ಶಿಮ್ಲಾ :
ರಾಜ್ಯಸಭೆ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಆರು ಶಾಸಕರು ಬಿಜೆಪಿ ಪರವಾಗಿ ಮತ ಚಲಾವಣೆ ಮಾಡಿದ್ದ ಬೆನ್ನಲ್ಲೇ ಅಲ್ಲಿಯ ಕಾಂಗ್ರೆಸ್ ಸರ್ಕಾರಕ್ಕೆ ಎದುರಾಗಬಹುದಾದ ಸವಾಲುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಹರಿಯಾಣದ ಮಾಜಿ ಉಪ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಬುಧವಾರ ಶಿಮ್ಲಾ ತಲುಪಿದ್ದಾರೆ.

ಸರಕಾರದ ಅಸ್ತಿತ್ವಕ್ಕೆ ಎದುರಾಗಬಹುದಾದ ಸವಾಲುಗಳ ಮಾಹಿತಿ ಪಡೆಯಲಿದ್ದಾರೆ. ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸಿದ ಶಾಸಕರು ಬಿಜೆಪಿಯ ನಿಕಟ ಸಂಪರ್ಕದಲ್ಲಿದ್ದಾರೆ. ಈ ನಡುವೆ ಬಿಜೆಪಿ ನಾಯಕರು ಶಾಸಕಾಂಗ ಪಕ್ಷದ ನಾಯಕ ಜೈರಾಮ್ ಠಾಕೂರ್ ನೇತೃತ್ವದಲ್ಲಿ ಇಂದು ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಇದೀಗ ಹೂಡಾ ಮತ್ತು ಶಿವಕುಮಾರ್ ಅವರನ್ನು ಆ ರಾಜ್ಯಕ್ಕೆ ಕಳಿಸಿದೆ. ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಒಟ್ಟು 68 ಸದಸ್ಯ ಬಲ ಇದೆ. ಕಾಂಗ್ರೆಸ್ 40 ಮತ್ತು ಬಿಜೆಪಿ 25 ಶಾಸಕರನ್ನು ಹೊಂದಿವೆ. ಮೂವರು ಪಕ್ಷೇತರ ಶಾಸಕರಿದ್ದಾರೆ. ಆದರೆ ಕಾಂಗ್ರೆಸ್ ಅಭ್ಯರ್ಥಿ, ಅಭಿಷೇಕ ಮನು ಸಿಂಘ್ವಿ ಹಾಗೂ ಬಿಜೆಪಿಯ ಹರ್ಷ್ ಮಹಾಜನ್ ನಡುವೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆರು ಶಾಸಕರು ಹರ್ಷ್ ಮಹಾಜನ್ ಅವರಿಗೆ ಮತ ಚಲಾಯಿಸಿದ್ದರು. ಇದರಿಂದ ಅವರು ಗೆಲುವು ಸಾಧಿಸಿದ್ದರು. ಹೀಗಾಗಿ ಹಿಮಾಚಲ ಪ್ರದೇಶದಲ್ಲಿ ಇದೀಗ ದೊಡ್ಡ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿದೆ.

ಈ ಬಗ್ಗೆ ಪ್ರತಿಪಕ್ಷ ನಾಯಕ ಆ‌ರ್. ಅಶೋಕ ಕಿಡಿಕಾರಿದ್ದಾರೆ. ನೀರಿನ ಬಿಕ್ಕಟ್ಟು ಸೇರಿದಂತೆ ಹಲವು ಸಮಸ್ಯೆಗಳನ್ನು ರಾಜ್ಯದ ಜನತೆ ಎದುರಿಸುತ್ತಿರುವಾಗ, ಅವುಗಳಿಗಿಂತಲೂ ಪಕ್ಷದ ಸಮಸ್ಯೆಯೇ ನಿಮಗೆ ಮುಖ್ಯವಾದರೆ ಡಿಸಿಎಂ ಹುದ್ದೆಗೆ ರಾಜೀನಾಮೆ ನೀಡಿ. ಪೂರ್ಣಾವಧಿಗೆ ಪಕ್ಷದ ಅಧ್ಯಕ್ಷರಾಗಿಯೇ ಮುಂದುವರಿಯಿರಿ ಎಂದು ಅಶೋಕ್ ಆಗ್ರಹಿಸಿದ್ದಾರೆ.

ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಸಂದೇಶ ಪ್ರಕಟಿಸಿರುವ ಅವರು, ತೆಲಂಗಾಣ ಚುನಾವಣೆಗಾಗಿ ರಾಜ್ಯವನ್ನು ಮೈಮರೆತು ಕಾವೇರಿ ನೀರನ್ನ ಬೇಕಾಬಿಟ್ಟಿ ತಮಿಳುನಾಡಿಗೆ ಹರಿಸಿ ರಾಜ್ಯದ ಜಲಾಶಯಗಳನ್ನ ಬರಿದು ಮಾಡಿದ್ದಾಯ್ತು. ಈಗ ಹಿಮಾಚಲ ಪ್ರದೇಶದ ರಾಜಕೀಯ ಉಸಾಬರಿಗಾಗಿ ರಾಜ್ಯ ಬಿಟ್ಟು ಹೋದರೆ ನೀರಿಲ್ಲದೆ ಪರದಾಡುತ್ತಿರುವ ಬೆಂಗಳೂರಿನ ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಯಾರು ಡಿಸಿಎಂ ಡಿಕೆ ಶಿವಕುಮಾ‌ರ್ ಅವರೇ ಎಂದು ಪ್ರಶ್ನಿಸಿದ್ದಾರೆ.