ರೇವಾ: ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಆರು ವರ್ಷದ ಬಾಲಕ ಬೋರ್ವೆಲ್ಗೆ ಬಿದ್ದ ಘಟನೆ ಸಂಭವಿಸಿದೆ.
ಉತ್ತರ ಪ್ರದೇಶದ ಗಡಿ ಸಮೀಪದ ಮಾಣಿಕಾ ಗ್ರಾಮದಲ್ಲಿ ಶುಕ್ರವಾರದಂದು ಈ ಘಟನೆ ಸಂಭವಿಸಿದೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಾಲಕ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು 40 ಅಡಿ ಆಳದಲ್ಲಿ ಸಿಲುಕಿರುವ ಮಗುವನ್ನು ರಕ್ಷಿಸಲು ರಾಜ್ಯ ವಿಪತ್ತು ತುರ್ತು ನಿರ್ವಹಣಾ ಪಡೆ (ಎಸ್ಡಿಇಆರ್ಎಫ್) ತಂಡವನ್ನು ಸೇವೆಗೆ ಕರೆಯಿಸಲಾಗಿದೆ ಎಂದು ರೇವಾ ಜಿಲ್ಲೆಯ ಡಿಸಿ ಪ್ರತಿಭಾ ಪಾಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸದ್ಯ ಪೈಪ್ ಮೂಲಕ ಆಮ್ಲಜನಕವನ್ನು ಒಳಗೆ ಸರಬರಾಜು ಮಾಡಲಾಗುತ್ತಿದೆ ಮತ್ತು ಬಾಲಕನ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಸಿಸಿಟಿವಿ ಕ್ಯಾಮೆರಾವನ್ನು ಕೆಳಗಿಳಿಸಲಾಯಿತು, ಆದರೆ ಕೆಲವು ಅಡಚಣೆಗಳಿಂದ ಕ್ಯಾಮೆರಾ ಬಾಲಕನಿರುವ ಸ್ಥಳಕ್ಕೆ ತಲುಪಲು ಸಾಧ್ಯವಾಗಲಿಲ್ಲ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಸೋಂಕರ್ ಪಿಟಿಐಗೆ ತಿಳಿಸಿದ್ದಾರೆ.
ವಾರಣಾಸಿಯಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ತಂಡವನ್ನು ಕರೆಸಿಕೊಳ್ಳಲಾಗಿದ್ದು, ಶೀಘ್ರದಲ್ಲೇ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆ ನಡೆಸಲಿದೆ ಎಂದು ತಿಳಿದುಬಂದಿದೆ. ಒಂದೆಡೆ ಜಿಸಿಬಿ ಮೂಲಕ ಬಾಲಕನ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದರೆ ಇನ್ನೊಂದೆಡೆ ಸುರಿಯುತ್ತಿರುವ ಮಳೆಯಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡು ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಕರ್ನಾಟಕದ ವಿಜಯಪುರ ಜಿಲ್ಲೆ ಇಂಡಿ ತಾಲೂಕು ಲಚ್ಯಾಣ ಗ್ರಾಮದಲ್ಲಿ ಕೊಳವೆಬಾವಿಗೆ ಬಿದ್ದಿದ್ದ 2 ವರ್ಷದ ಸಾತ್ವಿಕ್ ಸಾವು ಗೆದ್ದು ಬಂದಿದ್ದ. ಇದೀಗ ಆರು ವರ್ಷದ ಈ ಬಾಲಕ ಬದುಕು ಬರಲಿ ಎಂದು ತಂದೆ-ತಾಯಿ ಸೇರಿ ಲಕ್ಷಾಂತರ ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.