ ಅನುಭವ ಮರೆಯಲಾಗದ್ದು. ಬೌಲ್ಡ್ ವರ್ಲ್ಡ್ ಸಿಟಿಯೊಂದರಲ್ಲಿ ಪ್ರವೇಶಧನವಿಲ್ಲ. ವಂಡರ್ ಗಾರ್ಡನ್ ಮತ್ತು ಬಿಎಲ್ ಡಿವಿ ವರ್ಲ್ಡ್ ಗಳಿಗೆ ಪ್ರವೇಶಧನವಿದೆ. ಹತ್ತು ಸಾವಿರಕ್ಕೆ ಕಡಿಮೆ ಇಲ್ಲದಷ್ಟು ಪ್ರವಾಸಿಗರು ದಿನಾಲು ಇಲ್ಲಿಗೆ ಭೆಟ್ಟಿಕೊಡುತ್ತಾರೆ. ಈಗಂತೂ ಅರಬ್ ಮಹಿಳೆಯರಿಗೆ ವಿಶೇಷ ಸ್ವಾತಂತ್ರ್ಯ ದೊರಕಿರುವುದರಿಂದ ಆದಾಯ ಇಮ್ಮಡಿ ಮುಮ್ಮಡಿಯಾಗಿದೆ. ಒಬ್ಬ ಪುರುಷನೊಡನೆ ನಾಲ್ವರು ಮಹಿಳೆಯರು( ಪತ್ನಿಯರು), ಆರೆಂಟು ಮಕ್ಕಳು ಸರ್ವೇಸಾಮಾನ್ಯ. ಆದರೆ ಮಹಿಳೆಯರು ಪೂರ್ಣ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದಾರೆ. ಮೊದಲಿನ ಹಾಗಿಲ್ಲ ಪರಿಸ್ಥಿತಿ. ಮುಖ ಮುಚ್ಚಿಕೊಳ್ಳುವವರು ಕಡಿಮೆ. ಮಹಿಳೆಯರೇ ಕಾರು ಚಾಲನೆ ಮಾಡಿಕೊಂಡು ಬರುತ್ತಾರೆ.

ಬೇರೆ ಬೇರೆ ದೇಶಗಳಿಗೆ ಪ್ರವಾಸ ಹೋಗಲು ಸಾಧ್ಯವಿಲ್ಲದೆ ಇದ್ದವರು ಇಲ್ಲಿ ಒಂದೇ ಕಡೆ ಹಲವು ದೇಶಗಳ ಬಾಹ್ಯ ಸ್ವರೂಪದ ಸ್ಥೂಲ ಕಲ್ಪನೆಯನ್ನು ಪಡೆಯಬಹುದಾಗಿದೆ. ಶಾಲಾ ಕಾಲೇಜು ಮಕ್ಕಳಿಗೆ ಪಾಠಗಳ ಜತೆಗೆ ಇದು ಪ್ರ್ಯಾಕ್ಟಿಕಲ್ ಅನುಭವವನ್ನು ಪಡೆಯಲು ಅನುಕೂಲವೆನಿಸುತ್ತದೆಂದು ನನ್ನ ಭಾವನೆ.

ಸೌದಿ ಪ್ರವಾಸಾನುಭವ. -6
***********************

ಸೌದಿ ಅರೇಬಿಯಾದ ರಾಜಧಾನಿ ರಿಯಾಧ್ ನಲ್ಲಿ ನಾಲ್ಕು ದಿನ ವಾಸ್ತವ್ಯ ಹೂಡಿ ನೋಡಬೇಕಾದ ಕೆಲವು ಮಹತ್ವದ ಸ್ಥಳಗಳನ್ನು ನೋಡಿ ಡಿ.29 ರ ಸಂಜೆ ಮರಳಿ ಅಲ್ ಜುಬೇರಾಕ್ಕೆ ವಾಪಸು ಬಂದೆವು. 5೦೦ ಕಿ. ಮೀ. ಗಳ ದೀರ್ಘ ಪ್ರವಾಸ. ಕನಿಷ್ಠ ಐದು ತಾಸು ಬೇಕು. ನಮ್ಮ ಅಳಿಯ ಗೌರೀಶನ ಏಳು ಸೀಟುಗಳ ಕಂಫರ್ಟೆಬಲ್ ಕಾರು ಇದ್ದುದರಿಂದ ಅಷ್ಟೊಂದು ಆಯಾಸವೇನೂ ಆಗಲಿಲ್ಲ. ಆದರೆ ಒಬ್ಬರೇ ಅಷ್ಟು ದೂರ ಡ್ರೈವಿಂಗ್ ಮಾಡುವುದು ಮಾತ್ರ ಕಷ್ಟವೇ ಸರಿ. ರಸ್ತೆ ತುಂಬ ಅಗಲ ಮತ್ತು ಚೆನ್ನಾಗಿರುವುದರಿಂದ ಹಾಗೂ ಗಂಟೆಗೆ 12೦-13೦ ಕಿ. ಮೀ. ವೇಗದಲ್ಲಿ ಚಾಲನೆ ಮಾಡುವುದರಿಂದ ಬೇಗ ಬರಲು ಸಾಧ್ಯವಾಯಿತು. ಅಲ್ಲದೆ ನಮ್ಮಲ್ಲಿಯ ಹಾಗೆ ಪದೇಪದೇ ಬ್ರೆಕ್ ಹಾಕುವುದಾಗಲೀ, ಹಾರ್ನ್ ಒತ್ತಿ ಅರಚುವ ಕೆಟ್ಟ ಪದ್ಧತಿಯಾಗಲೀ ಇಲ್ಲಿ ಇಲ್ಲ.
ರಿಯಾಧನಿಂದ ಮ. 1.45 ಕ್ಕೆ ಹೊರಟು ಸಂಜೆ 6.45ಕ್ಕೆ ಬಂದು ತಲುಪಿದ್ದಾಯಿತು.
ರಿಯಾಧ ಹಲವು ಮರೆಯಲಾಗದ ನೆನಪುಗಳನ್ನು ಉಳಿಸಿತು. ಮೊದಲೇ ಹೇಳಿದಂತೆ ಅತ್ಯಂತ ಸುವ್ಯವಸ್ಥಿತ, ಸುಯೋಜಿತ ನಗರ. ಅಗಲಗಲ ರಸ್ತೆಗಳು. ಬಸ್ , ಟೆಂಪೋ, ರಿಕ್ಷಾ ಮೊದಲಾದವುಗಳ ಹಾವಳಿ ಕಡಿಮೆ. ಕಾರುಗಳೇ ಜಾಸ್ತಿ. ಆದರೂ ಬೆಂಗಳೂರಿನ ಹಾಗೆ ಟ್ರಾಫಿಕ್ ಜಾಮ್ ಆಗೋದಿಲ್ಲ. ವ್ಯವಸ್ಥೆ ಹಾಗಿದೆ.
ನಾನು ಕೇಳಿದಂತೆ ಇಲ್ಲಿಯ ಮುನಿಸಿಪಾಲಿಟಿ/ ಕಾರ್ಪೊರೇಷನ್ ಬಹಳ ಸ್ಟ್ರಿಕ್ಟ್ . ಹೊಟೆಲುಗಳ ಸ್ವಚ್ಛತೆ ಬಗ್ಗೆ ಬಹಳ ಕಾಳಜಿ. ಬಿಗಿ ನಿಯಮ. ಅಡಿಗೆ ಸಿದ್ಧ ಮಾಡುವ ಸ್ಥಳ ಗ್ರಾಹಕರಿಗೆ ಕಾಣುವಂತಿರಬೇಕೆಂಬ ನಿಯಮವಿದೆ. ಗುಣಮಟ್ಟದ ವಸ್ತುಗಳ ಬಳಕೆ ಕಡ್ಡಾಯ. ಇಲ್ಲದಿದ್ದರೆ ದಂಡ. ಕಲುಷಿತ ವಸ್ತುಗಳನ್ನು ಇಡುವಂತಿಲ್ಲ. ನಮ್ಮ ಭಾರತದಲ್ಲಿ ಹೊಟೆಲ್ ಅಡಿಗೆ ಮಾಡುವ ಸ್ಥಳ ಹೆಚ್ಚಾಗಿ ಎಷ್ಟು ಹೊಲಸಾಗಿರುತ್ತದೆಂಬುದು ನಮಗೆಲ್ಲ ಗೊತ್ತೇಇದೆ. ಸೌದಿಯಲ್ಲಿ ಅದೆಲ್ಲ ನಡೆಯುವುದಿಲ್ಲ. ಜನರೂ ಸ್ವಚ್ಛತೆಗೆ ಸಹಕರಿಸುತ್ತಾರೆ.
ಕಾಯ್ದೆ ಕಾನೂನು ಏಕೆ ಬಿಗಿಯಾಗಿರಬೇಕೆಂಬುದನ್ನು ಇಂಥಲ್ಲಿ ಬಂದು ತಿಳಿದುಕೊಳ್ಳಬೇಕು. ಅಪರಾಧ ಸಿದ್ಧವಾದರೆ ಕತ್ತು ಕತ್ತರಿಸುವಷ್ಟು ಕ್ರೂರ ಶಿಕ್ಷೆಯಾದ್ದರಿಂದ ಅಪರಾಧ ಮಾಡುವವರಿಗೆ ಒಂದು ಹೆದರಿಕೆ ಇದ್ದೇಇರುತ್ತದೆ. ವಿಳಂಬವಿಲ್ಲದೆ ವಿಚಾರಣೆ, ತ್ವರಿತ ನ್ಯಾಯ. ನಮ್ಮ ದೇಶದ ಕಾನೂನು ನ್ಯಾಯಾಂಗ ವ್ಯವಸ್ಥೆ ಹೇಗಿದೆ ಎಂದು ನಾನು ಹೇಳಬೇಕಾಗಿಯೇಇಲ್ಲವಲ್ಲ. ನಾವೀಗ ಕಾನೂನಿಗೂ ಹೆದರುವುದಿಲ್ಲ, ದೇವರಿಗೂ ಹೆದರುವುದಿಲ್ಲ. ಆ ಸ್ಥಿತಿಗೆ ತಲುಪಿದ್ದೇವೆ.
ಸೌದಿ ಅರೇಬಿಯಾ ಈಚೆಗೆ ಹಲವು ಬಗೆಯ ನಿರ್ಬಂಧಮುಕ್ತವಾಗಿದ್ದು ತ್ವರಿತಗತಿಯಲ್ಲಿ ಬೆಳೆಯುತ್ತಿದೆ. 2೦3೦ ರ ವೇಳೆಗೆ ಬೆಳವಣಿಗೆಯ ಮತ್ತೊಂದು ಹಂತ ತಲುಪಲು ಪೂರ್ವಸಿದ್ಧತೆ ನಡೆದಿದೆ. ಆ ಅಪೂರ್ವ ಯೋಜನೆ ಕಾರ್ಯರೂಪಕ್ಕಿಳಿಯತೊಡಗಿದ್ದು ಅದರ ವಿವರಗಳನ್ನು ನಾನು ಮುಂದೆ ಪ್ರತ್ಯೇಕವಾಗಿ ಬರೆಯುತ್ತೇನೆ.

*ಎಲ್.ಎಸ್.ಶಾಸ್ತ್ರಿ, ಹಿರಿಯ ಪತ್ರಕರ್ತರು, ಸಾಹಿತಿಗಳು, ಬೆಳಗಾವಿ