ಶಿವಮೊಗ್ಗ: ತಮ್ಮ ಪುತ್ರ ಕೆ.ಇ ಕಾಂತೇಶ್ ಅವರಿಗೆ ಲೋಕಸಭಾ ಚುನಾವಣೆಯ ಟಿಕೆಟ್ ಕೈತಪ್ಪಿದ್ದರಿಂದ ಆಕ್ರೋಶಿತರಾಗಿರುವ ಬಿಜೆಪಿಯ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಬಂಡಾಯದ ಕಹಳೆ ಊದಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಣೆ ಮಾಡಿದ್ದಾರೆ.
ಕಾಂತೇಶ್ ಅವರಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಬಂಜಾರ ಸಮುದಾಯ ಭವನದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಬಂಬಲಿಗರ ಸಭೆಯಲ್ಲಿ ಕೆ.ಎಸ್. ಈಶ್ವರಪ್ಪ ಈ ಘೋಷಣೆ ಮಾಡಿದರು.
ಸಭೆಯಲ್ಲಿ ಮಾತನಾಡಿದ ಕೆ.ಎಸ್. ಈಶ್ವರಪ್ಪ ಅವರು ಬಿ.ಎಸ್. ಯಡಿಯೂರಪ್ಪ ಮತ್ತು ಕುಟುಂಬದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದರು. ಬಿಜೆಪಿಯಲ್ಲೂ ಈಗ ಕಾಂಗ್ರೆಸ್ ಸಂಸ್ಕೃತಿ ಹೆಚ್ಚಾಗುತ್ತಿದೆ. ಕುಟುಂಬ ರಾಜಕಾರಣ ನಡೆಯುತ್ತಿದೆ. ಬಿಜೆಪಿ ಒಂದು ಕುಟುಂಬದ ಕೈಯಲ್ಲಿ ಇರಬಾರದು ಎನ್ನುವ ಕಾರಣಕ್ಕೆ ನಾನು ಪಕ್ಷೇತರನಾಗಿ ಚುನಾವಣೆಗೆ ನಿಲ್ಲುತ್ತಿದ್ದೇನೆ ಎಂದು ಈಶ್ವರಪ್ಪ ಚುನಾವಣಾ ಸ್ಪರ್ಧೆಯನ್ನು ಘೋಷಿಸಿದರು.
ಬಂಜಾರ ಸಮುದಾಯ ಭವನದಲ್ಲಿ ನಡೆದ ಈ ಸಭೆಯಲ್ಲಿ ನಾನಾ ಸಮುದಾಯದ ಮುಖಂಡರು, ಕೆ.ಇ. ಕಾಂತೇಶ್ ಮತ್ತು ಈಶ್ವರಪ್ಪ ಆಪ್ತರು ಭಾಗಿಯಾಗಿದ್ದರು. ಶಿವಮೊಗ್ಗ ಪಾಲಿಕೆಯ ಮಾಜಿ ಸದಸ್ಯರು ಇದ್ದರು.