ನವದೆಹಲಿ : ಕರ್ನಾಟಕ ಸೇರಿದಂತೆ 9 ರಾಜ್ಯಗಳಲ್ಲಿ ಮುಂದಿನ ಹಲವು ದಿನಗಳಲ್ಲಿ ಬಿಸಿಲಿನ ಧಗೆ ಏರಲಿದೆ ಎಂದಿರುವ ಹವಾಮಾನ ಇಲಾಖೆ ಉಷ್ಣ ಮಾರುತದ ಎಚ್ಚರಿಕೆ ನೀಡಿದೆ.
ಏಪ್ರಿಲ್ ಮೊದಲ ವಾರದಿಂದಲೇ ದೇಶದ ದಕ್ಷಿಣ, ಉತ್ತರ, ಕೇಂದ್ರ ಭಾಗಗಳಲ್ಲಿ ಉಷ್ಣ ಗಾಳಿ ಹೆಚ್ಚಲಿದೆ. ಏಪ್ರಿಲ್-ಜೂನ್ ತಿಂಗಳಲ್ಲಿ ಸಾಮನ್ಯಕ್ಕಿಂತ ಹೆಚ್ಚಿನ ತಾಪಮಾನ ಕಂಡು ಬರಲಿದೆ. ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ, ಒಡಿಶಾ, ಮಧ್ಯಪ್ರದೇಶದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ ಇರಲಿದೆ ’ ಎಂದು ಭಾರತೀಯ ಹವಾಮಾನ ಇಲಾಖೆ ಮಹಾ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಮಾಹಿತಿ ನೀಡಿದ್ದಾರೆ.
ಗುಜರಾತ್, ಮಧ್ಯ ಮಹಾರಾಷ್ಟ್ರ, ಉತ್ತರ ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ, ಒಡಿಶಾ, ಉತ್ತರ ಛತ್ತೀಸ್ಗಢ ಮತ್ತು ಆಂಧ್ರಪ್ರದೇಶಗಳು ಅತೀ ಹೆಚ್ಚು ತಾಪಮಾನದ ತೀವ್ರ ಪರಿಣಾಮ ಎದುರಿಸುವ ಪ್ರದೇಶಗಳಲ್ಲಿ ಸೇರಿವೆ. ಮಧ್ಯ ಭಾರತ, ಉತ್ತರದ ಬಯಲು ಪ್ರದೇಶಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಹಾಗೂ ದಕ್ಷಿಣ ಭಾರತದ ಹಲವು ಕಡೆಗಳಲ್ಲಿ ಬಿಸಿಗಾಳಿಯ ಪರಿಣಾಮ ಏಪ್ರಿಲ್ನಲ್ಲಿ ವಾಡಿಕೆಗಿಂತ ಹೆಚ್ಚಾಗಿರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಪ್ರದೇಶಗಳಲ್ಲಿ ಬಿಸಿಗಾಳಿಯ ಪರಿಣಾಮವು ಒಂದರಿಂದ ಮೂರು ದಿನಗಳವರೆಗೆ ಇರುವುದು ವಾಡಿಕೆಯಾಗಿದೆ. ಆದರೆ ಈ ಬಾರಿ ಅದು ಎರಡರಿಂದ ಎಂಟು ದಿನಗಳವರೆಗೆ ಇರಬಹುದು. ಅಲ್ಲದೆ, ಉತ್ತರ ಭಾರತದ ಹಲವೆಡೆ, ಪೂರ್ವ ಹಾಗೂ ಪಶ್ಚಿಮದ ಕರಾವಳಿ ಪ್ರದೇಶಗಳಲ್ಲಿ ತಾಪಮಾನವು ವಾಡಿಕೆಗಿಂತ 2-3 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಿರಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ತಾಪಮಾನ ಹೆಚ್ಚಳದಿಂದ ಮಕ್ಕಳು, ವೃದ್ಧರು, ಅನಾರೋಗ್ಯಪೀಡಿತರು ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದೆ.