ಬೆಂಗಳೂರು: ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಮಂಡ್ಯದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಕೊನೆಗೂ ಮುನಿಸು ಮರೆತು ಸಂಸದೆ ಸುಮಲತಾ ಅವರನ್ನು ಭೇಟಿಯಾಗಿದ್ದು, ಊಹಾ-ಪೋಹಗಳಿಗೆ ತೆರೆ ಎಳೆದಿದ್ದಾರೆ. ಬೆಂಗಳೂರಿನಲ್ಲಿರುವ ಅವರ ನಿವಾಸದಲ್ಲಿ ಸುಮಲತಾರನ್ನು ಭೇಟಿಯಾಗಿದ್ದಾರೆ. ಇದೇ ವೇಳೆ ಮಂಡ್ಯ ಕ್ಷೇತ್ರದಲ್ಲಿ ಮೈತ್ರಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿರುವ ಸುಮಲತಾರ ನಿವಾಸಕ್ಕೆ ಭೇಟಿ ನೀಡುತ್ತಿದ್ದಂತೆ ಪುತ್ರ ಅಭಿಷೇಕ್ ಮತ್ತು ಚಲನಚಿತ್ರ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಕುಮಾರಸ್ವಾಮಿ ಅವರನ್ನು ಸ್ವಾಗತಿಸಿದರು. ಬಳಿಕ ಸುಮಲತಾ ಅವರು ಹೆಚ್ಡಿಕೆ ಅವರನ್ನು ಸ್ವಾಗತಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸುಮಲತಾ ಅವರು ಪಕ್ಷೇತರರಾಗಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದರು. ಈ ವೇಳೆ ಕುಮಾರಸ್ವಾಮಿ ಹಾಗೂ ಸುಮಲತಾ ಅವರ ನಡುವೆ ಮಾತಿನ ಸಮರ ನಡೆದಿತ್ತು. ಇದೀಗ ಬದಲಾದ ರಾಜಕೀಯದಲ್ಲಿ ಸುಮಲತಾ ಅವರು ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಬೆಂಬಲಿಸುವಂತೆ ಸುಮಲತಾರೊಂದಿಗೆ ಮಾತುಕತೆ ನಡೆಸಿದ್ದಾರೆ.
ಶನಿವಾರವಷ್ಟೇ ಸಂಸದೆ ಸುಮಲತಾ ಅಂಬರೀಷ್ ಬೆಂಗಳೂರಿನ ನಿವಾಸದಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿದ್ದರು. ಸಭೆಯಲ್ಲಿ ಬೆಂಬಲಿಗರು ಪಕ್ಷೇತರವಾಗಿ ಮಂಡ್ಯದಲ್ಲಿ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡಿದ್ದರು. ಇದಕ್ಕೆ ಸುಮಲತಾ ಅಂಬರೀಶ್ ನಾನು ನಿಮ್ಮ ಆಸೆಗೆ ವಿರುದ್ಧ ಹೋಗಲ್ಲ. ಯೋಚನೆ ಮಾಡಿ ಏ.3ರಂದು ಮಂಡ್ಯದಲ್ಲಿ ಸಭೆ ಮಾಡಿ ನನ್ನ ನಿರ್ಧಾರ ಹೇಳುತ್ತೇನೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಕುಮಾರಸ್ವಾಮಿ ಅವರು ಸುಮಲತಾ ನಿವಾಸಕ್ಕೆ ತೆರಳಿ ತಮ್ಮ ಸ್ಪರ್ಧೆಗೆ ಬೆಂಬಲ ಕೋರಿದ್ದಾರೆ.
ಸುಮಲತಾ ಅಂಬರೀಶ್, ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ರಾಕ್ಲೈನ್ ವೆಂಕಟೇಶ್ ಸಮ್ಮುಖದಲ್ಲಿ ಎಚ್.ಡಿ. ಕುಮಾರಸ್ವಾಮಿ ಎದುರು ಸುಮಾರು 30 ನಿಮಿಷಗಳ ಕಾಲ ಚರ್ಚೆ ಮಾಡಿದ್ದಾರೆ. ನೀವು ಯಾವುದೇ ಕಾರಣಕ್ಕೂ ಈ ಬಾರಿ ಸ್ಪರ್ಧೆ ಮಾಡಬೇಡಿ. ಮಂಡ್ಯದಲ್ಲಿ ನನ್ನನ್ನು ಬೆಂಬಲಿಸಿ, ನಿಮ್ಮ ಪುತ್ರನ ರಾಜಕೀಯ ಭವಿಷ್ಯವನ್ನು ನನಗೆ ಬಿಡಿ. ನಾನು ಸಹ ಅಭಿಷೇಕ್ ಬೆಳವಣಿಗೆಗೆ ಬೆಂಬಲವನ್ನು ಕೊಡುತ್ತೇನೆ. ಮುಂದಿನ ದಿನಗಳಲ್ಲಿ ಅಭಿಷೇಕ್ ಅವರು ಮಂಡ್ಯದಲ್ಲಿ ರಾಜಕಾರಣ ಮಾಡಬೇಕಿದೆ. ಅದಕ್ಕೆಲ್ಲ ತಮ್ಮ ಸಹಕಾರ ಇದ್ದೇ ಇದೆ ಎಂದು ಎಚ್ಡಿಕೆ ಮನವೊಲಿಕೆ ಮಾಡಲು ಪ್ರಯತ್ನಪಟ್ಟಿದ್ದಾರೆ ಎನ್ನಲಾಗಿದೆ.