ಬೆಳಗಾವಿ :
ನಾಮಫಲಕದಲ್ಲಿ ಕನ್ನಡ ಕಡ್ಡಾಯವಾಗಿರುವ ಬೆನ್ನಲ್ಲೇ ಬೆಳಗಾವಿಯಲ್ಲಿ ಕನ್ನಡ ಕಡ್ಡಾಯ ಕಾರ್ಯಾಚರಣೆ ಬುಧವಾರದಿಂದ ಶುರುವಾಗಿದೆ.

ಮಹಾನಗರ ಪಾಲಿಕೆ ಆಯುಕ್ತ ಪಿ.ಎನ್.ಲೋಕೇಶ ಅವರ ಸೂಚನೆ ಮೇರೆಗೆ ಪಾಲಿಕೆ ಆರೋಗ್ಯಾಧಿಕಾರಿ ಸಂಜೀವ ನಾಂದ್ರೆ ನೇತೃತ್ವದ ತಂಡ ಬೆಳಗಾವಿಯ ಅಂಗಡಿ-ಮುಂಗಟ್ಟುಗಳಿಗೆ ತೆರಳಿ ಎಚ್ಚರಿಕೆ ರವಾನಿಸಿದರು. ಕನ್ನಡ ನಾಮಫಲಕ ಅಳವಡಿಸದ ಅಂಗಡಿಕಾರರಿಗೆ ಎಚ್ಚರಿಕೆ ನೀಡಿ, ನೂತನವಾಗಿ ಜಾರಿಯಾಗಿರುವ ಕಾನೂನಿಗೆ ಬೆಲೆ ಕೊಟ್ಟು ಕನ್ನಡ ಅನುಷ್ಠಾನಕ್ಕೆ ಮನವಿ ಮಾಡಿದರು.

ರಾಜ್ಯ ಸರ್ಕಾರದ ಆದೇಶದಂತೆ ಅಂಗಡಿ-ಮುಂಗಟ್ಟು, ಮಾಲ್‌ಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ 60% ಕನ್ನಡ ಭಾಷೆ ಬಳಸುವಂತೆ ನೀಡಲಾಗಿದ್ದ ಗಡುವು ಇಂದಿಗೆ ಕೊನೆಗೊಳ್ಳಲಿದೆ. ರಾಜ್ಯದ ವಿವಿಧೆಡೆ ಸಂಪೂರ್ಣವಾಗಿ ನಿಯಮ ಪಾಲನೆಯಾಗದ ಕಾರಣ ಕಡ್ಡಾಯ ಕನ್ನಡ ನಾಮಫಲಕ ಅಳವಡಿಸಲು ಅಂಗಡಿ ಮಾಲೀಕರಿಗೆ ಸರ್ಕಾರ ಕಾಲಾವಕಾಶ ನೀಡಿತ್ತು. ಇನ್ಮುಂದೆ ನಿಯಮ ಪಾಲಿಸದಿದ್ದರೆ ವ್ಯಾಪಾರಸ್ಥರ ಲೈಸನ್ಸ್ ರದ್ದುಪಡಿಸುವ ಕ್ರಮ ಅನುಸರಿಸಬೇಕು ಎಂದು ಕನ್ನಡಪರ ಹೋರಾಟಗಾರರು ಈಗಾಗಲೇ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.