ಬೆಳಗಾವಿ : ಬೆಳಗಾವಿ ಬಿಜೆಪಿ ಟಿಕೆಟ್ ಕೊನೆಗೂ ಜಗದೀಶ್ ಶೆಟ್ಟರ್ ಅವರಿಗೆ ಘೋಷಣೆಯಾಗುವ ಮೂಲಕ ಇದುವರೆಗೆ ಇದ್ದ ಎಲ್ಲಾ ಗೊಂದಲಗಳಿಗೆ ಬಿಜೆಪಿ ತೆರೆ ಎಳೆದಿದೆ. ಇನ್ನು ಮುಂದೆ ಅವರು ಪೂರ್ಣವಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಮೂರು ದಶಕಗಳ ಅವರ ಹುಬ್ಬಳ್ಳಿ-ಧಾರವಾಡದ ರಾಜಕೀಯ ಕಾರ್ಯಕ್ಷೇತ್ರ ಬಹುತೇಕ ಇಂದಿನಿಂದ ಕಡಿತವಾಗುತ್ತಿದ್ದು ಜಗದೀಶ ಶೆಟ್ಟರ್ ಗೆದ್ದರೆ ಬೆಳಗಾವಿಯಿಂದಲೇ ಅವರು ತಮ್ಮ ಕಾರ್ಯಕ್ಷೇತ್ರವನ್ನು ಆಯ್ದುಕೊಳ್ಳುವುದು ಖಚಿತ. ಹೀಗಾಗಿ ಇನ್ನು ಮುಂದೆ ಜಗದೀಶ ಶೆಟ್ಟರ್ ಅವರ ಪಾಲಿಗೆ ಬೆಳಗಾವಿಯೇ ಕರ್ಮಭೂಮಿಯಾಗಲಿದೆ. ಶೆಟ್ಟರ್ ಬಹುದೊಡ್ಡ ಅಂತರದಿಂದ ಗೆದ್ದು ಬಂದಲ್ಲಿ, ಕೇಂದ್ರದಲ್ಲಿ ಬಿಜೆಪಿ ಸರಕಾರ ಮತ್ತೆ ಅಧಿಕಾರಕ್ಕೇರಿದಲ್ಲಿ ಹಿರಿತನ, ಅನುಭವದ ಆಧಾರದಲ್ಲಿ ಶೆಟ್ಟರ್ ಅವರಿಗೆ ಕೇಂದ್ರ ಸಚಿವ ಸ್ಥಾನ ಒಲಿದು ಬರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ನನಗೆ ಸಿಗುವ ವಿಶ್ವಾಸ ಇತ್ತು. ಪಕ್ಷದ ವರಿಷ್ಠರು ನನಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಬೆಳಗಾವಿಯಲ್ಲಿ ಕೆಲಸ ಮಾಡಲು ನನಗೆ ಅವಕಾಶ ಕೊಟ್ಟಿದ್ದಾರೆ. ಹೀಗಾಗಿ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಬೆಳಗಾವಿ ಟಿಕೆಟ್ ಘೋಷಣೆ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶೆಟ್ಟರ್, ಬೆಳಗಾವಿಯಲ್ಲಿ ಮತ್ತೊಮ್ಮೆ ಬಿಜೆಪಿ ಗೆಲ್ಲಲಿದೆ. ಸುರೇಶ್ ಅಂಗಡಿ ಅವರ ಕೆಲಸ ಇನ್ನು ಬೆಳಗಾವಿ ಜನರಿಗೆ ನೆನಪಿದೆ. ಅವರ ಪತ್ನಿ ಮಂಗಳಾ ಅಂಗಡಿ ಕೂಡಾ ಉತ್ತಮ ಕೆಲಸ ಮಾಡಿದ್ದಾರೆ. ಬೆಳಗಾವಿಯ ಎಲ್ಲ ನಾಯಕರ ಜೊತೆ ನಾನು ಮಾತನಾಡಿದ್ದೇನೆ. ಯಾವುದೇ ಅಸಮಾಧಾನ ಇಲ್ಲ. ಎಲ್ಲವೂ ಸರಿ ಹೋಗಿದೆ. ಕಳೆದ ಒಂದು ವಾರದಿಂದ ನಾನು ಸ್ಥಳೀಯ ನಾಯಕರ ಜೊತೆ ಮಾತನಾಡಿದ್ದೇನೆ ಎಂದರು.
ಪಕ್ಷದ ನಾಯಕರು ಹೆಚ್ಚಿನ ಕೆಲಸ ಮಾಡಲು ನನಗೆ ಅವಕಾಶ ಕೊಟ್ಟಿದ್ದಾರೆ. ನಾನು ನಾಳೆ ಅಥವಾ ನಾಡಿದ್ದು ಬೆಳಗಾವಿಗೆ ಹೋಗುತ್ತೇನೆ. ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದ ಜಗದೀಶ್ ಶೆಟ್ಟರ್, ನಾನು ವಿರೋಧ ಪಕ್ಷದ ನಾಯಕನಿದ್ದಾಗ ಬೆಳಗಾವಿಯಲ್ಲಿ ತಳಮಟ್ಟದ ಸಂಘಟನೆ ಮಾಡಿದ್ದೇನೆ ಎಂದರು. ಕೇವಲ ಹಣದ ಮೇಲೆ ಚುನಾವಣೆ ನಡೆಯಲ್ಲ. ಇದು ಮೋದಿ ಅವರ ಚುನಾವಣೆ, ದೇಶದ ಚುನಾವಣೆ. ಹೀಗಾಗಿ ನಾನು ಗೆಲ್ಲುತ್ತೇನೆ ಎಂದರು.
ಮಂಗಲಾ ಅಂಗಡಿಗೆ ಫೋನ್ ಮಾಡಿದ ಜಿಪಿ ನಡ್ಡಾ
ಬೆಳಗಾವಿ ಹಾಲಿ ಸಂಸದೆ ಮಂಗಳಾ ಅಂಗಡಿಗೆ ಬಿಜೆಪಿ ಟಿಕೆಟ್ ಕೈತಪ್ಪಿದೆ. ಈ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿದ ಅವರು, ಜೆಪಿ ನಡ್ಡಾ ಅವರು ಪೋನ್ ಮಾಡಿದ್ದರು. ನೀವೆಲ್ಲ ಬೆಂಬಲ ನೀಡಿ ಹೆಚ್ಚಿನ ಮತಗಳಿಂದ ಆಯ್ಕೆ ಎಂದು ಮನವಿ ಮಾಡಿದ್ದಾರೆ. ನಮ್ಮ ಕುಟುಂಬಕ್ಕೆ ಟಿಕೆಟ್ ಬೇಕು ಎಂದು ಕೇಳಿದ್ದೆವು. ನಮ್ಮ ಕುಟುಂಬಕ್ಕೇ ಟಿಕೆಟ್ ಸಿಕ್ಕಿದೆ. ಒಟ್ಟಾಗಿ ಕೆಲಸ ಮಾಡುತ್ತೇವೆ ಅಂತ ಹೇಳಿದ್ದೇನೆ ಎಂದರು.
ಐದು ಬಾರಿ ನಮಗೆ ಕಾರ್ಯಕರ್ತರು ಬಹಳ ಬೆಂಬಲ ನೀಡಿದರು. ಸುರೇಶ್ ಅಂಗಡಿಯವರಿಗೆ, ನನಗೆ ಸಪೋರ್ಟ್ ಮಾಡಿದಂತೆ ಜಗದೀಶ್ ಶೆಟ್ಟರ್ ಅವರಿಗೆ ಬೆಂಬಲ ನೀಡಬೇಕು. ಯಾರಿಗೆ ಟಿಕೆಟ್ ಕೊಟ್ಟರೂ ಒಗ್ಗಾಟ್ಟಾಗಿ ಮಾಡುತ್ತೇವೆ ಅಂತಾ ಹೇಳಿದ್ದೆವು. ಸುರೇಶ್ ಅಂಗಡಿಯವರಿಗೆ ಹೆಚ್ಚಿನ ಲೀಡ್ನಲ್ಲಿ ಆಯ್ಕೆ ಮಾಡಿದ ರೀತಿಯಲ್ಲೇ ಶೆಟ್ಟರ್ ಅವರನ್ನ ಗೆಲ್ಲಿಸಿ ಎಂದು ಮನವಿ ಮಾಡಿದರು.
ಹೈಕಮಾಂಡ್ ನಿರ್ಧಾರದಂತೆ ಶೆಟ್ಟರ್ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಮೋದಿಯವರ ಒಳ್ಳೆಯ ಕೆಲಸ ಬಿಜೆಪಿ ಬೆಳಗಾವಿಯಲ್ಲಿ ಗೆಲ್ಲುತ್ತದೆ. ನಾನು ಕೂಡ ಪ್ರಚಾರಕ್ಕೆ ಹೋಗುತ್ತೇನೆ ಎಂದು ಮಂಗಳಾ ಅಂಗಡಿ ಹೇಳಿದರು. ಅಲ್ಲದೆ, ಹೈಕಮಾಂಡ್ ಬಳಿ ಈಗ ಎನೂ ಬೇಡಿಕೆ ಇಟ್ಟಿಲ್ಲ. ಮುಂದೆ ಮಕ್ಕಳಿಗೆ ಎನಾದರೂ ಆಗುತ್ತದೆ ನೋಡೋಣ ಎಂದರು.