ಬೆಂಗಳೂರು :
ಹಲವಾರು ವರ್ಷಗಳಿಂದ ಗಂಡ- ಹೆಂಡತಿಗೆ ಬೇರೆ ಬೇರೆ ಜಿಲ್ಲೆಗಳಲ್ಲಿ ಡ್ಯೂಟಿ ಹಾಕಿರುವ ಕಾರಣ ಮಕ್ಕಳಾಗುತ್ತಿಲ್ಲ. ಇದರಿಂದಾಗಿಯೇ ದಾಂಪತ್ಯ ವಿಚ್ಛೇದನಗಳೂ ಆಗಿವೆ. ದಯವಿಟ್ಟು ನಮಗೆ ದಯಾಮರಣ ಕೊಡಿ…

ಇಂಥ ಮನವಿ ಪತ್ರ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತಲುಪಿದೆ. ರಾಜ್ಯ ಪೊಲೀಸ್‌ ಇಲಾಖೆಯ ನೊಂದ ಸಿಬ್ಬಂದಿಗಳು ಈ ಪತ್ರ ಬರೆದಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಸಿಗದೇ ಇರುವುದರಿಂದ ಹತಾಶರಾಗಿರುವ ಸಿಬ್ಬಂದಿ ಅಂತಿಮವಾಗಿ ಈ ಹಾದಿ ಹಿಡಿದಿದ್ದಾರೆ. ಪತ್ರ ಬರೆದು, ವರ್ಗಾವಣೆ ಮಾಡಿ ಇಲ್ಲವೇ ದಯಾ ಮರಣ ನೀಡಿ ಎಂದು ಕೋರಿದ್ದಾರೆ.

ರಾಜ್ಯದ ಅನೇಕ ಠಾಣೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯಿಂದ ಈ ಪತ್ರ ಬಂದಿದೆ. ಸಿಎಂ ಸಿದ್ದರಾಮಯ್ಯ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ರವಾನಿಸಲಾಗಿದೆ.

ಒಂದು ಕಡೆ ನೌಕರಿ ಮಾಡುತ್ತಾ ಹೆತ್ತ ಮಕ್ಕಳ ಲಾಲನೆ ಪಾಲನೆ ಮಾಡದೆ ಜನ್ಮ ಕೊಟ್ಟ ಅಪ್ಪ ಅಮ್ಮ ಇವರ ಪೋಷಣೆ ಮಾಡಲಾಗದೆ ಜೀವನ ನಡೆಸುವಂತಾಗಿದೆ. ನಮಗೆ ವರ್ಗಾವಣೆ ಆಗದೆ ಇರುವುದಕ್ಕೆ ದಾಂಪತ್ಯದಲ್ಲಿ ಬಿರುಕು ಬಿಟ್ಟು ಎಷ್ಟೋ ಸಂಸಾರಗಳು ವಿಚ್ಛೇದನ ಪಡೆಯುವ ಹಂತಕ್ಕೆ ತಲುಪಿವೆ. ಕೆಲವು ವಿಚ್ಛೇದನ ಕೊಟ್ಟಾಗಿದೆ.

ಇನ್ನು ಕೆಲವರಲ್ಲಿ ಪತಿ-ಪತ್ನಿ ಯಾರು ಬೇರೆ ಬೇರೆ ಇರುವುದರಿಂದ ಮದುವೆಯಾಗಿ 5 ವರ್ಷ ಕಳೆದರೂ ಇನ್ನು ಮಕ್ಕಳು ಆಗುತ್ತಿಲ್ಲ. ನಮ್ಮದು ಶಿಸ್ತಿನ ಇಲಾಖೆ ಹಾಗಾಗಿ ಬೇರೆ ಇಲಾಖೆಯವರಂತೆ ಪ್ರತಿಭಟನೆ ಮಾಡಲು ಅವಕಾಶ ವಿರುವುದಿಲ್ಲ. ಬೇರೆ ಇಲಾಖೆಯಲ್ಲಿ ಅಂತ‌ರ್ ಜಿಲ್ಲಾ ವರ್ಗಾವಣೆ ನಡೆದಿದೆ. ಆದರೆ ಪೊಲೀಸ್ ಇಲಾಖೆಯಲ್ಲಿ 2021 ರಿಂದ ಯಾವುದೆ ವರ್ಗಾವಣೆ ಆಗಿರುವುದಿಲ್ಲ.

ಆದ ಕಾರಣ ನಮಗೆ ನೆಮ್ಮದಿಯಾಗಿ ಕರ್ತವ್ಯ ನಿರ್ವವಹಿಸಲು ಆಗುತ್ತಿಲ್ಲ. ನಮಗೆ ನೆಮ್ಮದಿ ಅನ್ನೋದು ಹಾಳಾಗಿ ಆರೋಗ್ಯದಲ್ಲಿ ತೊಂದರೆ ಉಂಟಾಗಿವೆ. ಆದ ಕಾರಣ ದಯಾಳುಗಳಾದ ತಾವುಗಳು ನಮಗೆ ಸಾಮೂಹಿಕ ಮರಣ ಪಡೆಯಲು ದಯಾಮಾಡಿ ದಯಾಮರಣ ಕಲ್ಪಿಸಿಕೊಂಡಬೆಕೆಂದು ಸೊಂದ ಮನಸ್ಸಿನಿಂದ ಈ ಮೂಲಕ ಕಳಕಳಿಯಿಂದ ಬೇಡಿಕೊಳ್ಳುತ್ತೆವೆ ಎಂದು ಪೊಲೀಸ್​ ಸಿಬ್ಬಂದಿ ಪತ್ರ ಬರೆದಿದ್ದಾರೆ.