ಜಗದೀಶ್ ಶೆಟ್ಟರ್ ವಿರುದ್ಧ ಸ್ಪರ್ಧೆಗೆ ಆಕ್ಷೇಪಿಸಿದ್ದ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ನಾಯಕರು ಪ್ರಚೋದಿಸಿದ್ದರು. ಇದರಿಂದ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಸುಲಭವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ ನಾಯಕರದ್ದಾಗಿತ್ತು. ಅವರು ಪರೋಕ್ಷವಾಗಿ ಜಗದೀಶ ಶೆಟ್ಟರ್ ಅವರ ವಿರುದ್ಧ ಗೋ ಬ್ಯಾಕ್ ಚಳವಳಿಗೆ ತೆರೆಯ ಹಿಂದಿನಿಂದಲೇ ಬೆಂಬಲ ಸೂಚಿಸಿದ್ದರು. ಇದು ಸಹ ಗುಟ್ಟಾಗಿ ಉಳಿದಿಲ್ಲ. ಬಿಜೆಪಿ ಹೈಕಮಾಂಡಿಗೆ ಇದೀಗ ಸ್ಥಳೀಯ ಬಿಜೆಪಿ ನಾಯಕರ ಒಳಸಂಚು ಗೊತ್ತಾಗಿದೆ. ಇದು ಮುಂದಿನ ದಿನಗಳಲ್ಲಿ ಅವರೆಲ್ಲರ ರಾಜಕೀಯ ಭವಿಷ್ಯದ ಮೇಲೆ ಕರಿನೆರಳು ಆಗುವ ಸಾಧ್ಯತೆ ಇದೆ. ಹೈಕಮಾಂಡ್ ಕೈಗೊಂಡ ನಿರ್ಧಾರವನ್ನು ಕಾರ್ಯಕರ್ತರು ಚಾಚು ತಪ್ಪದೆ ಪಾಲಿಸುತ್ತಾರೆ, ವರಿಷ್ಠರು ಕೊಟ್ಟ ಮಾತಿನಂತೆ ಇದೀಗ ಟಿಕೆಟ್ ಕೊಟ್ಟಿದ್ದಾರೆ. ಅವರ ಸ್ಪರ್ಧೆಗೆ ಇಡೀ ಬೆಳಗಾವಿ ಜಿಲ್ಲೆಯಲ್ಲಿ ಪಕ್ಷದ ನಾಯಕರ ವಿರೋಧ ಇರಲಿಲ್ಲ. ಕೇವಲ ಟಿಕೆಟ್ ಆಕಾಂಕ್ಷಿಗಳಷ್ಟೇ ವಿರೋಧ ವ್ಯಕ್ತಪಡಿಸಿದ್ದರು ಎಂಬುವುದು ಇಲ್ಲಿ ಗಮನಾರ್ಹ. ಟಿಕೆಟ್ ಶೆಟ್ಟರ್ ಗೆ ಕೊಟ್ಟೇ ಕೊಡುತ್ತದೆ ಎಂದು ಗೊತ್ತಿದ್ದರೂ ವಿರೋಧ ವ್ಯಕ್ತಪಡಿಸಿದ್ದ ಬೆಳಗಾವಿ ಜಿಲ್ಲೆಯ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಯಾವ ಮುಖದಿಂದ ಈಗ ಶೆಟ್ಟರ್ ಪರ ಮತಯಾಚಿಸುತ್ತಾರೆ ಎನ್ನುವುದು ಬಿಜೆಪಿಯ ಕಟ್ಟಾ ಕಾರ್ಯಕರ್ತರ ಅನಿಸಿಕೆಯಾಗಿದೆ.

ಬೆಳಗಾವಿ : ಬೆಳಗಾವಿ ಲೋಕಸಭಾ ಮತಕ್ಷೇತ್ರದ ಟಿಕೆಟ್ ಕೊನೆಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಘೋಷಣೆಯಾಗಿದೆ. ಆದರೆ ಅವರಿಗೆ ಟಿಕೆಟ್ ನೀಡದಂತೆ ನಿಯೋಗ ಒಯ್ದಿದ್ದ ಬೆಳಗಾವಿ ಬಿಜೆಪಿ ಆಕಾಂಕ್ಷಿಗಳಿಗೆ ಇನ್ನಿಲ್ಲದಂತೆ ಮುಖಭಂಗವಾಗಿದೆ !

ಜಗದೀಶ್ ಶೆಟ್ಟರ್ ಅವರನ್ನು ಮರಳಿ ಬಿಜೆಪಿಗೆ ಕರೆತರುವ ಸಂದರ್ಭದಲ್ಲಿ ಅವರನ್ನು ಬೆಳಗಾವಿ ಇಲ್ಲವೇ ಹಾವೇರಿ ಲೋಕಸಭಾ ಮತಕ್ಷೇತ್ರದಿಂದ ಟಿಕೆಟ್ ನೀಡುವ ಭರವಸೆ ನೀಡಲಾಗಿತ್ತು. ಈ ಮೂಲಕ ಅವರ ರಾಜಕೀಯ ಮಹತ್ವಾಕಾಂಕ್ಷೆಗೆ ಬಿಜೆಪಿ ಹೈಕಮಾಂಡ್ ಒತ್ತಾಸೆಯಾಗಿ ನಿಂತಿತ್ತು. ಆದರೆ ಈ ಒಳ ಸತ್ಯವನ್ನು ಗ್ರಹಿಸದ ಬೆಳಗಾವಿಯ ಬಿಜೆಪಿ ನಾಯಕರು ಕೊನೆಯ ಕ್ಷಣದಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ತಪ್ಪಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದರು. ಬಿಜೆಪಿ ಆಡಳಿತ ಮಂಡಳಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರ ಬಳಿ ನಿಯೋಗ ಒಯ್ದು ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡದೇ ಸ್ಥಳೀಯ ಬಿಜೆಪಿ ನಾಯಕರಿಗೆ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿದ್ದರು. ಆದರೆ ಬಿಜೆಪಿ ವರಿಷ್ಠರ ಮನ ಗೆಲುವಲ್ಲಿ ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರು ಸೋತು ಗರ್ವಭಂಗ ಅನುಭವಿಸುವಂತಾಗಿದೆ.

ಹಲವಾರು ರೀತಿಯಲ್ಲಿ ಆಕ್ಷೇಪ ಎದುರಿಸಿಯೂ ಜಗದೀಶ್ ಶೆಟ್ಟರ್ ಕೊನೆಗೂ ಟಿಕೆಟ್ ಪಡೆಯುವಲ್ಲಿ ಗೆಲುವು ಸಾಧಿಸಿರುವುದು ಸಾಧಿಸಿರುವುದು ಸ್ಥಳೀಯ ಬಿಜೆಪಿ ನಾಯಕರಿಗೆ ಇದೀಗ ಅರಗಿಸಿಕೊಳ್ಳಲಾಗುತ್ತಿಲ್ಲ. ಈಗ ಯಡಿಯೂರಪ್ಪ ಹಾಗೂ ವರಿಷ್ಠರು ಕಾಂಗ್ರೆಸ್ ನಿಂದ ಬರುವ ಸಂದರ್ಭದಲ್ಲಿ ಶೆಟ್ಟರ್ ಅವರಿಗೆ ನೀಡಿದ್ದ ವಚನವನ್ನು ಪೂರೈಸಿದಂತಾಗಿದೆ.

ಬೆಳಗಾವಿಯ ಸ್ಥಳೀಯ ಬಿಜೆಪಿ ನಾಯಕರು ಜಗದೀಶ್ ಶೆಟ್ಟರ್ ಬೆಂಬಲಕ್ಕೆ ಇದುವರೆಗೂ ಬರಲೇ ಇಲ್ಲ. ಆದರೆ ಯಡಿಯೂರಪ್ಪ ಬಲವಾದ ಒತ್ತಾಸೆಯಾಗಿ ನಿಂತರು. ಜಗದೀಶ್ ಶೆಟ್ಟರ್ ವಿರುದ್ಧ ಗೋ ಬ್ಯಾಕ್ ಎಂದ ಬಿಜೆಪಿ ನಾಯಕರು ಇದೀಗ ಯಾವ ಮುಖ ಹೊತ್ತು ಅವರ ಪರವಾಗಿ ಮತಯಾಚನೆ ಮಾಡುತ್ತಾರೆ ! ಎನ್ನುವುದು ಕಟ್ಟಾ ಕಾರ್ಯಕರ್ತರ ಮನದಾಳದ ಮಾತು. ಕೊನೆಗೂ ಟಿಕೆಟ್ ಪಡೆಯಲು ಯಶಸ್ವಿಯಾಗಿರುವ ಜಗದೀಶ್ ಶೆಟ್ಟರ್ ಅವರು ಇದೀಗ ಬಿಜೆಪಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಮಗೆ ಎದುರಾಗಿರುವ ಸವಾಲನ್ನು ಎದುರಿಸಿಬೇಕಾಗಿದೆ. ಈ ಮೂಲಕ ಬೆಳಗಾವಿಯನ್ನು ತಮ್ಮ ಹಿಡಿತಕ್ಕೆ ಪಡೆಯಲು ಜಗದೀಶ್ ಶೆಟ್ಟರ್ ತಮ್ಮ ಇದುವರೆಗಿನ ರಾಜಕೀಯ ಅನುಭವವನ್ನು ಧಾರೆ ಎರೆಯಬೇಕಾಗಿದೆ.