ಸೌದಿ ಅರೇಬಿಯಾದಲ್ಲಿರುವುದು ರಾಜಮನೆತನದ ಆಡಳಿತ. ಅದು ಸಂಪೂರ್ಣವಾಗಿ ನಿರಂಕುಶ ಪ್ರಭುತ್ವ. ಈ ದೇಶದ ಎಲ್ಲ ಸ್ವಾತಂತ್ರ್ಯ ರಾಜನಲ್ಲೇ ಕೇಂದ್ರೀಕೃತವಾಗಿದೆ. ನಾಗರಿಕರಿಗೆ ಯಾವ ಬಗೆಯ ಸ್ವಾತಂತ್ರ್ಯವೂ ಇಲ್ಲ. ಅವರವರ ಕೆಲಸ ಮಾಡಿಕೊಂಡುಹೋಗುವುದಷ್ಟೇ. ಅರಸೊತ್ತಿಗೆಯ ಯಾವ ನಿರ್ಣಯವನ್ನೂ ಯಾರೂ ಪ್ರಶ್ನಿಸಲಾಗದು. ಪ್ರಶ್ನಿಸಿದವರನ್ನು ಹತ್ತಿಕ್ಕಲಾಗುವುದು. ಭಾರತದಲ್ಲಿ ಪದೇಪದೇ ಕೇಳಿಬರುವ ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಬಂದ್, ಸಂಪು, ಸತ್ಯಾಗ್ರಹ, ಧರಣಿ, ಪ್ರತಿಭಟನೆ, ಹೋರಾಟ ಮೊದಲಾದ ಶಬ್ದಗಳು ಇಲ್ಲಿಯ ಶಬ್ದಕೋಶದಲ್ಲೂ ಇರಲಿಕ್ಕಿಲ್ಲ.
ಮೂಲತಃ ಇಲ್ಲಿಯ ಕಾನೂನು ಇಸ್ಲಾಂ ಧಾರ್ಮಿಕ ಸಿದ್ಧಾಂತದ ಮೇಲೆ ( ಶರಿಯಾ) ರೂಪುಗೊಂಡಿದ್ದು. ಅದು ಬಹಳ ಕಠಿಣ ಸ್ವರೂಪದ್ದು. ಕರುಣೆ, ದಯೆ, ಅನುಕಂಪ, ಸಹಾನುಭೂತಿ ಯಾವುದಕ್ಕೂ ಅವಕಾಶವಿಲ್ಲ. ಅಚ್ಚರಿಯಾದರೂ ನಿಜ ಎಂಬಂತೆ ಇಲ್ಲಿ ತಪ್ಪು ಸಿದ್ಧವಾದರೆ ಅರಸರ ಮಕ್ಕಳು ಅಥವಾ ಮಂತ್ರಿ ಯಾರಿಗೂ ಶಿಕ್ಷೆ ತಪ್ಪಿದ್ದಲ್ಲ. ಅದಕ್ಕೆ ಉದಾಹರಣೆ.
2017-18 ರಲ್ಲಿ ಇಲ್ಲಿ ಒಂದು ಭ್ರಷ್ಟಾಚಾರ ವಿರೋಧಿ ” ಶುದ್ಧೀಕರಣ” ಕಾರ್ಯಾಚರಣೆ ನಡೆಸಲಾಯಿತು. ಈ ಕಾರ್ಯಾಚರಣೆಯಲ್ಲಿ ಸುಮಾರು 3೦೦ ಕ್ಕೂ ಹೆಚ್ಚು ಜನರ ಬಂಧನವಾಯಿತು. ಹಾಗೆ ಈ ಕಾರ್ಯಾಚರಣೆಯಲ್ಲಿ ಬಂಧನಕ್ಕೊಳಗಾದವರು ಯಾರು, ಎಂಥವರು ಎಂದು ತಿಳಿದರೆ ಆಶ್ಚರ್ಯವಾಗದೇ ಇರದು. ಅವರಲ್ಲಿ ಹಲವು ರಾಜಕುಮಾರರು, ಮಂತ್ರಿಗಳು, ಗವರ್ನರರು, ಉನ್ನತ ಮಿಲಿಟರಿ ಅಧಿಕಾರಿಗಳು , ಖ್ಯಾತ ಉದ್ಯಮಿಗಳು ಎಲ್ಲ ಇದ್ದರು. ಅಂಥವರು ಕಣ್ಣು ತಪ್ಪಿಸಿ ಪಲಾಯನ ಮಾಡದಂತೆ ಖಾಸಗಿ ಹೆಲಿಕಾಪ್ಟರ್ ಜೆಟ್ ಗಳನ್ನೇ ನಾಶಪಡಿಸಲಾಯಿತು. 2೦೦೦ ಕ್ಕೂ ಹೆಚ್ಚು ದೇಶಿಯ ಬ್ಯಾಂಕ್ ಖಾತೆಗಳನ್ನೇ ಸ್ಥಗಿತಗೊಳಿಸಲಾಯಿತು. ಕೆಲವರನ್ನು ಬಂಧಿಸುವ ಬದಲು ಕಾರು/ ವಿಮಾನ ಅಪಘಾತ, ಮನೆಗೆ ಬೆಂಕಿ, ವಿಷಪ್ರಾಶನ ಮೊದಲಾದ ರಹಸ್ಯ ಕಾರ್ಯಾಚರಣೆಗಳಲ್ಲಿ ಮುಗಿಸಲಾಯಿತು. ರಾಣಿ, ರಾಜಕುಮಾರರು, ಮಾಧ್ಯಮ ವ್ಯಕ್ತಿಗಳು, ವಿದ್ವಾಂಸರು, ರಾಜಕುಮಾರಿಯರು, ಮಂತ್ರಿಗಳು, ನ್ಯಾಯಾಧೀಶರು ಎಲ್ಲರನ್ನೂ ಶಿಕ್ಷೆಗೊಳಪಡಿಸಲಾದದ್ದು ಇಲ್ಲಿಯ ನ್ಯಾಯ ಪದ್ಧತಿ ಎಷ್ಟು ಕಠೋರವಾದದ್ದೆಂಬುದನ್ನು ಸ್ಪಷ್ಟಪಡಿಸುತ್ತದೆ.
ನಾವೀಗ ಅಪರಿಚಿತ ವ್ಯಕ್ತಿಯಿಂದ ಉಗ್ರಗಾಮಿಯ ಹತ್ಯೆ, ಜೈಲಿನಲ್ಲೇ ವಿಷಪ್ರಾಶನ ಎಂದೆಲ್ಲ ಕೇಳುತ್ತಿದ್ದೇವೆ. ಸೌದಿಯಲ್ಲಿ ಅದು ತೀರಾ ಸಾಮಾನ್ಯ ವಿಚಾರ. ಪ್ರಸಿದ್ಧ ವ್ಯಕ್ತಿಗಳನ್ನು ಬಂಧಿಸಿದರೆ ಅದು ಅಂತಾರಾಷ್ಟ್ರೀಯ ಟೀಕೆಗೆ ಕಾರಣವಾಗುತ್ತದೆ. ಅದ್ದರಿಂದ ಸದ್ದಿಲ್ಲದೇ ಅಂಥವರನ್ನು ಮುಗಿಸುವುದೇ ಉತ್ತಮ ಎಂಬುದು ಇವರ ನಿಲುವು. ಮಾಧ್ಯಮವೂ ಸರಕಾರದ ನಿಯಂತ್ರಣದಲ್ಲೇ ಇರುವುದರಿಂದ ಬಹಿರಂಗವಾಗುವ ಸಂಗತಿಗಳೇ ಕಡಿಮೆ.
ಅಪರಾಧಿಗಳಿಗೆ ಮರಣದಂಡನೆ, ಕತ್ತು ಹಾರಿಸುವುದು, ಕೈ ಕತ್ತರಿಸುವುದು, ಕಲ್ಲೇಟಿನಿಂದ ಸಾಯಿಸುವುದು ಮೊದಲಾದ ಶಿಕ್ಷೆಗಳಿವೆ. ಅದು ಅಮಾನವೀಯ ಎಂದು ಅನಿಸಿದರೂ ಅಪರಾಧ ಮಾಡಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದೂ ಸುಳ್ಳಲ್ಲ. ಕಾನೂನಿನ ಯಾವ ಭಯವೂ ಇಲ್ಲದಲ್ಲಿ ಅಪರಾಧಗಳ ಪ್ರಮಾಣ ಹೆಚ್ಚಾಗುವುದು ಸಹಜ. ಭ್ರಷ್ಟಾಚಾರವನ್ನು ಹೋಗಲಾಡಿಸುವ ಬದಲು ಭ್ರಷ್ಟರನ್ನು ಸರಕಾರವೇ ರಕ್ಷಿಸುವಂತಹ ನಮ್ಮ ದೇಶದ ಉದಾಹರಣೆ ಇದ್ದೇ ಇದೆ.
ಸೌದಿ ಪ್ರವಾಸಾನುಭವ :15
*************
ಅರಬ್ ನಾಡಿನಲ್ಲಿ ಮಾಧ್ಯಮದ ಸ್ಥಿತಿಗತಿ
*************
ಈಗ ನಾನು ನನ್ನ ಕ್ಷೇತ್ರಕ್ಕೆ ಕಾಲಿಡುತ್ತಿದ್ದೇನೆ. ಸೌದಿ ಅರೇಬಿಯಾದಲ್ಲಿ ಅರಸೊತ್ತಿಗೆಯ ಆಡಳಿತವಿದೆ. ಇಲ್ಲಿ ಪತ್ರಿಕೆ ಅಥವಾ ಟಿವಿಮಾಧ್ಯಮಗಳು ಸಹ ಸರಕಾರದ ನಿಯಂತ್ರಣದಲ್ಲಿವೆ. ಮಾಧ್ಯಮ ಸ್ವಾತಂತ್ರ್ಯ , ಅಭಿವ್ಯಕ್ತಿ ಸ್ವಾತಂತ್ರ್ಯ ಯಾವುದೂ ಇಲ್ಲ. ಎಲ್ಲವೂ ಸೆನ್ಸಾರಶಿಪ್ ಗೆ ಒಳಪಟ್ಟಿರುತ್ತವೆ. ಆಡಳಿತದ ವಿರುದ್ಧ ಯಾರೂ ಏನೂ ಬರೆಯುವಂತಿಲ್ಲ, ಮಾತಾಡುವಂತಿಲ್ಲ. 2006 ರಿಂದ ಸ್ವಲ್ಪ ಮಟ್ಟಿಗೆ ನಿರ್ಬಂಧ ಸಡಿಲಿಸಿದ್ದರೂ ಅದು ನಾಮಕಾವಾಸ್ತೆ.
ಸೌದಿಯಲ್ಲಿ ಹತ್ತಕ್ಕು ಹೆಚ್ಚು ಸ್ಥಳೀಯ ಅರೆಬಿಕ್ ದಿನಪತ್ರಿಕೆಗಳಿವೆ. ಹೊರಗಿನ ದೇಶಗಳ ಕೆಲ ಪ್ಯಾನ್ ಅರಬ್ ಪತ್ರಿಕೆಗಳು, ಉರ್ದು ಮತ್ತು ಮಲೆಯಾಳಿ ದಿನಪತ್ರಿಕೆಗಳು ಸಹ ಪ್ರಕಟಗೊಳ್ಳುತ್ತವೆ. ಅಲ್ ಜಜೀರ್ ಇಲ್ಲಿಯ ಹಳೆಯ ಮತ್ತು ದೊಡ್ಡ ದೈನಿಕ. ಇದು 1960 ರಲ್ಲಿ ಆರಂಭವಾಗಿದ್ದು. ಇವರದು ಟಿವಿ ಚಾನೆಲ್ ಸಹ ಇದೆ. ಅಲ್ ಬಿಲಾವ್, ಅಲ್ ಎಕ್ತಿಸಾದಿಯಾ, ಅಲ್ ಮದೀನಾ, ಅಲ್ ನದ್ವಾ, ಅಲ್ ರಿಯಾಧ್, ಅಲ್ ವತನ್, ಓಕಾಜ್, ಕೆಎಸ್ಎ ಸ್ಪೋರ್ಟ್ಸ ಮೊದಲಾದ ಪತ್ರಿಕೆಗಳು, ಸೌದಿ ಟಿವಿ ಚಾನೆಲ್, ಖುರಾನ್ ಟಿವಿ, ಸುನಾ ಟಿವಿ, ಅಲ್ ಅಖರಿಯಾ, ಅಲ್ ಅರೇಬಿಯಾ, ಎಂಬಿಸಿ ಮೊದಲಾದ ಟಿವಿ ಚಾನೆಲ್ ಗಳಿವೆ. ಮನೋರಂಜನೆ, ಕ್ರೀಡೆ , ಸಂಗೀತಗಳಿಗೂ ಅವಕಾಶವಿದೆ.
ವಿಶೇಷವೆಂದರೆ ಸೌದಿ ಅರೇಬಿಯಾದಲ್ಲಿ ಎರಡನೇ ದೊಡ್ಡ ಜನಸಂಖ್ಯೆ ಕೇರಳದ ಮಲೆಯಾಳಿಗಳದು. ನಂತರ ಬಂಗಾಲಿಗಳದು. ಮಾಧ್ಯಮಮ್, ಗಲ್ಫ್ ತೇಜಸ್ ಮೊದಲಾದ ಮಲೆಯಾಳಿ ದಿನಪತ್ರಿಕೆಗಳು ಇಲ್ಲಿ ಪ್ರಸಾರ ಹೊಂದಿವೆ. ಉರ್ದು ನ್ಯೂಸ್ ದಿನಪತ್ರಿಕೆ ಪ್ರಕಟವಾಗುತ್ತಿದೆ. ಅರಬ್ ನ್ಯೂಸ್, ಸೌದಿ ಗೆಜೆಟ್ ಮೊದಲಾದ ಇಂಗ್ಲಿಷ್ ದಿನಪತ್ರಿಕೆಗಳೂ ಇವೆ. ಸಯೀದತಿ ಎಂಬ ಒಂದು ಮಹಿಳಾ ಪತ್ರಿಕೆ ಬಹಳ ಪ್ರಸಿದ್ಧವಾದುದು. ಅದು 1981 ರಿಂದಲೇ ಅರೇಬಿಕ್ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಪ್ರಕಟವಾಗುತ್ತಿದೆ. 90 ರ ದಶಕದ ವೇಳೆಗೆ ಇಲ್ಲಿ 25 ಕ್ಕೂ ಹೆಚ್ಚು ನಿಯತಕಾಲಿಕಗಳಿದ್ದವು.
ಪ್ರತಿ ವರ್ಷ ಎಪ್ರಿಲ್ 21 ಅರಬ್ ಮಾಧ್ಯಮ ದಿನ ಆಚರಿಸಲಾಗುತ್ತದೆ. ಅರಬ್ ಮೀಡಿಯಾ ಎಕ್ಸಲೆನ್ಸ್ ಪ್ರಶಸ್ತಿಗಳನ್ನೂ ಸರಕಾರ ಸ್ಥಾಪಿಸಿದೆ. ಬೇರೆ ಬೇರೆ ಥೀಮ್ ಗಳನ್ನಾಧರಿಸಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಸೌದಿ ಸರಕಾರದ ಮಾಧ್ಯಮ ಸಚಿವಾಲಯ ಇವೆಲ್ಲವನ್ನೂ ನಿಯಂತ್ರಿಸುತ್ತದೆ.
2018ರಲ್ಲಿ ಮಾಧ್ಯಮ ಕ್ಷೇತ್ರದ ವ್ಯಕ್ತಿ ಜಮಾಲ್ ಖಶೋಗಿಯ ರಹಸ್ಯ ಹತ್ಯೆ ಅಂತಾರಾಷ್ಟ್ರೀಯ ಪ್ರತಿಕ್ರಿಯೆಗಳಿಗೆ ಕಾರಣವಾಯಿತು. ಆದರೆ ಇಲ್ಲಿ ಅದು ದೊಡ್ಡ ಸುದ್ದಿಯಾಗುವುದೇಇಲ್ಲ. ಅರಸೊತ್ತಿಗೆಗೆ ನಿಷ್ಠವಾಗಿದ್ದರೆ ಮಾಧ್ಯಮಕ್ಕೆ ಸಬ್ಸಿಡಿ ವಗೈರೆ ಉತ್ತೇಜನವಿದ್ದೇ ಇದೆ.
✒️ಎಲ್.ಎಸ್.ಶಾಸ್ತ್ರಿ, ಹಿರಿಯ ಪತ್ರಕರ್ತರು, ಸಾಹಿತಿಗಳು, ಕಲಾವಿದರು, ಬೆಳಗಾವಿ