ಬೆಂಗಳೂರು: ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕ-2024 ಅನ್ನು ವಿಧಾನ ಪರಿಷತ್ನಲ್ಲಿ ಶುಕ್ರವಾರ ತಿರಸ್ಕರಿಸಲಾಗಿದೆ. ಇದರಿಂದ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದ್ದು, ಪ್ರತಿಪಕ್ಷ ಬಿಜೆಪಿ ಜೈ ಶ್ರೀರಾಮ ಘೋಷಣೆ ಕೂಗಿ ಸಂಭ್ರಮಿಸಿದೆ.
ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಮಸೂದೆಯನ್ನು ವಿಧಾನ ಇಂದು ಪರಿಷತ್ ನಲ್ಲಿ ಮಂಡಿಸಿದರು.
ತಿದ್ದುಪಡಿ ವಿಧೇಯಕ ಮಂಡಿಸಿ ಮಾತನಾಡಿದ ರಾಮಲಿಂಗಾರೆಡ್ಡಿ ಅವರು, 2003ರಿಂದ ವಿಧೇಯಕ ಜಾರಿಯಲ್ಲಿದೆ. 2003ರ ಮೇ 1 ರಿಂದ ದೇವಸ್ಥಾನಗಳಿಂದ ನಿಧಿ ಸಂಗ್ರಹಿಸಲಾಗುತ್ತಿದೆ. ಈಗಿರುವ ನಿಯಮದಂತೆ ಸರ್ಕಾರಕ್ಕೆ 8 ಕೋಟಿ ರೂ. ಸಲ್ಲಿಕೆ ಆಗುತ್ತಿದೆ ಎಂದರು. ಈಗಿನ ಸಾಮಾನ್ಯ ಸಂಗ್ರಹಣ ನಿಧಿಯಿಂದ ಧಾರ್ಮಿಕ ಕೆಲಸ ಮಾಡಲಾಗಲ್ಲ. ಹೊಸ ನಿಯಮದಿಂದ 60 ಕೋಟಿ ರೂಪಾಯಿ ಹಣ ಸಂಗ್ರಹ ಆಗುತ್ತದೆ. ಸಿ ದರ್ಜೆಯ ದೇಗುಲಗಳನ್ನು ನಿರ್ವಹಿಸಲು ಇದರಿಂದ ಸಾಧ್ಯವಾಗುತ್ತದೆ ಎಂದರು.
ವಿಧೇಯಕದಲ್ಲಿದ್ದ ತಿದ್ದುಪಡಿ ಅಂಶಗಳಿಗೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ತೀವ್ರ ಆಕ್ಷೇಪ ಮತ್ತು ವಿರೋಧವನ್ನು ವ್ಯಕ್ತಪಡಿಸಿದರು. ಒಂದು ಕೋಟಿಗಿಂತಲೂ ಹೆಚ್ಚು ಆದಾಯ ಇರುವ ದೇವಸ್ಥಾನಗಳ ಒಟ್ಟು ಆದಾಯದಿಂದ ಶೇಕಡ 10% ರಷ್ಟು ನಿಧಿ ಸಂಗ್ರಹಣೆ ಮಾಡುವ ನಿರ್ಧಾರವನ್ನು ಕೈಬಿಡಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು.
ಪರ-ವಿರೋಧದ ಚರ್ಚೆಯ ಬಳಿಕ ಉಪ ಸಭಾಪತಿ ಪ್ರಾಣೇಶ್ ಅವರು ತಿದ್ದುಪಡಿ ವಿಧೇಯಕವನ್ನು ಧ್ವನಿ ಮತಕ್ಕೆ ಹಾಕಿದರು. ವಿಧೇಯಕದ ಪರವಾಗಿ ಏಳು ಮತಗಳು ಚಲಾವಣೆಯಾದರೆ, ವಿಧೇಯಕದ ವಿರುದ್ಧವಾಗಿ 18 ಮತಗಳು ಚಲಾವಣೆಯಾದವು. ಇದರೊಂದಿಗೆ ಸರ್ಕಾರ ಮಂಡಿಸಿದ್ದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕ ಪರಿಷತ್ ನಲ್ಲಿ ತಿರಸ್ಕೃತಗೊಂಡಿದೆ.
ಹಿಂದೂ ಧಾರ್ಮಿಕ ದತ್ತಿ ಮಸೂದೆ ತಿರಸ್ಕಾರಗೊಂಡ ನಂತರ ಪ್ರತಿಪಕ್ಷ ಬಿಜೆಪಿ ಸದಸ್ಯರು ಜೈ ಶ್ರೀರಾಮ ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು ಭಾರತ್ ಮಾತಾ ಕಿ ಜೈ ಹಾಗೂ ಜೈ ಭೀಮ್ ಎಂದು ಘೋಷಣೆ ಕೂಗಿದರು.