ಬೆಳಗಾವಿ :
ಮಹಾರಾಷ್ಟ್ರ ಸರಕಾರದ ಮಹಾತ್ಮ ಜ್ಯೋತಿರಾವ್ ಪುಲೆ ಜನಾರೋಗ್ಯ ವಿಮೆ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಿದವರ ಮೇಲೆ ರಾಜದ್ರೋಹದಡಿ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಈ ಯೋಜನೆಗೆ ತಡೆಯೊಡ್ಡಬೇಕು ಎಂದು ಒತ್ತಾಯಿಸಿ ಕನ್ನಡಿಗರು ಇದೀಗ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಸಿಡಿಗಿದ್ದಿದ್ದಾರೆ.
ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರಿಗೆ ಮನವಿ ಸಲ್ಲಿಸಿದ್ದಾರೆ. ಗಡಿ ವಿವಾದಕ್ಕೆ ಒಳಪಟ್ಟ ಕರ್ನಾಟಕದ ನಾಲ್ಕು ಜಿಲ್ಲೆಗಳ 865 ಹಳ್ಳಿಗಳು, ಪಟ್ಟಣಗಳಿಗೆ ಈ ವಿಮೆ ಯೋಜನೆ ರೂಪಿಸಲಾಗಿದೆ. ಬೆಳಗಾವಿ ನಗರದಲ್ಲಿ ಒಂದು ಸಹಾಯವಾಣಿ ಹಾಗೂ ನಾಲ್ಕು ಸೇವಾಕೇಂದ್ರ ಆರಂಭಿಸಲಾಗಿದೆ. ಒಂದು ರಾಜ್ಯ ಇನ್ನೊಂದು ರಾಜ್ಯದಲ್ಲಿ ಅನುಮತಿ ಇಲ್ಲದೆ ತನ್ನ ಯೋಜನೆಯನ್ನು ಜಾರಿಗೊಳಿಸುವುದು ಭಾರತದ ಒಕ್ಕೂಟ ವ್ಯವಸ್ಥೆಗೆ ವಿರುದ್ದವಾಗಿದೆ. ಇಂತಹ ಚಟುವಟಿಕೆ ಕೈಗೊಳ್ಳುವವರ ವಿರುದ್ಧ ರಾಜದ್ರೋಹ ಕಾನೂನಿನಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಭಾಷೆಯ ಆಧಾರದಲ್ಲಿ ಬೆಳಗಾವಿ ಗಡಿಭಾಗದ ಮರಾಠಿಗರನ್ನು ಸೆಳೆಯಲು ಈ ತಂತ್ರ ಅನುಸರಿಸಲಾಗಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿ ವಿವಾದ ಸುಪ್ರೀಂ ಕೋರ್ಟ್ ನಲ್ಲಿದೆ. ವಿವಾದ ನ್ಯಾಯಾಲಯದಲ್ಲಿರುವಾಗ ಈ ಯೋಜನೆಯ ಸಂಖ್ಯೆಗಳನ್ನು ಬಳಸಲು ಮಹಾರಾಷ್ಟ್ರ ಸರಕಾರ ಹೊಂಚು ಹಾಕಿದೆ. ಕರ್ನಾಟಕದಲ್ಲಿನ ಮರಾಠಿಗರು ತಮ್ಮನ್ನು ಬೆಂಬಲಿಸುತ್ತಾರೆ ಎಂದು ನ್ಯಾಯಾಲಯದ ದಿಕ್ಕು ತಪ್ಪಿಸುವ ಸಾಧ್ಯತೆ ಇದೆ. ಯಾವುದೇ ಕಾರಣಕ್ಕೂ ಯೋಜನೆಯನ್ನು ಕರ್ನಾಟಕದಲ್ಲಿ ಮುಂದುವರಿಸಲು ಬಿಡಬಾರದು ಎಂದು ಒತ್ತಾಯಿಸಿದರು.
ಬೆಳಗಾವಿಯಲ್ಲಿ ಮಹಾರಾಷ್ಟ್ರ ಸರಕಾರ ಇಷ್ಟೆಲ್ಲ ಬೆಳವಣಿಗೆ ನಡೆಸಿದರೂ ಕರ್ನಾಟಕ ಸರಕಾರಕ್ಕೆ ಆ ರಾಜ್ಯದ ಯೋಜನೆಯ ಗಂಭೀರತೆ ತಿಳಿಯುತ್ತಿಲ್ಲ. ರಾಜ್ಯದ ಸಚಿವರು ಮೌನ ಮುರಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಹಾರಾಷ್ಟ್ರ ಸರಕಾರದ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಸಾಕಷ್ಟು ಜನ ಮುಗಿ ಬೀಳುತ್ತಿದ್ದಾರೆ. ಈ ಯೋಜನೆಯಡಿ ಚಿಕಿತ್ಸೆ ನೀಡಲು ಬೆಳಗಾವಿಯಲ್ಲಿ ಅರಿಹಂತ್,ಕೆಎಲ್ ಇ ಆಸ್ಪತ್ರೆ ಮತ್ತು ಗಡಿಯಲ್ಲಿ 140 ಆಸ್ಪತ್ರೆಗಳನ್ನು ಆಯ್ಕೆ ಮಾಡಲಾಗಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಡಳಿತದಿಂದ ನೋಟಿಸ್ ಜಾರಿ ;
ಮಹಾತ್ಮ ಜ್ಯೋತಿರಾವ್ ಫುಲೆ ಜನಾರೋಗ್ಯ ವಿಮಾ ಯೋಜನೆಯಡಿ ಅರ್ಜಿ ಪಡೆಯುತ್ತಿರುವ ನಾಲ್ಕು ಸೇವಾ ಕೇಂದ್ರಗಳಿಗೆ ನೋಟಿಸ್ ಕೊಡುತ್ತೇವೆ. ಕೆಪಿಎಂಸಿ ಕಾಯ್ದೆಯಡಿ ಇವುಗಳನ್ನು ತೆರೆಯಲಾಗಿದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಕರ್ನಾಟಕದಲ್ಲಿ ಜಾರಿಗೊಳಿಸಿರುವ ಯೋಜನೆ ಬಗ್ಗೆ ಬೆಳಗಾವಿಯ ಎರಡು ಆಸ್ಪತ್ರೆಗಳಿಗೆ ತಕ್ಷಣ ಕಾರಣ ಕೇಳಿ ನೋಟಿಸ್ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದರು.
ಕರ್ನಾಟಕದಲ್ಲಿ ಪ್ರತಿಯೊಬ್ಬ ನಾಗರಿಕರಿಗೆ 5 ಲಕ್ಷ ವರೆಗೆ ವಿಮೆ ಸೌಕರ್ಯವಿದೆ. ಆದರೂ ಮಹಾರಾಷ್ಟ್ರ ಏಕೆ ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಈ ಬಗ್ಗೆ ಸಮಗ್ರವಾಗಿ ಚರ್ಚಿಸಿ ಮುಂದಿನ ಕ್ರಮ ವಹಿಸುವುದಾಗಿ ಅವರು ತಿಳಿಸಿದರು.