ಬೆಳಗಾವಿ: ನಾಮಫಲಕಗಳಲ್ಲಿ 60ರಷ್ಟು ಕನ್ನಡ ಕಡ್ಡಾಯ ನಿಯಮವನ್ನು ಬೆಳಗಾವಿಯಲ್ಲಿ ಜಾರಿಗೊಳಿಸದೇ ಇದ್ದರೆ ಬೆಂಗಳೂರು ಮಾದರಿ ಹೋರಾಟವನ್ನು ಇಲ್ಲಿಯೂ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗಡಿ ವಿವಾದ ಸುಪ್ರೀಂ ಕೋರ್ಟ್ನಲ್ಲಿ ಇರುವುದರಿಂದ ನಾಮಫಲಕದಲ್ಲಿ ಕನ್ನಡ ಕಡ್ಡಾಯಗೊಳಿಸಬಾರದು ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯವರು ಕೋರ್ಟ್ನಲ್ಲಿ ಪ್ರಕರಣ ದಾಖಲಿಸುವುದಾಗಿ ಹೇಳುತ್ತಿದ್ದಾರೆ. ಆದರೆ, ಬೆಳಗಾವಿ ಕಾಪಾಡಿಕೊಳ್ಳಲು ನಮ್ಮ ಹೋರಾಟ ಗಟ್ಟಿಯಾಗಿ ಇರಲಿದೆ. ಕನ್ನಡ ನಾಮಫಲಕಕ್ಕೆ ಎಂಇಎಸ್ ವಿರೋಧ ವ್ಯಕ್ತಪಡಿಸಿದರೆ ಬೆಂಗಳೂರು ಮಾದರಿಯಲ್ಲಿ ಬೆಳಗಾವಿಯಲ್ಲೂ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಕರ್ನಾಟಕ– ಮಹಾರಾಷ್ಟ್ರ ಗಡಿ ವಿಚಾರದಲ್ಲಿ ನಮ್ಮ ಸರ್ಕಾರ ಬಾಯಿ ಮುಚ್ಚಿಕೊಂಡು ಕುಳಿತಿದೆ. ಆದರೆ, ನಾವು ಸುಮ್ಮನೇ ಕುಳಿತುಕೊಳ್ಳುವುದಿಲ್ಲ. ಕನ್ನಡ ಕಡ್ಡಾಯ ಕುರಿತು ಬೆಂಗಳೂರಿನಲ್ಲಿ ಮಾದರಿಯ ಹೋರಾಟವನ್ನು ಬೆಳಗಾವಿಯಲ್ಲೂ ಮಾಡುತ್ತೇವೆ. ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಕಡ್ಡಾಯ ಮಾಡಿದ್ದಕ್ಕೆ ಮಹಾರಾಷ್ಟ್ರ ಏಕೀಕರಣ ಸಮಿತಿ ವಿರೋಧಿಸುತ್ತಿದೆ. ಎಂಇಎಸ್ನವರು ನಾಡದ್ರೋಹಿಗಳು. ಕನ್ನಡ ಕಡ್ಡಾಯ ಮಾಡಿದ್ದನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸುವುದಾಗಿ ಎಂಇಎಸ್ ಹೇಳುತ್ತಿದೆ. ಒಂದು ವೇಳೆ ಅಂಥ ಹೆಜ್ಜೆ ಇಟ್ಟರೆ ಬೆಂಗಳೂರಿನಲ್ಲಿ ಕನ್ನಡ ವಿರೋಧಿಗಳಿಗೆ ಮಾಡಿದ ಶಾಸ್ತಿಯನ್ನೇ ಇಲ್ಲಿಯೂ ಮಾಡುತ್ತೇವೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಯಾರಾದರೂ ಕನ್ನಡ ವಿರೋಧಿಸುವ ಯತ್ನ ಮಾಡಿದರೆ ನೋಡಿಕೊಂಡು ಸುಮ್ಮನೇ ಕುಳಿತುಕೊಳ್ಳುವುದಿಲ್ಲ. ಎಂಇಎಸ್, ಶಿವಸೇನೆ ಆಗಲಿ. ಯಾರು ಬಂದರೂ ನಾವು ಹೋರಾಟಕ್ಕೆ ಸಿದ್ಧ.
ಬೆಂಗಳೂರು ಉದ್ಯಮಿಗಳ ಒತ್ತಡಕ್ಕೆ ಮಣಿದು ಸಿಎಂ ಸಿದ್ದರಾಮಯ್ಯ ನಮ್ಮನ್ನು 14 ದಿನ ಜೈಲಿಗೆ ಕಳಿಸಿದರು. ನಾನು 6ನೇ ಸಲ ಜೈಲಿಗೆ ಹೋಗಿದ್ದೇನೆ. ನನ್ನ ಮೇಲೆ ಇಲ್ಲಸಲ್ಲದ ಪ್ರಕರಣಗಳನ್ನು ದಾಖಲಿಸಿದ್ದಾರೆ. ನಮ್ಮ ಹೋರಾಟದಿಂದ ಸರ್ಕಾರ ಖುಷಿ ಪಡಬೇಕಿತ್ತು. ನನ್ನ ಇಬ್ಬರು ಮಕ್ಕಳು ಹುಟ್ಟುವಾಗಲೂ ನಾನು ಜೈಲಿನಲ್ಲಿದ್ದೆ. ಜೈಲು, ಕೋರ್ಟ್ ನನಗೇನೂ ಹೊಸದಲ್ಲ. ಕನ್ನಡಕ್ಕಾಗಿ ಎಷ್ಟು ಸಲ ಜೈಲು ಸೇರಬೇಕಾಗುತ್ತದೆ ಎಂಬುದೂ ಗೊತ್ತಿಲ್ಲ. ನಮ್ಮ ಧ್ವನಿಯನ್ನು ಹತ್ತಿಕ್ಕುವ ಶಕ್ತಿ ಸಿದ್ದರಾಮಯ್ಯ ಅವರಿಗೆ ಇಲ್ಲ. ಫೆ.28ರ ಬಳಿಕ ಎಲ್ಲ 31 ಜಿಲ್ಲೆಗಳಲ್ಲೂ ಹೋರಾಟ ನಡೆಯಲಿದೆ. ಕನ್ನಡ ನಾಮಫಲಕ ಕಡ್ಡಾಯಕ್ಕೆ ಎಲ್ಲ ಕನ್ನಡಿಗರೂ ಬೆಂಬಲಿಸಿದ್ದಾರೆ. ಬೆಂಗಳೂರು ಮಾತ್ರವಲ್ಲ; ಇಡೀ ರಾಜ್ಯ ಕನ್ನಡಮಯ ಆಗಬೇಕು. ಅದಕ್ಕಾಗಿ ಫೆ.28ರವರೆಗೆ ಸರ್ಕಾರಕ್ಕೆ ಗಡುವು ಕೊಟ್ಟಿದ್ದೇವೆ. ಮಾತಿನಂತೆ ನಡೆದುಕೊಳ್ಳದಿದ್ದರೆ ಮತ್ತೆ ಉಗ್ರ ಹೋರಾಟ ಅನಿವಾರ್ಯ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.