ಬೆಳಗಾವಿ : ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ರಾಷ್ಟ್ರಮಟ್ಟದ ಅನೇಕ ನಾಯಕರನ್ನು ಬೆಳಗಾವಿಗೆ ಆಹ್ವಾನಿಸಲಾಗಿದೆ ಎಂದು ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಹೇಳಿದರು.
ಬೆಳಗಾವಿಯಲ್ಲಿ ಚುನಾವಣಾ ಪ್ರಚಾರ ಕಚೇರಿ ಉದ್ಘಾಟಿಸಿ ಅವರು ಮಾತನಾಡಿ, ಏಪ್ರಿಲ್ 17 ರಂದು ಮೆರವಣಿಗೆ ಮೂಲಕ ನಾನು ಅಪಾರ ಅಭಿಮಾನಿಗಳ ಜೊತೆ ತೆರಳಿ ನಾಮಪತ್ರ ಸಲ್ಲಿಸಲಿದ್ದೇವೆ. ಅಪಾರ ಸಂಖ್ಯೆಯಲ್ಲಿ ಜನ ಸೇರಲಿದ್ದು ಅನೇಕ ರಾಷ್ಟ್ರೀಯ ನಾಯಕರನ್ನು ಬೆಳಗಾವಿಗೆ ಬರುವಂತೆ ಮನವಿ ಮಾಡಿಕೊಳ್ಳಲಾಗಿದೆ. ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಸಂಪರ್ಕಿಸಲಾಗಿದ್ದು ಅವರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಬೆಳಗಾವಿ ಅಭಿವೃದ್ಧಿಗೆ ನಾನು ಅಪಾರ ಕೆಲಸ ಮಾಡಿದ್ದೇನೆ. ಮುವತ್ತು ವರ್ಷದ ಕಾಲ ಬೆಳಗಾವಿ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಆದರೆ, ಕಾಂಗ್ರೆಸ್ ನಾಯಕರು ಮಾಡುವ ಆರೋಪದಲ್ಲಿ ಯಾವ ಹುರುಳು ಇಲ್ಲ. ಅವರ ಮಾತುಗಳಲ್ಲಿ ಯಾವುದೇ ಸತ್ಯಾಂಶ ಇಲ್ಲ. ನಾನು ಆಯ್ಕೆಯಾದರೆ ಬೆಳಗಾವಿಯ ಜನಪ್ರತಿನಿಧಿಯಾಗಿ ಕೆಲಸ ಮಾಡುವೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆ, ದೇಶದ ಸುಭದ್ರತೆ ವಿಚಾರವೇ ಈ ಸಲದ ಪ್ರಧಾನ ವಿಷಯವಾಗಿದೆ. ಮುಂದಿನ ಪ್ರಧಾನಿ ಯಾರಾಗಬೇಕು ಎಂಬ ವಿಚಾರದ ಮೇಲೆಯೂ ಚುನಾವಣೆ ಅವಲಂಬಿತವಾಗಿದೆ. ಹೀಗಾಗಿ ಈ ಚುನಾವಣೆಯಲ್ಲಿ ಜಾತಿ ಪ್ರಭಾವ ನಡೆಯದು. ಜಾತಿ ಹೊರತಾದ ದೇಶದ ಭದ್ರತೆ ವಿಚಾರದ ಮೇಲೆ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.