ಬೆಳಗಾವಿ :
ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಅಧಿವೇಶನದ ಸಂದರ್ಭದಲ್ಲಿ ಆತಿಥ್ಯದ ಹೆಸರಲ್ಲಿ ಹಣ ವಸೂಲಿ ನಡೆದಿರುವ ಬಗ್ಗೆ ಸರಕಾರದ ಗಮನ ಸೆಳೆದಿದ್ದು ಇದೀಗ ಇದಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ತನಿಖೆ ನಡೆಸುವಂತೆ ಸಚಿವಾಲಯ ಪತ್ರ ಬರೆದಿದೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಮತ್ತು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ತಿಳಿಸಿದ್ದಾರೆ.

ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಅಧಿವೇಶನ ನಡೆಯುತ್ತಿರುವಾಗ ಸಚಿವರುಗಳು/ಅಧಿಕಾರಿಗಳು ಮತ್ತು ಅವರ ಸಿಬ್ಬಂದಿಗಳ ಆತಿಥ್ಯದ ಹೆಸರಿನಲ್ಲಿ ಜಿಲ್ಲೆಯ ಎಲ್ಲ ಇಲಾಖೆಗಳ ಮುಖ್ಯಸ್ಥರು, ಕೆಳಹಂತದ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿರುವುದನ್ನು ತನಿಖಾ ಸಂಸ್ಥೆಗಳ ಮುಖಾಂತರವಾಗಿ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ದಿನಾಂಕ: ೨೭/೧೨/೨೦೨೨ ಮತ್ತು ದಿನಾಂಕ: ೦೪/೦೧/೨೦೨೪ರಂದು ಗೌರವಾನ್ವಿತ ಸಭಾಪತಿಗಳಿಗೆ ಹಾಗೂ ಸಭಾಧ್ಯಕ್ಷರಿಗೆ ಪತ್ರ ಬರೆಯಲಾಗಿತ್ತು.

ತಮ್ಮಿಂದ ವಸೂಲಿ ಮಾಡುತ್ತಿರುವ ಚಂದಾ ಹಣದ ವಿಷಯವನ್ನು ಯಾರ ಮುಂದಾದರೂ ಬಾಯಿಬಿಟ್ಟರೆ ತಮ್ಮ ನೌಕರಿಗೆ ಕುತ್ತು ಬಂದರೆ ಹೇಗೆ? ಎಂದು ಹೆದರಿಕೊಂಡು ಯಾರ ಮುಂದೆಯೂ ಬಾಯಿ ಬಿಡದ ಇಂತಹ ಅಧಿಕಾರಿ/ಸಿಬ್ಬಂದಿಗಳು ಮಾನಸಿಕವಾಗಿ ನೊಂದು ಹಿಂಸೆ ಅನುಭವಿಸುತ್ತಾ ಬೆಳಗಾವಿಯ ಅಧಿವೇಶನಕ್ಕೆ ಹಿಡಿ ಶಾಪ ಹಾಕುತ್ತಿರುವ ಬಗ್ಗೆ ಮತ್ತು ಈ ಸಮಯದಲ್ಲಿ ಜಿಲ್ಲೆಯಲ್ಲಿರುವ ವೈನ್ ಶಾಪ್, ಬಾರ್ ರೆಸ್ಟಾರೆಂಟ್‌ಗಳಲ್ಲಿಯೂ ಕೂಡಾ ಆತಿಥ್ಯದ ಹೆಸರಲ್ಲಿ ಹಣ ವಸೂಲಿ ಮಾಡುತ್ತಿರುವುದನ್ನು ಹಾಗೂ ಈ ಉದ್ದೇಶಕ್ಕಾಗಿ ಅಧಿವೇಶನ ಸಮಯದಲ್ಲಿ ೧೮೦ಎಮ್.ಎಲ್ ಬಾಟಲ್‌ಗೆ ೩೦ರೂಗಳಷ್ಟು ದರ ಹೆಚ್ಚಳ ಮಾಡುತ್ತಿದ್ದು ಇದರಿಂದಾಗಿ ಸರಾಯಿ ಪ್ರಿಯರು ಸಹ ಸರಕಾರಕ್ಕೆ ಹಿಡಿ ಶಾಪ ಹಾಕುತ್ತಿರುವ ವಿಷಯವನ್ನು ಕೂಡಾ ಈ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.

ಅಧಿಕಾರಿ/ಸಿಬ್ಬಂದಿಗಳು
ಅನುಭವಿಸುತ್ತಿರುವ ಈ ಮಾನಸಿಕ ಹಿಂಸೆಯು ಆಡಳಿತ ಮೇಲೆ ಕೂಡಾ ಪರಿಣಾಮ ಬೀರಬಹುದಾಗಿದೆ. ಅಲ್ಲದೇ ಆತಿಥ್ಯದ ಹೆಸರಲ್ಲಿ ತಾವು ನೀಡಿರುವ ಈ ಹಣವನ್ನು ಕ್ರೋಢಿಕರಿಸಲು ಅಧಿಕಾರಿಗಳು ವಾಮಮಾರ್ಗಗಳನ್ನು ಕೂಡಾ ಅನುಸರಿಸಬಹುದಾಗಿದೆ. ಇದರಿಂದಾಗಿ ಬೆಳಗಾವಿಯ ಅಧಿವೇಶನಕ್ಕೆ ಕಪ್ಪು ಚುಕ್ಕೆ ಬರುವುದಲ್ಲದೇ ಅಧಿವೇಶನದ ಘನತೆ ಗೌರವಗಳಿಗೂ ಜೊತೆಗೆ ಇದರಲ್ಲಿ ಭಾಗವಹಿಸುವ ಸಚಿವರು, ಶಾಸಕರುಗಳ ಘನತೆ ಗೌರವಗಳಿಗೂ ಕೂಡಾ ಚ್ಯುತಿ ಬರಬಹುದು ಎಂಬ ಅಂಶಗಳನ್ನು ಸಹ ಉಭಯ ಸದನಗಳ ಪೀಠಾಧ್ಯಕ್ಷರುಗಳ ಗಮನಕ್ಕೆ ತರಲಾಗಿತ್ತು.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ವಿಧಾನ ಸಭೆಯ ಸಚಿವಾಲಯವು ಈ ಕುರಿತು ಅಗತ್ಯ ಕ್ರಮ ಕೈಕೊಳ್ಳುವಂತೆ ಜಿಲ್ಲಾಧಿಕಾರಿಗಳು ಬೆಳಗಾವಿ ಇವರಿಗೆ ವಿಧಾನ ಸಭೆಯ ಅಧೀನ ಕಾರ್ಯದರ್ಶಿಗಳ ಮೂಲಕ ಪತ್ರ ಬರೆದು ತಿಳಿಸಿರುವರು. ಈ ಪತ್ರದಲ್ಲಿರುವ ಅಂಶಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಯಾವ ರೀತಿ ತನಿಖೆಗೆ ಆದೇಶ ಮಾಡುವರು ಎಂಬುದನ್ನು ಕಾಯ್ದು ನೋಡಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.