ದೆಹಲಿ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಪತ್ನಿ ಮಲ್ಲಿಕಾ ನಡ್ಡಾ ಕಾರನ್ನು ದೆಹಲಿಯಲ್ಲಿ ಕಳ್ಳತನ ಮಾಡಲಾಗಿದೆ. ಕದ್ದ ಕಾರನ್ನು ಗುರುಗ್ರಾಮದ ಕಡೆ ಕಳ್ಳರು ತೆಗೆದುಕೊಂಡು ಹೋಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದೆಹಲಿಯ ಗೋವಿಂದಪುರ ಪ್ರದೇಶದಲ್ಲಿ ನಿಲ್ಲಿಸಿದ್ದ ಜೆ. ಪಿ. ನಡ್ಡಾ ಪತ್ನಿಯ Toyota Fortuner ಕಾರನ್ನು ಮಾರ್ಚ್ 19ರಂದು ಮಧ್ಯಾಹ್ನ 3 ರಿಂದ 4 ಗಂಟೆಯ ಅವಧಿಯಲ್ಲಿ ಕಳ್ಳತನ ಮಾಡಲಾಗಿದೆ. ಈ ಕುರಿತು ಕಾರಿನ ಚಾಲಕ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಕಾರು ಹಿಮಾಚಲ ಪ್ರದೇಶದ ನೋಂದಣಿ ಸಂಖ್ಯೆ ಹೊಂದಿತ್ತು. ಜೆ. ಪಿ. ನಡ್ಡಾ ಪತ್ನಿಯ ಕಾರು ಚಾಲಕ ಜೋಗಿಂದರ್ ಸರ್ವೀರ್ಸ್ಗಾಗಿ ಕಾರನ್ನು ತಂದಿದ್ದರು. ಸರ್ವೀಸ್ ಮುಗಿಸಿಕೊಂಡು ವಾಪಸ್ ಆಗುವಾಗ ಊಟಕ್ಕಾಗಿ ಗೋವಿಂದಪುರ ಪ್ರದೇಶದಲ್ಲಿ ನಿಲ್ಲಿಸಿದ್ದರು. ಅಲ್ಲಿಂದಲೇ ಕಾರನ್ನು ಕಳ್ಳತನ ಮಾಡಲಾಗಿದೆ.
ಮಾರ್ಚ್ 19ರಂದು Toyota Fortuner ಕಾರನ್ನು ಕಳ್ಳತನ ಮಾಡಲಾಗಿದೆ ಎಂದು ದೆಹಲಿ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ ಇದುವರೆಗೂ ಕಾರಿನ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ.
ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಗೋವಿಂದಪುರ ಸುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಆಗ ಕಾರು ಗುರುಗ್ರಾಮ ಕಡೆಗೆ ತೆರಳುತ್ತಿರುವ ದೃಶ್ಯಗಳು ಸೆರೆಯಾಗಿವೆ. ಬಳಿಕ ಯಾವುದೇ ಮಾಹಿತಿ ಸಿಕ್ಕಿಲ್ಲ.
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಕಾರು ಹಿಮಾಚಲ ಪ್ರದೇಶದ ನೋಂದಣಿ ಸಂಖ್ಯೆ ಹೊಂದಿದೆ. ಕಾರನ್ನು ಹುಡುಕಲು ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೆ. ಪಿ. ನಡ್ಡಾ ಪತ್ನಿ ಮಲ್ಲಿಕಾ ನಡ್ಡಾ ಕಾರು ಕಳ್ಳತನ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಇದು ಹೈ ಪ್ರೊಫೈಲ್ ಪ್ರಕರಣವಾದ ಕಾರಣ ವಿಶೇಷ ತಂಡವನ್ನು ರಚನೆ ಮಾಡಿಕೊಂಡು ಕಾರು ಚಾಲಕ ಜೋಗಿಂದರ್ ನೀಡಿದ ಮಾಹಿತಿ ಆಧರಿಸಿ ತನಿಖೆ ಕೈಗೊಂಡಿದ್ದಾರೆ.
ಕಾರನ್ನು ದೆಹಲಿ ಗಡಿ ದಾಟಿಸಿ ಬೇರೆ ರಾಜ್ಯಕ್ಕೆ ಸಾಗಣೆ ಮಾಡಿರಬಹುದು ಎಂದು ಪೊಲೀಸರು ಪ್ರಾಥಮಿಕವಾಗಿ ಅಂದಾಜಿಸಿದ್ದಾರೆ. ಅಲ್ಲದೇ ಕಾರು ಸರ್ವೀಸ್ ಮಾಡಿಸಿಕೊಂಡು ಬಂದ ಬಳಿಕ ಕಳ್ಳತನವಾಗಿದೆ ಎಂದರೆ ಸರ್ವೀಸ್ ಸೆಂಟರ್ ಸುತ್ತಲಿನ ಸ್ಥಳೀಯರ ಕೈವಾಡ ಇರಬಹುದು ಎಂದು ಶಂಕಿಸಲಾಗಿದ್ದು, ತನಿಖೆ ಮುಂದುವರೆದಿದೆ.